ಪ್ರತಿ ವರ್ಷ ಪುಷ್ಯ ಬಹುಳ ಪಂಚಮಿ ತಿಥಿಯಂದು ವಿಶ್ವದ ಎಲ್ಲಾ ಕರ್ನಾಟಕ ಸಂಗೀತ ವಿದ್ವಾಂಸರು ಈ ಪ್ರದೇಶಕ್ಕೆ ಆಗಮಿಸಿ, ಶ್ರೀರಾಮನ ಭಕ್ತ ಶ್ರೇಷ್ಠರೊಬ್ಬರು ಬರೆದು ಹಾಡಿರುವ ಪಂಚ ರತ್ನ ಕೀರ್ತನೆಯನ್ನು ಹಾಡುತ್ತಾರೆ. ಐದು ದಿನಗಳ ಈ ಸಂಗೀತ ಉತ್ಸವವು ತಮಿಳುನಾಡಿನಲ್ಲಿ ಅತ್ಯಂತ ಆಕರ್ಷಣೆಯಾಗಿದೆ.
ತಮಿಳುನಾಡಿನ ತಿರುವೈಯೂರ್ ಪ್ರದೇಶದಲ್ಲಿರುವ ಕಾವೇರಿ ನದಿ ತಟದ ಪ್ರಕೃತಿರಮಣೀಯ ವಾತಾವರಣದಲ್ಲಿದೆ ಈ ಕ್ಷೇತ್ರ. ಪಂಚನದಿಗಳ ಬೀಡಾದ ತಿರುವಯ್ಯೂರು ಕ್ಷೇತ್ರದಲ್ಲಿರುವುದು ಶ್ರೀ ತ್ಯಾಗರಾಜರ ಸಮಾಧಿ ಹಾಗೂ ಅದರ ಬಳಿಯೇ ಇರುವ ಶ್ರೀರಾಮ ಮಂದಿರ.
ಇಲ್ಲಿ ಪ್ರತಿವರ್ಷ, ವಿವಿಧ ಕಡೆಗಳಿಂದ ಆಗಮಿಸುವ ಗಾನಕೋಗಿಲೆಗಳು ತಮ್ಮ ಮಧುರ ಕಂಠದಿಂದ ಪ್ರಸಿದ್ಧ ಕರ್ನಾಟಕ ಸಂಗೀತಗಾರ ಮತ್ತು ರಾಮಭಕ್ತ ತ್ಯಾಗರಾಜ ಸ್ವಾಮಿ ಅವರ ಕೀರ್ತನೆಯನ್ನು ಐದು ದಿನಗಳ ಕಾಲ ನಡೆಯುವ ಸಂಗೀತ ಉತ್ಸವದಲ್ಲಿ ಸುಶ್ರಾವ್ಯವಾಗಿ ಹಾಡುತ್ತಾರೆ.
ತ್ಯಾಗಬ್ರಹ್ಮ ಎಂದು ಗೌರವಯುತವಾಗಿ ಕರೆಯಲ್ಪಡುವ ತ್ಯಾಗರಾಜರು, ತಮ್ಮ ಶಿಷ್ಯರೊಂದಿಗೆ ಇದೇ ಪ್ರದೇಶದಲ್ಲಿ ಸುಮಾರು 24,000 ಶ್ರೀರಾಮನ ಕೃತಿಗಳನ್ನು ರಚಿಸಿ ಹಾಡಿದ್ದರು. ಈ ಮೂಲಕ ಶ್ರೀರಾಮನ ಆಶೀರ್ವಾದದೊಂದಿಗೆ ಮನಃಶಾಂತಿಯನ್ನು ಪಡೆದುಕೊಂಡಿದ್ದರು.
ತ್ಯಾಗರಾಜರು ಹಾಡಿದ ಕೀರ್ತನೆಗಳು ಕರ್ನಾಟಕ ಸಂಗೀತದಲ್ಲಿ ಪರಮೋಚ್ಚವಾಗಿದೆ. ಚೆನ್ನೈನಲ್ಲಿ ನಡೆಯುವ ಎಲ್ಲಾ ಸಂಗೀತ ಕಚೇರಿಗಳಲ್ಲಿ ಪ್ರತಿ ಕರ್ನಾಟಕ ಸಂಗೀತ ಹಾಡುಗಾರರು ಮತ್ತು ಪಕ್ಕವಾದ್ಯ ಕಲಾವಿದರು ಕನಿಷ್ಠ ಮೂರರಿಂದ ನಾಲ್ಕು ತ್ಯಾಗರಾಜರ ಕೀರ್ತನೆಯನ್ನು ಹಾಡಿಯೇ ಹಾಡುತ್ತಾರೆ. ಶ್ರೀ ತ್ಯಾಗರಾಜರ ಕೀರ್ತನೆಯಲ್ಲಿ ಅಷ್ಟೊಂದು ರಾಗವಿದೆ ಮತ್ತು ಭಕ್ತಿಯಿದೆ.
ತಿರುವೈಯೂರ್ ಪ್ರದೇಶದಲ್ಲಿ ಹರಿಯುವ ಕಾವೇರಿ, ಕುಡಮೂರ್ತಿ, ವೆನ್ನಾರು, ವೆಟ್ಟಾರು ಮತ್ತು ವಡವಾರು ಎಂಬ ಪಂಚನದಿಗಳ ತಟದಲ್ಲಿ ತ್ಯಾಗರಾಜರು ವಾಸಿಸುತ್ತಿದ್ದರು. ಜನವರಿ 6, 1767ರಂದು ತಿರುವರೂರಿನಲ್ಲಿ ಜನಿಸಿದ್ದ ತ್ಯಾಗರಾಜರು, ತನ್ನ ಬಾಲ್ಯದಲ್ಲಿಯೇ ಕರ್ನಾಟಕ ಸಂಗೀತವನ್ನು ಅಭ್ಯಸಿಸಿದ್ದರು. ಕರ್ನಾಟಕ ಸಂಗೀತ ವಿದ್ವಾಂಸರಾದ ತ್ಯಾಗರಾಜರು, ಜನಪ್ರಿಯತೆ ಮತ್ತು ಶ್ರೀಮಂತಿಕೆಗಾಗಿ ಸಂಗೀತವನ್ನು ಹಾಡದೆ, ಸಂಗೀತದ ಮೂಲಕ ಭಕ್ತಿಯ ಪ್ರಸಾರ ಮಾಡಿದರು. ತಂಜಾವೂರಿನ ರಾಜನ ಆಮಂತ್ರಣವನ್ನು ತ್ಯಾಗರಾಜರು ತಿರಸ್ಕರಿಸಿದ್ದು, ಇದರಿಂದ ಕುಪಿತಗೊಂಡಿದ್ದ ತ್ಯಾಗರಾಜರ ಸಹೋದರನು ತ್ಯಾಗರಾಜರು ಪೂಜಿಸುತ್ತಿದ್ದ ರಾಮ ಮೂರ್ತಿಯನ್ನು ಎಸೆದಿದ್ದರು. ತ್ಯಾಗರಾಜರು ತೀರ್ಥಯಾತ್ರೆಗೆ ತೆರಳಿ ದಕ್ಷಿಣ ಭಾರತದ ಶ್ರೀರಾಮ ದೇವಾಲಯಗಳಲ್ಲಿ ರಾಮನನ್ನು ಸ್ತುತಿಸುತ್ತಿದ್ದರು. ಮತ್ತು ಶ್ರೀರಾಮನ ಕುರಿತಾಗಿ ಅನೇಕ ಹಾಡುಗಳನ್ನೂ ಹಾಡಿದ್ದರು.
ನಂತರ, ಕೊನೆಯಲ್ಲಿ ತಿರುವೈಯೂರಿನಲ್ಲಿ ನೆಲೆಯೂರಿದ ತ್ಯಾಗರಾಜರು, ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಕಂಡುಬಂದ ಸೀತಾ ಮತ್ತು ಲಕ್ಷ್ಮಣ ಹಾಗೂ ಸಣ್ಣ ಕಂಚಿನ ಶ್ರೀರಾಮನ ಮೂರ್ತಿಯನ್ನು ಪೂಜಿಸುತ್ತಿದ್ದರು. ಯೋಗ ಭಂಗಿಯಲ್ಲಿರುವ ಕಲ್ಲಿನ ಹನುಮಾನ್ ಮೂರ್ತಿಯ ಬಳಿ ಕುಳಿತುಕೊಂಡು ಅನೇಕ ಶ್ರೀರಾಮ ಕೀರ್ತನೆಗಳನ್ನು ತ್ಯಾಗರಾಜರು ಹಾಡುತ್ತಿದ್ದರು. ಕರ್ನಾಟಕ ಸಂಗೀತದಲ್ಲಿನ ಎಲ್ಲಾ ಕೀರ್ತನೆಗಳಲ್ಲಿ ತ್ಯಾಗರಾಜರು ರಚಿಸಿದ ಪಂಚರತ್ನ ಕೀರ್ತನೆಗಳಿಗೆ ಅತಿ ಹೆಚ್ಚಿನ ಪ್ರಾಶಸ್ತ್ಯವಿದೆ.
ತನ್ನ 80ನೆಯ ವಯಸ್ಸಿನಲ್ಲಿ ತ್ಯಾಗರಾಜರು ಶ್ರೀರಾಮನ ಪಾದವನ್ನು ಸೇರಿದರು. ತ್ಯಾಗರಾಜರನ್ನು ಸಮಾಧಿ ಮಾಡಿರುವ ಸಮೀಪದಲ್ಲಿಯೇ ಸಣ್ಣ ಶ್ರೀರಾಮ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಈ ದೇವಸ್ಥಾನದಲ್ಲಿ ತ್ಯಾಗರಾಜರಿಂದ ಪೂಜಿತಗೊಂಡಿದ್ದ ರಾಮ, ಸೀತಾ ಮತ್ತು ಲಕ್ಷ್ಮಣ ಮೂರ್ತಿಗಳೂ ಇವೆ. ದೇವಾಲಯದ ಒಳಗೋಡೆಗಳಲ್ಲಿ ತ್ಯಾಗರಾಜರ ಕೀರ್ತನೆಗಳನ್ನು ಕಲ್ಲಿನಲ್ಲಿ ಕೆತ್ತಲಾಗಿದೆ.
ತ್ಯಾಗರಾಜರ ಜನ್ಮದಿನವಾದ ಜನವರಿ ತಿಂಗಳ ಪುಷ್ಯ ಬಹುಳ ಪಂಚಮಿ ತಿಥಿಯಂದು ವಿಶ್ವದ ಎಲ್ಲಾ ಕರ್ನಾಟಕ ಸಂಗೀತ ವಿದ್ವಾಂಸರು ಈ ದೇವಾಲಯಕ್ಕೆ ಆಗಮಿಸಿ ಒಟ್ಟಾಗಿ ಪಂಚರತ್ನ ಕೀರ್ತನೆಗಳನ್ನು ಹಾಡುತ್ತಾರೆ.
ಈ ಮಂದಿರವನ್ನು ಸಂದರ್ಶಿಸಿದರೆ, ಭಕ್ತಿ ಮತ್ತು ಸಂಗೀತವೇ ಮೇಳೈಸಿರುವ ವಿಶೇಷವಾದ ಲೋಕಕ್ಕೆ ಪ್ರವೇಶಿಸಿದಂತಾಗುತ್ತದೆ. ತನ್ನದೇ ಆದ ಕೀರ್ತನೆಗಳ ಮೂಲಕ ಕರ್ನಾಟಕ ಸಂಗೀತದಲ್ಲಿ ವೈವಿಧ್ಯಮಯ ರಾಗಗಳನ್ನು ಬಳಸಿ ಶ್ರೀರಾಮನನ್ನು ಸ್ತುತಿಸುವ ಮೂಲಕ ಸಂಗೀತ ಭಕ್ತಿಯ ಸಂಪ್ರದಾಯವನ್ನು ನಿರ್ಮಿಸಿದವರು ಶ್ರೀ ತ್ಯಾಗರಾಜರು. ಇದೇ ರೀತಿ, ಉತ್ತರ ಭಾರತದಲ್ಲಿ ಶ್ರೀ ಚೈತನ್ಯ ಅವರು ಪ್ರಸಿದ್ಧ ಕೃಷ್ಣ ಭಜನ್‌ಗಳ ಮೂಲಕ ತಮ್ಮದೇ ಭಕ್ತಿಯ ಸುಧೆ ಹರಿಸಿದ್ದರು.
ಹೋಗುವ ವಿಧಾನ:
ರೈಲು ಮಾರ್ಗ: ತಂಜಾವೂರು ಇಲ್ಲಿಗೆ ಸಮೀಪದ ರೈಲು ನಿಲ್ದಾಣ. ಚೆನ್ನೈನಿಂದ ತಂಜಾವೂರಿಗೆ ರೈಲಿನಲ್ಲಿ ಪ್ರಯಾಣಿಸಿ, ನಂತರ ವಾಹನದಲ್ಲಿ ತಿರುವೈಯೂರಿಗೆ ಪ್ರಯಾಣಿಸಬಹುದು.
ಬಸ್ ಮಾರ್ಗ: ಚೆನ್ನೈನಿಂದ ತಂಜಾವೂರಿಗೆ ಬೇಕಾದಷ್ಟು ಬಸ್‌ಗಳಿವೆ. ತಂಜಾವೂರಿನಿಂದ ತಿರುವೈಯೂರಿಗೂ ಸಾಕಷ್ಟು ಬಸ್‌ಗಳು ದೊರೆಯುತ್ತವೆ.
ವಾಯುಮಾರ್ಗ: ತಿರುಚಿಯು ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣ. ತಿರುಚಿಯಿಂದ ಇಲ್ಲಿಗೆ ಒಂದೂವರೆಗಂಟೆ ಪ್ರಯಾಣವಿದೆ.