Select Your Language

Notifications

webdunia
webdunia
webdunia
webdunia

ನಾಸಿಕದ ಶ್ರೀ ಕಾಲಾ ರಾಮ್ ಮಂದಿರ

ನಾಸಿಕದ ಶ್ರೀ ಕಾಲಾ ರಾಮ್ ಮಂದಿರ
- ಅಭಿನಯ ಕುಲಕರ್ಣಿ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಅತ್ಯಾಕರ್ಷಕ ಧಾರ್ಮಿಕ ಕೇಂದ್ರಗಳಲ್ಲೊಂದು, ಇಲ್ಲಿನ ಪಂಚವಟಿ ಪ್ರದೇಶದಲ್ಲಿರುವ ಕಾಲಾ ರಾಮ ಮಂದಿರ. ಇದು ಈ ಪ್ರದೇಶದ ಅತ್ಯಂತ ದೊಡ್ಡದಾದ ಮತ್ತು ಅಷ್ಟೇ ಸರಳವಾದ ದೇಗುಲವಾಗಿದ್ದು, ಇದು ಎರಡು ಶತಮಾನಗಳಷ್ಟು ಹಳೆಯದು. 1790ರಲ್ಲಿ ಸರ್ದಾರ್ ಓಧೇಕಾರ್ ಪೇಶ್ವೆ ಈ ದೇಗುಲವನ್ನು ನಿರ್ಮಿಸಿದ್ದರು.

ಇದು ಶ್ರೀ ರಾಮನಿಗಾಗಿ ಕಟ್ಟಿಸಲಾದ ಮಂದಿರವಾಗಿದ್ದು, ಗರ್ಭ ಗುಡಿಯಲ್ಲಿ ಕರಿ ಶಿಲೆಯ ಮೂರ್ತಿಯಾಗಿ ರಾರಾಜಿಸುತ್ತಿದ್ದಾನೆ ಶ್ರೀ ರಾಮ. ದೇವರ ವಿಗ್ರಹ ಕಪ್ಪು ಇರುವುದರಿಂದಾಗಿ, ಇದಕ್ಕೆ ಕಾಲಾ ರಾಮ್ ಮಂದಿರ ಎಂದೇ ಹೆಸರಾಯಿತು.

ಶ್ರೀರಾಮನ ವಿಗ್ರಹದ ಜೊತೆಗೆ ಸೀತಾಮಾತೆ ಮತ್ತು ಲಕ್ಷ್ಮಣ ಕಪ್ಪು ಶಿಲೆಯ ವಿಗ್ರಹಗಳೂ ಇಲ್ಲಿ ಸಾಲಂಕೃತವಾಗಿ ಪೂಜೆಗೊಳ್ಳುತ್ತಿವೆ. ಮಂದಿರವನ್ನು ಸಂಪೂರ್ಣವಾಗಿ ಕಗ್ಗಲ್ಲಿನಲ್ಲಿ ಕಟ್ಟಲಾಗಿದ್ದು, ನಾಲ್ಕು ದಿಕ್ಕುಗಳಲ್ಲಿರುವ ದ್ವಾರಗಳೂ ಶಿಲಾಮಯವಾಗಿವೆ. ಕಾಲಾ ರಾಮ್ ಮಂದಿರದ ಶಿಖರವನ್ನು 32 ಟನ್ ಚಿನ್ನದಿಂದ ನಿರ್ಮಿಸಲಾಗಿದೆ.
WD


ಈ ಹಿಂದೆ ಹರಿಜನ ವರ್ಗದವರಿಗೆ ಮಂದಿರಕ್ಕೆ ಪ್ರವೇಶವಿರಲಿಲ್ಲ. 1930ರ ನಂತರ, ಡಾ.ಅಂಬೇಡ್ಕರ್ ಅವರ ಸತ್ಯಾಗ್ರಹದ ಫಲವಾಗಿ ದೇವಾಲಯದೊಳಗೆ ಹರಿಜನರಿಗೂ ಪ್ರವೇಶ ಕಲ್ಪಿಸಲಾಯಿತು.

ಕಾಲಾ ರಾಮ ಮಂದಿರದ ಸುತ್ತ 96 ಕಂಬಗಳಿಂದೊಡಗೂಡಿದ ಪ್ರಾಕಾರವಿದೆ. ಇದಕ್ಕೆ ಪೂರ್ವಭಾಗದಲ್ಲಿ ಪ್ರವೇಶದ್ವಾರ. ಈ ಮಂದಿರ ನಿರ್ಮಿಸಲು ಬೇಕಾಗಿದ್ದ ಶಿಲೆಯನ್ನು ತಂದದ್ದು ರಾಮ್‌ಶೇಜ್ ಎಂಬಲ್ಲಿಂದ. ಇದನ್ನು ನಿರ್ಮಿಸಲು ಸುಮಾರು 12 ವರ್ಷಗಳೇ ಬೇಕಾಯಿತು ಮತ್ತು 23 ಲಕ್ಷ ರೂ. ಹಾಗೂ ಸುಮಾರು 2000 ಕಾರ್ಮಿಕರ ಶ್ರಮ ಇದರಲ್ಲಿ ಸೇರಿದೆ. ಮಂದಿರವು ಸುಮಾರು 70 ಅಡಿ ಎತ್ತರವಿದ್ದು, ಚಿನ್ನದ ಕಲಶವನ್ನೂ ಹೊಂದಿದೆ.

webdunia
WD
ಮಂದಿರದ ಸಮೀಪದಲ್ಲೇ ಸೀತಾ ಗುಹೆಯಿದೆ. ಶ್ರೀರಾಮನಿಂದ ಪರಿತ್ಯಕ್ತಳಾದ ಸೀತಾ ಮಾತೆಯು ತನ್ನ ಅಜ್ಞಾತವಾಸವನ್ನು ಕಳೆದದ್ದು ಇಲ್ಲೇ ಎಂಬ ನಂಬಿಕೆಯಿದೆ. ಇಲ್ಲಿ ಅರಳಿ ವೃಕ್ಷಗಳ ದೊಡ್ಡ ಸಮೂಹವೇ ಇದೆ. ಈ ಮಂದಿರವು ತ್ರ್ಯಂಬಕೇಶ್ವರ ಮಂದಿರದಂತೆಯೇ ಇದೆ ಎನ್ನಲಾಗುತ್ತಿದೆ. ಶ್ರೀ ವಿಠಲ, ಗಣೇಶ ಮತ್ತು ಹನುಮಾನ್ ಗುಡಿಗಳೂ ಈ ದೇವಾಲಯದ ಆವರಣದಲ್ಲಿವೆ.

ಶ್ರೀ ರಾಮನವಮಿ, ದಸರಾ ಮತ್ತು ಚೈತ್ರ ಪರ್ವ (ಹಿಂದೂ ಹೊಸ ವರ್ಷ)ಗಳನ್ನು ಇಲ್ಲಿ ವಿಶೇಷವಾಗಿ ಸಂಭ್ರಮೋಲ್ಲಾಸಗಳಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಕಾಲಾ ರಾಮನ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ಬರುತ್ತಾರೆ.

ಹೋಗುವುದು ಹೇಗೆ?
webdunia
WD


ರಸ್ತೆ ಮೂಲಕ: ನಾಸಿಕ್ ಪಟ್ಟಣವು ಮುಂಬಯಿಯಿಂದ 170 ಕಿ.ಮೀ. ದೂರದಲ್ಲಿದೆ ಮತ್ತು ಪುಣೆಯಿಂದ 210 ಕಿ.ಮೀ. ದೂರದಲ್ಲಿದೆ.

ರೈಲು ಮಾರ್ಗ: ಕೇಂದ್ರೀಯ ರೈಲ್ವೇಯ ಪ್ರಮುಖ ರೈಲು ನಿಲ್ದಾಣಗಳಲ್ಲಿ ನಾಸಿಕ್ ಕೂಡ ಒಂದು.

ವಾಯು ಮಾರ್ಗ: ನಾಸಿಕ್‌ನಲ್ಲೇ ವಿಮಾನ ನಿಲ್ದಾಣವಿದ್ದು, ಮುಂಬಯಿಯಿಂದ ಸಾಕಷ್ಟು ವಿಮಾನ ಸಂಪರ್ಕ ಇದೆ.

Share this Story:

Follow Webdunia kannada