ಶೆಂಡುರ್ಣಿಯ ತ್ರಿವಿಕ್ರಮ ಮಂದಿರ
ಸಂದೀಪ್ ಪಾರೋಲ್ಕರ್ಈ ಬಾರಿಯ ಧಾರ್ಮಿಕ ಯಾತ್ರೆ ಮಹಾರಾಷ್ಟ್ರದ ತ್ರಿವಿಕ್ರಮ ಮಂದಿರಕ್ಕೆ. ರಾಜ್ಯದ ಖಾಂದೇಶ್ ಪ್ರದೇಶದ ಶೆಂಡುರ್ಣಿ ಎಂಬ ಗ್ರಾಮದಲ್ಲಿದೆ 1744ರಲ್ಲಿ ಕಟ್ಟಿಸಲಾಗಿರುವ ಈ ಮಂದಿರ. ಇದನ್ನು ನಿರ್ಮಿಸಿದವರು ವಿಖ್ಯಾತ ಸಂಚ ಶ್ರೀ ಕಡೋಗಿ ಮಹಾರಾಜ್ ಅವರು.ಮಂದಿರದ ಈಗಿನ ಮುಖ್ಯಸ್ಥ ಶಾಂತಾರಾಮ್ ಮಹಾರಾಜ್ ಭಗತ್ ಹೇಳುವಂತೆ, ಪ್ರತಿ ವರ್ಷವೂ ಪಂಡರಾಪುರದ ವಿಠಲನನ್ನು ಭಜಿಸಲು, ಅರ್ಚಿಸಲು ಕಡೋಗಿ ಮಹಾರಾಜ್ ಅವರು ಪಾದಯಾತ್ರೆಯಲ್ಲೇ ತೆರಳುತ್ತಿದ್ದರು. ಅದೊಂದು ದಿನ ಅವರು ಪಂಡರಾಪುರಕ್ಕೆ ತೆರಳುವ ಹಾದಿಯಲ್ಲಿ, ಅವರೆದುರು ಪ್ರತ್ಯಕ್ಷರಾದ ದೇವರು, ತಾನು ಆ ಹಳ್ಳಿಯಲ್ಲಿ ಹರಿಯುವ ನದಿಯೊಳಗಿನ ಭೂಮಿಯಲ್ಲಿ ನಿದ್ರಿಸುತ್ತಿರುವುದಾಗಿ ಸಂದೇಶ ನೀಡಿದರು. ಅದು ಕಾರ್ತಿಕ ಶುದ್ಧ ಏಕಾದಶಿ ದಿನ. ತನ್ನ ವಾಹನ ವರಾಹ ಜೊತೆಗಿರುವ ತನ್ನನ್ನು ಅಗೆದು ಮೇಲಕ್ಕೆತ್ತುವಂತೆ ಮತ್ತು ಎಲ್ಲ ವಿಧಿ ವಿಧಾನಗಳ ಸಹಿತವಾಗಿ ತನ್ನ ವಿಗ್ರಹವನ್ನು ಪ್ರತಿಷ್ಠಾಪಿಸುವಂತೆ ದೇವರು ಅಭಯ ನೀಡಿದರು.
ತಕ್ಷಣವೇ ತಮ್ಮ ಗ್ರಾಮಕ್ಕೆ ಮರಳಿ ಬಂದ ಕಡೋಗಿ ಮಹಾರಾಜ್, ಈ ವಿಷಯದ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿದರು. ಆದರೆ ಯಾರೂ ಅವರನ್ನು ನಂಬಲಿಲ್ಲ. ಇದಕ್ಕೆ ಬದಲಾಗಿ, ಅವರೆಲ್ಲರೂ ಟೀಕಿಸತೊಡಗಿದರು, ಹುಚ್ಚ ಎಂದು ವ್ಯಂಗ್ಯವಾಡಿದರು. ಈ ಕಾರಣದಿಂದ, ಮಹಾರಾಜ್ ಅವರು ತಾವೇ ಭೂಮಿಯನ್ನು ಅಗೆಯತೊಡಗಿದರು. ಒಂದಷ್ಟು ಅಗೆದಾಗ, ವರಾಹನ ಮೂರ್ತಿ ದೊರೆಯಿತು. ಹಳ್ಳಿಗರು ಇದನ್ನು ನೋಡಿದರು. ಆಶ್ಚರ್ಯಚಕಿತರಾದರು. ತಮ್ಮ ತಪ್ಪಿನ ಅರಿವಾಯಿತವರಿಗೆ. ನಂತರ ಮಹಾರಾಜ್‌ಗೆ ಕೆಲಸ ಮುಂದುವರಿಸಲು ಅವರೆಲ್ಲರೂ ಸಹಕಾರ ನೀಡಿದರು. 25 ಅಡಿ ಆಳ ಅಗೆದಾಗ, ವಿಠಲ ದೇವರ ಮೂರ್ತಿ ಲಭಿಸಿತು. ಅದು ಸುಮಾರು ನಾಲ್ಕೂವರೆ ಅಡಿ ಎತ್ತರದ ಆಕರ್ಷಕ, ಭವ್ಯ ಮೂರ್ತಿಯಾಗಿತ್ತು. ನಂತರ, ಆ ಮೂರ್ತಿಗೆ ಮಂದಿರ ಕಟ್ಟಿ, ದೇವಸ್ಥಾನದಲ್ಲಿ ವಿಧಿ ವಿಧಾನಗಳ ಪ್ರಕಾರ ಪ್ರತಿಷ್ಠಾಪಿಸಲಾಯಿತು.ಜನರು ಭೂಮಿಯನ್ನು ಅಗೆಯುತ್ತಿದ್ದಾಗ, ಗುದ್ದಲಿಯು ವಿಠಲನ ಮೂರ್ತಿಯ ಮೂಗಿಗೆ ಆಕಸ್ಮಿಕವಾಗಿ ತಗುಲಿತು ಮತ್ತು ವಿಗ್ರಹದಿಂದ ರಕ್ತ ಒಸರಲಾರಂಭಿಸಿತು ಎನ್ನಲಾಗುತ್ತಿದೆ. ಆ ಕಾಲದಲ್ಲಿ ಇದೊಂದು ದೊಡ್ಡ ಪವಾಡವೇ ಆಗಿತ್ತು. ಈ ವಿಗ್ರಹದ ವಿಶೇಷತೆಯೆಂದರೆ, ವಿಷ್ಣು, ವಿಠಲ ಮತ್ತು ಬಾಲಾಜಿ - ಹೀಗೆ ಮೂರು ದೇವರನ್ನೂ ಈ ವಿಗ್ರಹವು ಹೋಲುತ್ತದೆ. ಈ ಕಾರಣಕ್ಕಾಗಿಯೇ ಈ ದೇವರಿಗೆ ತ್ರಿವಿಕ್ರಮ ಎಂಬ ಹೆಸರು ಬಂತು. ಈ ವಿಗ್ರಹದ ಭಾವಾಭಿವ್ಯಕ್ತಿಯು ಕೂಡ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ ಎಂಬ ನಂಬಿಕೆ ಇದೆ. ತ್ರಿವಿಕ್ರಮ ಮತ್ತು ಅವನ ವಾಹನ ವರಾಹವನ್ನು ಪೂಜಿಸುವುದರಿಂದ ತಮ್ಮೆಲ್ಲಾ ಕಷ್ಟ ನಷ್ಟಗಳು ದೂರವಾಗುತ್ತವೆ ಎಂಬುದು ಭಕ್ತಕೋಟಿಯ ನಂಬಿಕೆ.
ಸಂತ ಕಡೋಗಿ ಮಹಾರಾಜ್ ಅವರು ತ್ರಿವಿಕ್ರಮನ ರಥ ಯಾತ್ರೆಯನ್ನು ಕೂಡ ಕಾರ್ತಿಕ ಶುದ್ಧ ಏಕಾದಶಿಯಂದೇ ಆರಂಭಿಸಿದ್ದರು. ಈ ಪರಂಪರೆಯು ಈಗಲೂ ಮುಂದುವರಿದಿದೆ. 25 ಅಡಿ ಎತ್ತರದ ರಥದಲ್ಲಿ ತ್ರಿವಿಕ್ರಮನ ರಥ ಯಾತ್ರೆ ಪ್ರತಿವರ್ಷವೂ ಈ ತಿಥಿಯಂದು ನಡೆಯುತ್ತಿರುತ್ತದೆ. 263 ವರ್ಷಗಳ ಹಿಂದೆ ಇದರ ನಿರ್ಮಾಣವಾಗಿದ್ದು, ಮಹಾರಾಷ್ಟ್ರದಲ್ಲಿ ಚಲಾವಣೆ ಸ್ಥಿತಿಯಲ್ಲಿರುವ ಅತ್ಯಂತ ಹಳೆಯ ರಥ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಈ ರಥ ಯಾತ್ರೆಯಲ್ಲಿ ಪ್ರತಿವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪುನೀತರಾಗುತ್ತಾರೆ.ಇಲ್ಲಿಗೆ ಹೋಗುವುದು ಹೇಗೆ?ರಸ್ತೆ ಮಾರ್ಗ: ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಜನ್ನೇರ್ ಪಟ್ಟಣದಿಂದ ತ್ರಿವಿಕ್ರಮ ಮಂದಿರಕ್ಕೆ ಕೇವಲ 16 ಕಿ.ಮೀ. ದೂರ.
ರೈಲು ಮಾರ್ಗ: ಸೆಂಟ್ರಲ್ ರೈಲ್ವೇಸ್‌ನ ಮುಖ್ಯ ನಿಲ್ದಾಣವಾಗಿದೆ ಜಲಗಾಂವ್. ಇಲ್ಲಿಂದ ಶೆಂಡುರ್ಣಿ ಗ್ರಾಮಕ್ಕೆ 45 ಕಿ.ಮೀ. ದೂರ.
ವಾಯು ಮಾರ್ಗ: ಸಮೀಪದ ವಿಮಾನ ನಿಲ್ದಾಣವೆಂದರೆ ಔರಂಗಾಬಾದ್. ಶೆಂಡುರ್ಣಿಯು ಇಲ್ಲಿಂದ 125 ಕಿ.ಮೀ. ದೂರದಲ್ಲಿದೆ.