| ಮಾನಸ ಸರೋವರ ಮತ್ತು ಕೈಲಾಸ ಪರ್ವತಗಳೆರಡು ಒಂದಕ್ಕೊಂದು ಹೊಂದಿಕೊಂಡೇ ಇವೆ. ಸ್ಪಟಿಕದಷ್ಟೆ ಶುಭ್ರವಾಗಿರುವ ಮಾನಸ ಸರೋವರ ಹಿಂದೂಗಳ ಪಾಲಿಗೆ ಜೀವನದಲ್ಲಿ ಒಮ್ಮೆಯಾದರೂ ಮಿಂದು ಪಾವನರಾಗಬೇಕೆಂದು ಬಯಸುವ ಸ್ಥಳ. ಪುರಾಣ ಮತ್ತು ಪುರಾಣೋತ್ತರ ಕಾಲದಲ್ಲಿ ಕೈಲಾಸ ಪರ್ವತದ ಮಹಿಮೆಯನ್ನು ಬಣ್ಣಿಸಲಾಗಿದ್ದು. ಹಿಂದೂಗಳ ಪಾಲಿಗೆ ಕೈಲಾಸ ಪರ್ವತ ಲಯ ಕರ್ತೃ ಶಿವನ ವಾಸಸ್ಥಾನ. ಕೈಲಾಸ ಪರ್ವತದಲ್ಲಿ ಬೆಳಕು ಮತ್ತು ಶಬ್ಧಗಳ ಸಂಗಮದಿಂದ ಓಂಕಾರ ನಾದ ಹೊರ ಹೊಮ್ಮುತ್ತದೆ. ಶಿವನು ನಾದೋಪಾಸಕನಾದ ಕಾರಣ ಓಂಕಾರದ ವ್ಯುತ್ಪತ್ತಿ ಇಲ್ಲಿಯೆ ಆಗಿದೆ ಎಂದು ಧರ್ಮ ಗ್ರಂಥಗಳು ಪ್ರತಿಪಾದಿಸುತ್ತವೆ. ಹಿಂದೂಗಳ ಪಾಲಿಗೆ " ಓಂ" ಪವಿತ್ರ ಶಬ್ಧ. ಮಾನಸ ಸರೋವರ ಭಾರತೀಯರ ಆದ್ಯಾತ್ಮಿಕತೆಯನ್ನು ಪ್ರತಿನಿಧಿಸುತ್ತದೆ ಎಂಬ ನಂಬಿಕೆ ಹಲವರಲ್ಲಿ ಇದೆ. ಕೈಲಾಸ ಪರ್ವತದಲ್ಲಿ ಕಲ್ಪವೃಕ್ಷ ಇದೆ ಎಂಬ ನಂಬಿಕೆ ಇದೆ. ಸ್ವರ್ಗಲೋಕದ ಶ್ರೀಮಂತ ದೇವತೆ ಕುಬೇರನ ನಗರ ಇದೆ ಎಂಬ ನಂಬಿಕೆ ಇದ್ದು, ಪರ್ವತದ ನಾಲ್ಕು ದಿಕ್ಕುಗಳು ಹವಳ ಮುತ್ತು ಚಿನ್ನಗಳನ್ನು ಪ್ರತಿನಿಧಿಸುತ್ತವೆ ಎಂಬ ಪ್ರತೀತಿ ಇದೆ.
|