ಐತಿಹಾಸಿಕ ನಗರಿ ಧಾರ್‌ನಲ್ಲಿ ಪ್ರತಿ ವರ್ಷ ವಸಂತ ಪಂಚಮಿ ಅತ್ಯಂತ ವಿಶೇಷವಾದುದು. ಸಾವಿರಾರು ಭಕ್ತರು ಅಂದು ಭೋಜಶಾಲಾದ ಸರಸ್ವತಿ ಮಾತೆಯ ದರ್ಶನಕ್ಕಾಗಿ ಇಲ್ಲಿಗೆ ಸಾಲುಗಟ್ಟಿ ಬರುತ್ತಾರೆ. ವಸಂತ ಪಂಚಮಿಯಂದು ನಡೆಯುವ ಯಜ್ಞ ಯಾಗಾದಿ ಧಾರ್ಮಿಕ ಕಾರ್ಯಗಳು ಈ ಸ್ಥಳದ ಗತ ವೈಭವವನ್ನು ನೆನಪಿಸುತ್ತದೆ.ಭೋಜಶಾಲಾ ಎಂಬುದು ಪಾರಮಾರ ರಾಜಮನೆತನದ ಅದ್ಭುತ ಶಿಲ್ಪಕಲಾ ವೈಭವಕ್ಕೆ ಸಾಕ್ಷಿ. ಈ ಬಾರಿ ವಸಂತ ಪಂಚಮಿ ಫೆ.11ರಂದು ಸೋಮವಾರ ನಡೆಯುತ್ತಿದ್ದು, ಭಕ್ತರು ಭಕ್ತಿ ಶ್ರದ್ಧೆಗಳಿಂದ ಪಾಲ್ಗೊಳ್ಳುತ್ತಿದ್ದಾರೆ.ಇತಿಹಾಸಗಳು ಹೇಳುವ ಪ್ರಕಾರ, ಧಾರ್‌ನ ರಾಜ ಭೋಜನು ಸರಸ್ವತಿಯ ಕಟ್ಟಾ ಆರಾಧಕ. ಆತನ ಆಳ್ವಿಕೆಯ ಕಾಲದಲ್ಲಿ ಸರಸ್ವತಿ ಆರಾಧನೆಗೆ ವಿಶೇಷ ಮಹತ್ವವಿತ್ತು. ಆತನ ರಾಜ್ಯದಲ್ಲಿ ಜನಸಾಮಾನ್ಯರು ಕೂಡ ಸಂಸ್ಕೃತದ ಮೇಲೆ ಹಿಡಿತ ಸಾಧಿಸಿದ್ದರು ಮತ್ತು ಧಾರ್ ಎಂಬುದು ಸಂಸ್ಕೃತ ಅಧ್ಯಯನ, ಕಲೆ ಮತ್ತು ಸಂಸ್ಕೃತಿಯ ನೆಲೆವೀಡಾಗಿತ್ತು.
ಸರಸ್ವತಿಯ ಕೃಪಾಕಟಾಕ್ಷದಿಂದಾಗಿ ರಾಜ ಭೋಜನು ಕೂಡ ಯೋಗ, ಸಾಂಖ್ಯ, ನ್ಯಾಯ, ಜ್ಯೋತಿಷ್ಯ, ವಾಸ್ತು ಶಾಸ್ತ್ರ ಮತ್ತು ರಾಜಕೀಯದ ಪ್ರಕಾಂಡ ಪಂಡಿತನಾಗಿದ್ದನು. ರಾಜ ಭೋಜ ಬರೆದ ಗ್ರಂಥಗಳು ಇಂದಿಗೂ ಪ್ರಯೋಜನಕಾರಿ.
ಕ್ರಿ.ಶ.1000ರಿಂದ 1055ರ ಅವಧಿಯಲ್ಲಿ ರಾಜ ಭೋಜನು ಇಲ್ಲಿ ಆಳ್ವಿಕೆ ನಡೆಸಿದ್ದನೆಂದು ನಂಬಲಾಗಿದೆ. ಆತ ಉನ್ನತ ಅಧ್ಯಯನ ಕೇಂದ್ರವೊಂದನ್ನು ಸ್ಥಾಪಿಸಿದ್ದು, ಬಳಿಕ ಅದು ಭೋಜಶಾಲಾ ಎಂದು ಕರೆಯಲ್ಪಟ್ಟಿತು. ಅಂದಿನ ಕಾಲದ ಸಾಹಿತ್ಯ ಗ್ರಂಥಗಳು ಧಾರ್ ಮತ್ತು ಪ್ರಾಚೀನ ವೈಭವದ ಬಗ್ಗೆ ಸಾರಿ ಹೇಳುತ್ತವೆ.
ಶಿಲ್ಪಕಲಾ ವೈಭವ:
ಭೋಜಶಾಲಾ ನೋಡಲು ಅತ್ಯಂತ ಆಕರ್ಷಕವಾಗಿದೆ. ಪ್ರಾರ್ಥನಾ ಗೃಹ, ಕಂಬಗಳು, ಮೇಲ್ಚಾವಣಿಗಳೆಲ್ಲಾ ಅಂದಿನ ಕಲಾ ನೈಪುಣ್ಯವನ್ನು ಪ್ರದರ್ಶಿಸುತ್ತವೆ. ಅಲ್ಲಿ ಎರಡು ಶಿಲಾಶಾಸನಗಳಿದ್ದು, ಅವುಗಳಲ್ಲಿ ಅಚ್ಚ ಶಾಸ್ತ್ರೀಯ ಸಂಸ್ಕೃತದಲ್ಲಿ ನಾಟಕವೊಂದನ್ನು ಕೆತ್ತಲಾಗಿದೆ.
ಅರ್ಜುನ ವರ್ಮ ದೇವನ ಕಾಲದಲ್ಲಿ ಇವುಗಳನ್ನು ಕೆತ್ತಲಾಗಿದ್ದು, ಈ ನಾಟಕವನ್ನು ಬರೆದವನು ರಾಜಗುರು ಮದನ. ಪ್ರತಿವರ್ಷ ವಸಂತ ಪಂಚಮಿಯಂದು ಈ ನಾಟಕವನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಲಂಡನ್‌ನಲ್ಲಿ ವಾಗ್ದೇವಿ: ಒಂದು ಕಾಲದಲ್ಲಿ ಈ ತಾಣದಲ್ಲಿ ವಾಗ್ದೇವಿ (ಸರಸ್ವತಿ)ಯ ವಿಗ್ರಹವೊಂದಿತ್ತು. ಇದು ಬೃಹದಾಕಾರದಲ್ಲಿದ್ದು, ಆಕರ್ಷಕವಾಗಿತ್ತು. ಅದನ್ನು ಬ್ರಿಟಿಷರು ಇಂಗ್ಲೆಂಡಿಗೆ ಕೊಂಡೊಯ್ದಿದ್ದರು. ಅದೀಗ ಲಂಡನ್‌ನ ವಸ್ತು ಸಂಗ್ರಹಾಲಯದಲ್ಲಿದೆ. ಈಗ ವಸಂತ ಪಂಚಮಿಯಂದು ಭಕ್ತರು ಸರಸ್ವತಿಯ ತೈಲವರ್ಣ ಚಿತ್ರವನ್ನು ಪೂಜಿಸುತ್ತಾರೆ.ಐತಿಹಾಸಿಕ ಹಿನ್ನೆಲೆಯಿರುವುದರಿಂದ ಪ್ರಾಚ್ಯವಸ್ತು ಇಲಾಖೆಯು ಈ ಕ್ಷೇತ್ರವನ್ನು ನೋಡಿಕೊಳ್ಳುತ್ತಿದೆ.
ಕೇಂದ್ರ ಸರಕಾರದ ಆದೇಶದ ಪ್ರಕಾರ, ವರ್ಷದಲ್ಲಿ ಒಂದು ದಿನ, ಅಂದರೆ ವಸಂತ ಪಂಚಮಿಯಂದು ಹಿಂದೂಗಳಿಗೆ ಇಲ್ಲಿ ದೇವಿಯನ್ನು ಪೂಜಿಸಲು ಅವಕಾಶವಿದೆ. ಅಂತೆಯೇ ಪ್ರತೀ ಮಂಗಳವಾರದಂದು ಭಕ್ತರಿಗೆ ಪುಷ್ಪ ಮತ್ತು ಅಕ್ಷತೆ ಅರ್ಚನೆ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ.
ಹೋಗುವುದು ಹೇಗೆ?
ರಸ್ತೆ ಮಾರ್ಗ: ಇಂದೋರ್‌ನಿಂದ 60 ಕಿ.ಮೀ. ಹಾಗೂ ರತ್ಲಾಮ್‌ನಿಂದ 62 ಕಿ.ಮೀ. ದೂರವಿರುವ ಭೋಜಶಾಲಾಕ್ಕೆ ಬಸ್, ಟ್ಯಾಕ್ಸಿ ಸೌಲಭ್ಯಗಳಿವೆ.
ಸಮೀಪದ ರೈಲು ನಿಲ್ದಾಣ: ಇಂದೋರ್ ಹಾಗೂ ರತ್ಲಾಮ್
ಸಮೀಪದ ವಿಮಾನ ನಿಲ್ದಾಣ: ದೇವಿ ಅಹಿಲ್ಯಾ ವಿಮಾನ ನಿಲ್ದಾಣ, ಇಂದೋರ್