Select Your Language

Notifications

webdunia
webdunia
webdunia
webdunia

ವಡೋದರ ಕಾಶಿ ವಿಶ್ವನಾಥ ಮಂದಿರ

ವಡೋದರ ಕಾಶಿ ವಿಶ್ವನಾಥ ಮಂದಿರ
ಭೀಕಾ ಶರ್ಮಾ

ಈ ಬಾರಿಯ ನಮ್ಮ ಧಾರ್ಮಿಕ ಯಾತ್ರೆ ಗುಜರಾತ್‌ನ ವಡೋದರದಲ್ಲಿರುವ ಕಾಶಿ ವಿಶ್ವನಾಥ ಮಂದಿರಕ್ಕೆ. ಸಯಾಜಿ ರಾವ್ ಗಾಯಕ್ವಾಡ್ ಆಡಳಿತಾವಧಿಯಲ್ಲಿ ಸುಮಾರು 120 ವರ್ಷಗಳ ಹಿಂದೆ ಈ ಐತಿಹಾಸಿಕ ಮಂದಿರವನ್ನು ನಿರ್ಮಿಸಲಾಯಿತು.

ಕಾಲಾನಂತರದಲ್ಲಿ, ಈ ಮಂದಿರವನ್ನು ಸ್ವಾಮಿ ವಲ್ಲಭ ರಾವ್‌ಜಿಗೆ ಹಸ್ತಾಂತರಿಸಲಾಯಿತು. ಅವರ ಬಳಿಕ ಸ್ವಾಮಿ ಚಿದಾನಂದ ಸರಸ್ವತಿಯವರ ಅಧೀನಕ್ಕೆ ಬಂದ ಈ ಮಂದಿರವನ್ನು ಅವರು 1948ರಲ್ಲಿ ಜೀರ್ಣೋದ್ಧಾರ ಮಾಡಿದರು. ಅವರು ದೈವಾಧೀನರಾದನಂತರ ಮಂದಿರವನ್ನು ಟ್ರಸ್ಟ್ ಒಂದಕ್ಕೆ ಹಸ್ತಾಂತರಿಸಲಾಯಿತು.

ಪಟ್ಟಣದ ಗಾಯಕ್ವಾಡ್ ಅರಮನೆಯ ಎದುರು ಈ ಕಾಶಿ ವಿಶ್ವನಾಥನ ಭವ್ಯ ಮಂದಿರವಿದೆ. ಪ್ರವೇಶ ದ್ವಾರವಂತೂ ಕೆತ್ತನೆಗಳಿಂದಾಗಿ ತುಂಬಾ ಗಮನ ಸೆಳೆಯುತ್ತದೆ. ದ್ವಾರದ ಎದುರು ಕರಿ ಶಿಲೆಯಲ್ಲಿ ಕೆತ್ತಲಾದ ನಂದಿಯ ವಿಗ್ರಹವಂತೂ ನೋಡಲು ಆಕರ್ಷಕವಾಗಿದೆ. ನಂದಿಯ ಸಮೀಪದಲ್ಲೇ ಕೂರ್ಮದ ಪ್ರತಿಮೆ ಕೂಡ ಇದೆ. ಇದು ಸಮೃದ್ಧಿ ಮತ್ತು ಅದೃಷ್ಟದ ಸಂಕೇತ. ನಂದಿಯ ಎರಡೂ ಪಾರ್ಶ್ವಗಳ ದ್ವಾರದ ಮೂಲೆಗಳಲ್ಲಿ ಸ್ವಾಮಿ ವಲ್ಲಭ ರಾವ್ ಹಾಗೂ ಸ್ವಾಮಿ ಚಿದಾನಂದಜಿ ಅವರ ಪ್ರತಿಮೆಗಳಿವೆ.
WD


ಮಂದಿರದಲ್ಲಿ ಎರಡು ಭಾಗಗಳಿವೆ. ಮೊದಲ ಭಾಗವು ದೊಡ್ಡ ಸದನವನ್ನು ಹೊಂದಿದ್ದು, ಭಕ್ತಾದಿಗಳು ಪ್ರಾರ್ಥನೆ, ಸತ್ಸಂಗಗಳಿಗೆ ಇಲ್ಲಿ ಸೇರುತ್ತಾರೆ. ಎರಡನೇ ಭಾಗ ಶ್ವೇತ ಶಿಲೆಯಲ್ಲಿ ನಿರ್ಮಿಸಲಾಗಿರುವ ಗರ್ಭ ಗೃಹ. ಮಂದಿರದ ಕಂಬ ಕಂಬಗಳಲ್ಲಿ ಬೇರೆ ಬೇರೆ ದೇವ-ದೇವಿಯರ ವಿಗ್ರಹಗಳನ್ನು ಕೆತ್ತಲಾಗಿದೆ. ಮಂದಿರದ ಚಾವಣಿಯಂತೂ ಅತ್ಯಾಕರ್ಷಕ ಕೆತ್ತನೆಗಳನ್ನು ಹೊಂದಿದ್ದು ಪ್ರತಿಯೊಬ್ಬರ ಗಮನ ಸೆಳೆಯುತ್ತದೆ.

ಗರ್ಭಗುಡಿಯ ಮಧ್ಯಭಾಗದಲ್ಲಿರುವ ಶಿವಲಿಂಗದ ತಳ ಭಾಗವನ್ನು ಬೆಳ್ಳಿಯಿಂದ ಮುಚ್ಚಲಾಗಿದೆ. ಈ ಭಾಗದ ಬೇರೆ ದೇವಸ್ಥಾನಗಳಲ್ಲಿರುವಂತೆ ಶಿವಲಿಂಗ ಸ್ಪರ್ಶಿಸಲು ಭಕ್ತರಿಗೆ ಮುಕ್ತ ಅವಕಾಶವಿಲ್ಲ. ಶಿವಲಿಂಗಕ್ಕೆ ಹಾಲು ಮತ್ತು ಜಲಾಭಿಷೇಕ ಮಾಡಲು ವಿಶೇಷ ವ್ಯವಸ್ಥೆಗಳನ್ನು ಏರ್ಪಡಿಸಲಾಗಿದೆ.
webdunia
WD


ದೇವಸ್ಥಾನದ ಪ್ರಾಂಗಣದಲ್ಲಿ, ಮತ್ತೆರಡು ಗುಡಿಗಳಿವೆ - ಕಾಶಿವಿಶ್ವನಾಥ ಹನುಮಾನ್ ಹಾಗೂ ಸೋಮನಾಥ ಮಹಾದೇವ ಮಂದಿರಗಳು. ಮತ್ತೊಂದು ಗುಡಿಯಲ್ಲಿ ಸ್ವಾಮಿ ಚಿದಾನಂದ ಸರಸ್ವತಿ ಅವರ ಪಾದುಕೆಗಳನ್ನು ಇರಿಸಲಾಗಿದೆ.

ಶ್ರಾವಣ ಮಾಸದಲ್ಲಿ ಇಲ್ಲಿ ಉತ್ಸವ ನಡೆಯುತ್ತಿದ್ದು, ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಾರೆ. ತ್ರಯೋದಶಿಯಂದು ಇಲ್ಲಿ ವಿಶೇಷ ಪೂಜಾದಿಗಳು ನಡೆಯುತ್ತವೆ. ಯಾತ್ರಿಗಳಿಗೆ ಮತ್ತು ಸಂತರಿಗೆ ಆಹಾರ ಮತ್ತು ವಸತಿ ವ್ಯವಸ್ಥೆಯನ್ನು ಮಂದಿರದ ಟ್ರಸ್ಟ್ ಉಚಿತವಾಗಿಯೇ ಕಲ್ಪಿಸಿಕೊಡುತ್ತದೆ.
webdunia
WD


ಇಲ್ಲಿಗೆ ಹೋಗುವುದು ಹೇಗೆ:

ರಸ್ತೆ ಮಾರ್ಗ: ವಡೋದರವು ಗುಜರಾತ್ ರಾಜಧಾನಿ ಗಾಂಧಿನಗರದಿಂದ 115 ಕಿ.ಮೀ. ಹಾಗೂ ಅಹಮದಾಬಾದ್‌ನಿಂದ 130 ಕಿ.ಮೀ. ದೂರದಲ್ಲಿದೆ.

ರೈಲು ಮಾರ್ಗ: ದೆಹಲಿ - ಮುಂಬಯಿ ರೈಲು ಮಾರ್ಗದ ಪ್ರಮುಖ ನಿಲ್ದಾಣಗಳಲ್ಲಿ ವಡೋದರ ಕೂಡ ಒಂದಾಗಿದ್ದು, ದೇಶದ ವಿವಿಧೆಡೆಗಳಿಂದ ಇಲ್ಲಿಗೆ ನೇರ ರೈಲು ಸಂಪರ್ಕವಿದೆ.

ವಿಮಾನ ಮಾರ್ಗ: ಸಮೀಪದ ವಿಮಾನ ನಿಲ್ದಾಣವಿರುವುದು 130 ಕಿ.ಮೀ. ದೂರದಲ್ಲಿರುವ ಅಹಮದಾಬಾದ್‌ನಲ್ಲಿ.

Share this Story:

Follow Webdunia kannada