ನರಸಿಂಗವಾಡಿ ದತ್ತಾತ್ರೇಯ ಮಂದಿರ
ಕಿರಣ್ ಜೋಷಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ನರಸಿಂಗವಾಡಿ ಎಂಬಲ್ಲಿ ಕೃಷ್ಣಾ ನದಿ ತೀರದಲ್ಲಿದೆ ಪ್ರಖ್ಯಾತ ದತ್ತಾತ್ರೇಯ ಮಂದಿರ. ಈ ಸ್ಥಳವನ್ನು ನರಸೋಬಾವಾಡಿ ಎಂದೂ ಕರೆಯಲಾಗುತ್ತದೆ. ಈ ಬಾರಿಯ ಧಾರ್ಮಿಕ ಯಾತ್ರೆಯಲ್ಲಿ ನಾವು ನಿಮ್ಮನ್ನು ಇಲ್ಲಿಗೆ ಕರೆದೊಯ್ಯುತ್ತಿದ್ದೇವೆ.ಈ ತಾಣದಲ್ಲಿ ದತ್ತಾತ್ರೇಯ ಭಗವಾನ್ 12 ವರ್ಷಗಳ ಕಠಿಣ ತಪಸ್ಸನ್ನು ಇಲ್ಲಿ ಆಚರಿಸಿದ ಎಂಬ ಪ್ರತೀತಿ ಇದೆ. ದತ್ತ ಮಹಾರಾಜರ ತಪೋಭೂಮಿ ಇದು ಎಂದೇ ಈ ಪುಣ್ಯ ಕ್ಷೇತ್ರ ಪ್ರಖ್ಯಾತವಾಗಿದೆ. ಇಲ್ಲಿ ಭಕ್ತರು ದತ್ತಾತ್ರೇಯರ ಪಾದದ ಗುರುತನ್ನು ಅರ್ಚಿಸುತ್ತಾರೆ. ಪುರಾಣ ಹೇಳುವಂತೆ, ತಪಸ್ಸು ಮುಗಿಸಿದ ಬಳಿಕ ದತ್ತ ಮಹಾರಾಜರು ತಮ್ಮ ಯಾತ್ರೆಯನ್ನು ಆರಂಭಿಸಿ ಔದುಂಬರ, ಗಂಗಾಪುರಗಳನ್ನು ದಾಟಿ ಕೊನೆಗೆ ಕರದಾಳಿ ವನ ತಲುಪಿದರು. ಇಲ್ಲಿ ಅವರು ತಮ್ಮ ಭೌತಿಕ ದೇಹವನ್ನು ತ್ಯಜಿಸಿ ನರಸಿಂಗಸರಸ್ವತಿ ಅವತಾರವನ್ನು ಕೊನೆಗೊಳಿಸಿದರು. ದಿನಂಪ್ರತಿ ದತ್ತಾತ್ರೇಯ ದರ್ಬಾರಿನಲ್ಲಿ ಸಾವಿರಾರು ಭಕ್ತಾದಿಗಳು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಈ ತಾಣದಲ್ಲಿ ಕೃಷ್ಣಾ ನದಿಯು ಪಂಚಗಂಗಾ ನದಿಯನ್ನು ಸೇರುತ್ತದೆ. ಕೃಷ್ಣಾ ನದಿಯ ಹರಿವಿನ ಜುಳುಜುಳು ನಿನಾದದೊಂದಿಗೆ ದೇವಸ್ಥಾನದ ಮಂತ್ರೋಚ್ಚಾರಣೆ ಮತ್ತು ಗಂಟೆಗಳ ಸದ್ದು, ಈ ತಾಣದಲ್ಲಿ ಭಕ್ತಿ ಭಾವವನ್ನು, ಮನಸ್ಸಿಗೆ ಆಹ್ಲಾದವನ್ನೂ, ಭಕ್ತಿಯ ಸಿಂಚನವನ್ನೂ ನೀಡುತ್ತದೆ.
ಈ ದೇವಸ್ಥಾನದ ವಿಶೇಷಗಳಲ್ಲೊಂದು ಅದರ ಆಕಾರ. ನೋಡಲು ಮಸೀದಿಯಂತೆಯೇ ಗೋಚರಿಸುತ್ತದೆ. ದತ್ತಾತ್ರೇಯ ಪಾದ ಗುರುತಿಗೆ ವಸ್ತ್ರ ಸಮರ್ಪಿಸುವ ಪದ್ಧತಿಯಿದ್ದು, ಇದು ದರ್ಗಾಗಳಲ್ಲಿ ಚಾದರ್ ಸಮರ್ಪಿಸುವ ಪದ್ಧತಿಯನ್ನು ಹೋಲುತ್ತದೆ. ಈ ಕಾರಣಕ್ಕೆ ಎಲ್ಲ ಸಮುದಾಯದ ಮಂದಿ ಇಲ್ಲಿಗೆ ಬಂದು ಪುನೀತ ಭಾವ ತಳೆಯುತ್ತಾರೆ. ದತ್ತ ಮಂದಿರದ ಆವರಣದಲ್ಲೇ, ಹಲವಾರು ಸಣ್ಣ ಪುಟ್ಟ ದೇವಾಲಯಗಳು, ಈ ಸ್ಥಳದಲ್ಲಿ ತಪಸ್ಸು ಆಚರಿಸಿದ ಖ್ಯಾತ ಸಂತರ ಸಮಾಧಿಗಳು ಇವೆ.ಪ್ರತಿ ಹುಣ್ಣಿಮೆ ದಿನ ಈ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರಾದಿಗಳು ನೆರವೇರುತ್ತವೆ ಮತ್ತು ಭಕ್ತಾದಿಗಳ ಸಂಖ್ಯೆಯೂ ಅಪರಿಮಿತವಾಗಿರುತ್ತದೆ. ದತ್ತಾತ್ರೇಯರ ಜನ್ಮದಿನ ಶನಿವಾರ ಎಂದು ತಿಳಿದಿರುವುದರಿಂದ ಪ್ರತಿ ಶನಿವಾರವೂ ಇಲ್ಲಿ ಭಕ್ತರು ಭಾರಿ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ, ಅರ್ಚನೆ ನೆರವೇರಿಸುತ್ತಾರೆ.
ಪ್ರತಿ ವರ್ಷ ದತ್ತ ಜಯಂತಿ ಉತ್ಸವ ಆಚರಿಸಲಾಗುತ್ತಿದ್ದು, ಲಕ್ಷಾಂತರ ಭಕ್ತರು ದತ್ತಾತ್ರೇಯ ದೇವರ ಅನುಗ್ರಹ ಪಡೆಯಲು ಆಗಮಿಸುತ್ತಾರೆ. ನಾಯಿಯನ್ನು ದತ್ತಾತ್ರೇಯ ದೇವರ ಅವತಾರ ಎಂದು ನಂಬಲಾಗಿರುವುದರಿಂದ ಮಂದಿರದ ಆವರಣಕ್ಕೆ ಆಗಮಿಸುವ ನಾಯಿಗಳನ್ನು ಯಾರು ಕೂಡ ಓಡಿಸುವುದಿಲ್ಲ. ಮಂದಿರದೊಳಗೆ ನಾಯಿಗಳು ಮುಕ್ತವಾಗಿ ಓಡಾಡಿಕೊಂಡಿರುವುದನ್ನು ನೀವಲ್ಲಿ ನೋಡಬಹುದು. ಮಾತ್ರವಲ್ಲ, ಜನರು ಈ ಶ್ವಾನಗಳನ್ನೂ ಪೂಜಿಸುತ್ತಾರೆ ಮತ್ತು ಅವುಗಳಿಗೆ ಆಹಾರ ನೀಡುತ್ತಾರೆ.
ಹೋಗುವುದು ಹೇಗೆ:
ರಸ್ತೆ ಮಾರ್ಗ: ನರಸಿಂಗವಾಡಿಯು ಕೊಲ್ಹಾಪುರದಿದ 40 ಕಿ.ಮೀ. ದೂರದಲ್ಲಿದೆ. ಇದು ಪುಣೆಯಿಂದ ಸುಮಾರು 245 ಕಿ.ಮೀ. ದೂರದಲ್ಲಿದೆ. ಪುಣೆಯಿಂದ ಟ್ಯಾಕ್ಸಿ ಅಥವಾ ಬಸ್ ಸೌಲಭ್ಯವಿದೆ.
ರೈಲು ಮಾರ್ಗ: ಮುಂಬಯಿ ಮತ್ತು ಪುಣೆಯಿಂದ ಕೊಲ್ಹಾಪುರಕ್ಕೆ ಬೇಕಾದಷ್ಟು ರೈಲುಗಳಿವೆ.
ವಿಮಾನ ಸೌಲಭ್ಯ: ಸಮೀಪದ ವಿಮಾನ ನಿಲ್ದಾಣವೆಂದರೆ ಕೊಲ್ಹಾಪುರ.