ಸಾಂಗ್ಲಿಯ ಶ್ರೀ ಗಣೇಶ ಪಂಚಾಯತನ ಮಂದಿರ
ಕಿರಣ್ ದಿನಕರ್ ಜೋಷಿ
“ಸಾಂಗ್ಲೀಚಾ ಗಣಪತಿ ಆಹೆ ಸೋಣಾಚಾ, ತ್ಯಾಲ ಅವಡೆ ಭರ್ಜರಿ ಶೇಲಾ” (ಸಾಂಗ್ಲಿಯ ಗಣಪತಿ ಚಿನ್ನದಿಂದ ಮಾಡಲ್ಪಟ್ಟಿದ್ದು, ಆತ ಭರ್ಜರಿ ಅಲಂಕಾರದ ಉಡುಗೆ ಬಯಸುತ್ತಾನೆ) ಎಂಬ ಮಾತೇ ಚಾಲ್ತಿಯಲ್ಲಿದೆ. ಸಾಂಗ್ಲಿಯ ಗಣಪತಿ ಅಷ್ಟು ಪ್ರಖ್ಯಾತಿ ಪಡೆದಿದ್ದಾನೆ. ಇಲ್ಲಿನ ಗಣೇಶನ ಮೂರುತಿ ಅಷ್ಟೇ ಆಕರ್ಷಕವೂ, ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನಿಸುವಷ್ಟು ಸುಂದರವಾಗಿಯೂ ಇದೆ. ಮಹಾರಾಷ್ಟ್ರದಲ್ಲಿರುವ ಸಾಂಗ್ಲಿಯ ಗಣಪತಿಯ ದರ್ಶನ ಮಾತ್ರದಿಂದಲೇ ಇಷ್ಟಾರ್ಥ ಈಡೇರುತ್ತವೆ ಎಂಬ ನಂಬಿಕೆ ಇಲ್ಲಿ ಬಲವಾಗಿದೆ.ಇಲ್ಲಿ ಶ್ರೀ ಗಣಪತಿಯ ಪ್ರಾಣ ಪ್ರತಿಷ್ಠೆ ನಡೆದದ್ದು 1844ರಷ್ಟು ಹಿಂದೆ. ಇಲ್ಲಿ ಶಿವ, ಸೂರ್ಯ, ಚಿಂತಾಮಣೇಶ್ವರಿ ಮತ್ತು ಲಕ್ಷ್ಮೀನಾರಾಯಣರ ಆಕರ್ಷಕ ವಿಗ್ರಹಗಳಿವೆ. ದೇಗುಲದ ಮುಖ್ಯದ್ವಾರವು ಕೆಂಪು ಕಲ್ಲಿನಿಂದ ಮಾಡಲಾಗಿದ್ದು, ನೋಡಲು ಸುಂದರವಾಗಿದೆ. ಮಂದಿರದ ಆವರಣದಲ್ಲಿರುವ ಕೆತ್ತನೆ ಕಾರ್ಯಗಳೂ ಆಕರ್ಷಕವಾಗಿವೆ. ಗಣಪತಿ ವಿಗ್ರಹವು ವಜ್ರ ಮುತ್ತು ರತ್ನಗಳಿಂದ ಶೋಭಿಸುತ್ತಿದೆ. ಗಣೇಶನ ಜೊತೆಗೆ ಋದ್ಧಿ-ಸಿದ್ಧಿ ವಿಗ್ರಹಗಳು ಗಮನ ಸೆಳೆಯುತ್ತವೆ.
ದೇಗುಲದ ಬಳಿಯಲ್ಲಿ ಕೃಷ್ಣಾ ನದಿ ಹರಿಯುತ್ತಿದೆ. ಪ್ರತಿವರ್ಷ ಮಳೆಗಾಲದಲ್ಲಿ ಈ ನದಿ ರೋಷಾವೇಷದಿಂದ ಉಕ್ಕಿ ಹರಿದಂತೆ ತೋರುತ್ತದೆ. ಈ ಕಾರಣಕ್ಕೆ, ಪ್ರವಾಹದಿಂದ ಯಾವುದೇ ರೀತಿಯ ಧಕ್ಕೆಯಾಗದಂತೆ ಈ ಮಂದಿರದ ವಿನ್ಯಾಸ ಮಾಡಲಾಗಿದೆ. ದೇಗುಲದ ಮಟ್ಟವನ್ನು ಎತ್ತರಿಸುವ ನಿಟ್ಟಿನಲ್ಲಿ, ಶ್ರೀ ಜ್ಯೋತಿಬಾ ಪರ್ವತದಿಂದ ತರಿಸಲಾದ ಬೃಹತ್ ಶಿಲೆಗಳನ್ನು ಬಳಸಲಾಗಿದೆ. ಈ ಪರ್ವತವು ಕೊಲ್ಹಾಪುರ ಜಿಲ್ಲೆಯಲ್ಲಿದೆ.ಈ ದೇಗುಲದ ಮತ್ತೊಂದು ವಿಶೇಷತೆಯೆಂದರೆ ಇಲ್ಲಿನ ಆನೆ. ದೇವಳದಲ್ಲಿ ಒಂದು ಆನೆ ಇರುವುದು ಇಲ್ಲಿನ ಸಂಪ್ರದಾಯ. ಗಣೇಶನೊಂದಿಗೆ ಈ ಆನೆಯನ್ನೂ ಭಕ್ತರು ಪೂಜಿಸುತ್ತಾರೆ. ಇಲ್ಲಿದ್ದ ‘ಸುಂದರ ಗಜರಾಜ’ ಎಂಬ ಹೆಸರಿನ ಆನೆಯೊಂದು ಅರ್ಚಕರು ಮತ್ತು ಸಾಂಗ್ಲಿ ಜನತೆಯ ಅತ್ಯಂತ ಪ್ರೀತಿಗೆ ಪಾತ್ರವಾಗಿತ್ತು. ಆ ನಂತರ ಬಬ್ಲೂ ಎಂಬ ಆನೆ ಈ ಸ್ಥಾನಕ್ಕೇರಿತು. ಬಬ್ಲೂ ಕೊನೆಯುಸಿರೆಳೆದಿದ್ದಾಗ, ಸುತ್ತಮುತ್ತಲಿನ ಅದೆಷ್ಟೋ ಜನ ಸಾಂಗ್ಲಿಗೆ ಬಂದು ಅಂತಿಮ ನಮನ ಸಲ್ಲಿಸಿದ್ದರು.
ಕಾಕಡ ಆರತಿ, ಭೂಪಾಲಿ, ಗಣಪತ್ಯಥರ್ವಶೀರ್ಷ, ಪ್ರದಕ್ಷಿಣೆ, ನವಗ್ರಹ ಜಪ, ವೇದ ಪಾರಾಯಣ ಮತ್ತಿತರ ಧಾರ್ಮಿಕ ವಿಧಿ ವಿಧಾನಗಳು ಇಲ್ಲಿ ದಿನಂಪ್ರತಿ ನಡೆಯುತ್ತವೆ. ಬೇಡಿ ಬಂದ ಭಕ್ತರಿಗೆ ಇಲ್ಲಿನ ಗಣಪತಿಯು ಎಂದಿಗೂ ಇಲ್ಲ ಎಂದು ಹೇಳಿಲ್ಲವೆಂಬ ನಂಬಿಕೆ ಭಕ್ತರಲ್ಲಿ ಬಲವಾಗಿ ಬೇರೂರಿದೆ.ಪ್ರತಿವರ್ಷ ಗಣೇಶೋತ್ಸವದಂದು ಭಾರೀ ಸಂಭ್ರಮ-ಸಡಗರದ ಮೆರವಣಿಗೆ ನಡೆಯುತ್ತದೆ. ಸಾವಿರಾರು ಭಕ್ತರು ಗಣಪತಿ ಬಪ್ಪಾ ಮೋರಿಯಾ, ಮಂಗಳ ಮೂರ್ತಿ ಮೋರಿಯಾ ಎಂಬ ಜಯಘೋಷದೊಂದಿಗೆ ಭಕ್ತಿ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ.ಗಣೇಶನ ದರ್ಶನ ಮಾಡಿ ಆತನೆದುರು ತಲೆಬಾಗಿದರೆ ಇಷ್ಟಾರ್ಥ ನೆರವೇರಿಸುತ್ತಾನೆ ಎಂಬುದು ಭಕ್ತರ ಅನುಭವವಾಗಿರುವುದರಿಂದ ಹಿಂದೂಗಳಷ್ಟೇ ಅಲ್ಲ, ಅನ್ಯಧರ್ಮೀಯರೂ ಇಲ್ಲಿಗೆ ಬಂದು ಪ್ರಾರ್ಥಿಸುತ್ತಾರೆ.
ಇಲ್ಲಿಗೆ ಹೋಗುವುದು ಹೇಗೆ:
ಸಾಂಗ್ಲಿಯು ಪುಣೆಯಿಂದ 235 ಕಿ.ಮೀ. ಹಾಗೂ ಕೊಲ್ಹಾಪುರದಿಂದ 45 ಕಿ.ಮೀ. ದೂರದಲ್ಲಿರುವ ಗ್ರಾಮ. ಎಲ್ಲ ಪ್ರಮುಖ ಪಟ್ಟಣಗಳಿಂದ ಸಾಂಗ್ಲಿಗೆ ರೈಲು ಸಂಪರ್ಕವಿದೆ. ಮುಂಬಯಿ, ಪುಣೆ ಮತ್ತು ಕೊಲ್ಹಾಪುರಗಳಿಂದ ಬಸ್ ಸಂಪರ್ಕವೂ ಇದೆ. ಸಮೀಪದ ವಿಮಾನ ನಿಲ್ದಾಣವೆಂದರೆ ಕೊಲ್ಹಾಪುರ.