ಶ್ರೀ ಸಾಯಿಬಾಬಾ ಭಾರತದಲ್ಲೇ ಎಂದೂ ಕಂಡಿರದ ಮಹಾನ್ ಸಂತರಲ್ಲಿ ಒಬ್ಬರೆಂದು ಹೆಸರುಗಳಿಸಿದ್ದು, ಅತ್ಯದ್ಭುತ ಶಕ್ತಿಗಳಿಂದ ಕೂಡಿ ದೇವರ ಅವತಾರ ಎಂದು ಪೂಜಿಸಲ್ಪಡುತ್ತಾರೆ.(ಸಾಯಿ ಎಂದರೆ ಸಾಕ್ಷಾತ್ ಈಶ್ವರ ಎಂದೇ ಅರ್ಥ). ಈ ನಿಗೂಢ ಫಕೀರ ಶಿರ್ದಿಯಲ್ಲಿ ಯುವಕನಾಗಿ ಪ್ರತ್ಯಕ್ಷನಾಗಿ ಜೀವಮಾನವಿಡೀ ಅಲ್ಲೆ ನೆಲೆಸಿದರು.
ಅವರನ್ನು ಭೇಟಿ ಮಾಡಿದ ಭಕ್ತಾದಿಗಳ ಜೀವನವನ್ನೇ ಪರಿವರ್ತಿಸಿದರು. 1918ರಲ್ಲಿ ಅವರು ಸಮಾಧಿಯಾದ ನಂತರವೂ ಅವರ ಪ್ರೀತಿಯಿಂದ ಪುಳಕಿತರಾದ, ಸಂಕಷ್ಟದ ಸಂದರ್ಭದಲ್ಲಿ ಅವರನ್ನು ಪ್ರಾರ್ಥಿಸಿ ಅವರ ಆಶೀರ್ವಾದಕ್ಕಾಗಿ ಹಂಬಲಿಸುವ ಜನರ ಜೀವನಕ್ಕೆ ಬೆಳಕು ನೀಡುವ ಕ್ರಿಯೆ ಮುಂದುವರಿಸಿದರು.
ತಮ್ಮ ಉದ್ದೇಶ ಯಾವುದೇ ಭೇದಭಾವವಿಲ್ಲದೇ ಆಶೀರ್ವಾದ ನೀಡುವುದಾಗಿದೆ ಎಂದು ಬಾಬಾ ಹೇಳಿದ್ದರು. ರೋಗಿಗಳನ್ನು ಗುಣಪಡಿಸುವ, ಜೀವವುಳಿಸುವ, ನಿರ್ಗತಿಕರನ್ನು ರಕ್ಷಿಸುವ, ಅವಘಡಗಳನ್ನು ನಿವಾರಿಸುವ, ಮಕ್ಕಳನ್ನು ಕರುಣಿಸುವ, ಆರ್ಥಿಕ ಲಾಭ ನೀಡುವ, ಜನರಲ್ಲಿ ಪರಸ್ಪರ ಸಾಮರಸ್ಯ ಕಲ್ಪಿಸುವ, ಅಂತಿಮೋಪಾಯವಾಗಿ ತಮಗೆ ಮೊರೆಹೋದವರಿಗೆ ಧಾರ್ಮಿಕ ವಿಕಾಸ ಮತ್ತು ಪರಿವರ್ತನೆ ಉಂಟುಮಾಡುವ ಅನೇಕ ವಿಧಾನಗಳ ಮೂಲಕ ಅವನ್ನು ಬಾಬಾ ರುಜುವಾತು ಮಾಡಿದ್ದರು.ಬಾಬಾ ಅವರ ಸಮಕಾಲೀನ ಭಕ್ತರೊಬ್ಬರು “ತಮ್ಮ ಪ್ರತಿಯೊಂದು ನುಡಿ ಮತ್ತು ನಡೆಯಿಂದ ಸಾಧಕರ ಮಾರ್ಗಕ್ಕೆ ಬೆಳಕು ತೋರುವ ಮಹಾನ್ ಸಾಕಾರಮೂರ್ತಿ” ಎಂದು ಬಾಬಾರನ್ನು ಬಣ್ಣಿಸಿದ್ದರು. ಅವರ ಭಕ್ತರಿಗೆ ಬಾಬಾ ದೇವರ ಅಪರಾವತಾರ. ಅದೊಂದು ಕಾಲ್ಪನಿಕವಲ್ಲದ ಅನುಭವದ ವಿಷಯ.