ನಂದಿ ವಿಗ್ರಹವಿಲ್ಲದ ಈಶ್ವರನ ಮಂದಿರ!
, ಭಾನುವಾರ, 17 ಆಗಸ್ಟ್ 2008 (15:19 IST)
-
ಅಭಿನಯ್ ಕುಲಕರ್ಣಿ
ಮಹಾರಾಷ್ಟ್ರದ ನಾಸಿಕ್ ಪಟ್ಟಣದ ಪಂಚವಟಿ ಪ್ರದೇಶದಲ್ಲಿದೆ ವಿಶಿಷ್ಟವಾದ ಕಪಾಲೀಶ್ವರ ಮಹಾದೇವ ಮಂದಿರ. ಸಾಕ್ಷಾತ್ ಪರಶಿವನೇ ಈ ಕ್ಷೇತ್ರದಲ್ಲಿ ತಂಗಿದ್ದ ಎಂಬ ಪ್ರತೀತಿ ಇದೆ. ಶಿವಲಿಂಗದೆದುರು ನಂದಿ ವಿಗ್ರಹವಿಲ್ಲದ ದೇಶದ ಪ್ರಥಮ ಶಿವಾಲಯವಿದೆಂಬ ಖ್ಯಾತಿ ಇದಕ್ಕಿದೆ. ಇದೇ ಕಾರಣಕ್ಕೆ ಈ ಶಿವ ಮಂದಿರವು ಅತ್ಯಂತ ವಿಶಿಷ್ಟತೆಯನ್ನೂ ಪ್ರಖ್ಯಾತಿಯನ್ನೂ ಪಡೆದಿದೆ.ನಂದಿ ವಿಗ್ರಹ ಏಕಿಲ್ಲ ಎಂಬುದರ ಕುರಿತು ಕುತೂಹಲಕರ ಕಥೆಯೊಂದು ಇಲ್ಲಿನ ಜನರ ನಂಬಿಕೆಯಲ್ಲಿದೆ. ಇಂದ್ರ ಸಭೆಯಲ್ಲಿ ಬ್ರಹ್ಮದೇವ ಮತ್ತು ಈಶ್ವರನ ಮಧ್ಯೆ ವಾಗ್ವಾದವೊಂದು ನಡೆಯಿತು. ಆಗ ಬ್ರಹ್ಮನಿಗೆ ಐದು ತಲೆಗಳಿದ್ದವು. ಐದರಲ್ಲಿ ನಾಲ್ಕು ಮುಖಗಳು ವೇದಗಳನ್ನು ಪಠಿಸುತ್ತಿದ್ದವು. ಉಳಿದ ಒಂದು ಯಾವತ್ತೂ ವಾಗ್ವಾದಕ್ಕೆ ಬಳಕೆಯಾಗುತ್ತಿತ್ತು. ಈ ಟೀಕೆಗಳಿಂದ ಪರಶಿವನು ಎಷ್ಟು ಆಕ್ರೋಶಿತನಾದನೆಂದರೆ, ಅವನು ಆ ತಲೆಯನ್ನೇ ಚಿವುಟಿಹಾಕಿದ. ಆ ತಲೆಯು ಕಪಾಲ ರೂಪದಲ್ಲಿ ಆತನ ಕೈಗೆ ಅಂಟಿಕೊಂಡಿತು. ಈ ರೀತಿ ಮಾಡುವ ಮೂಲಕ ಶಿವನಿಗೆ ಬ್ರಹ್ಮಹತ್ಯಾ ದೋಷ ಅಂಟಿಕೊಂಡಿತು. ಈ ಪಾಪದಿಂದ ಮುಕ್ತನಾಗಲು ಪರಶಿವನು ಜಗತ್ತನ್ನೆಲ್ಲಾ ಸುತ್ತಿದ. ಆದರೂ ಯಾವುದೇ ಪರಿಹಾರ ಕಾಣಲಿಲ್ಲ.ಅದೊಂದು ದಿನ ಪರಶಿವನು ಸೋಮೇಶ್ವರದಲ್ಲಿದ್ದಾಗ, ಬ್ರಾಹ್ಮಣನ ಮನೆಯೊಂದರೆದುರು ಹಸು ಮತ್ತು ಕರು ನಿಂತಿರುವುದನ್ನು ಕಂಡ. ಆ ಬ್ರಾಹ್ಮಣನು ಕರುವಿನ ಮೂಗಿಗೆ ಮೂಗುದಾರ ತೊಡಿಸಲು ಹೆಣಗಾಡುತ್ತಿದ್ದ. ಇದರಿಂದ ಆ ಕರು ತೀರಾ ಕೋಪಗೊಂಡಿತು ಮತ್ತು ಬ್ರಾಹ್ಮಣನ ಮೇಲೆ ಎರಗಿ, ಆತನನ್ನು ಕೊಲ್ಲಲೆತ್ನಿಸಿತು. ಆದರೆ ಅದರ ತಾಯಿ, ಈ ರೀತಿಯಾಗುವುದನ್ನು ತಪ್ಪಿಸಿತು. ತನ್ನ ಕರುವಿಗೂ ಬ್ರಹ್ಮಹತ್ಯಾ ದೋಷ ತಗುಲುವುದು ಆ ಆಕಳಿಗೆ ಬೇಕಾಗಿರಲಿಲ್ಲ. ಆಗ, ಬ್ರಹ್ಮ ಹತ್ಯಾ ದೋಷಕ್ಕೆ ಪರಿಹಾರ ತನಗೆ ತಿಳಿದಿದೆ ಅಂತ ಆ ಕರು ತನ್ನ ತಾಯಿಗೆ ಹೇಳಿತು.ಇದನ್ನು ಕೇಳಿದ ಪರಶಿವನಿಗೆ ಅಚ್ಚರಿಯಾಗಿ, ಈ ಪರಿಹಾರ ಏನು ಎಂಬುದನ್ನು ತಿಳಿದುಕೊಳ್ಳಬೇಕೆಂದು ಕುತೂಹಲಗೊಂಡನು. ಕರುವು ಬ್ರಾಹ್ಮಣನನ್ನು ತನ್ನ ಕೊಂಬಿನಿಂದ ತಿವಿಯಿತು ಮತ್ತು ಸ್ಥಳದಲ್ಲೇ ಬ್ರಾಹ್ಮಣ ಸಾವನ್ನಪ್ಪಿದ. ಬ್ರಾಹ್ಮಣನ ಸಾವಿನ ನಂತರ ಆ ಕರುವಿನ ದೇಹವು ಕಪ್ಪನೆ ಬಣ್ಣಕ್ಕೆ ತಿರುಗತೊಡಗಿತು. ಇದು ಬ್ರಹ್ಮಹತ್ಯಾ ದೋಷದ ಪ್ರಭಾವ. ಆ ಕರುವು ಒಂದು ನಿರ್ದಿಷ್ಟ ದಿಕ್ಕಿನತ್ತ ತೆರಳಿತು ಮತ್ತು ಪರಶಿವನು ಅದನ್ನು ಹಿಂಬಾಲಿಸತೊಡಗಿದ. ಹೀಗೇ ನಡೆಯುತ್ತಾ ಕರುವು ನಾಸಿಕದಲ್ಲಿರುವ ಗೋದಾವರಿ ನದಿಯ ರಾಮಕುಂಡ ಎಂಬಲ್ಲಿಗೆ ತಲುಪಿತು. ಆ ನದಿಯಲ್ಲಿ ಸ್ನಾನ ಮಾಡಿದ ಕರು, ತನ್ನ ಬಿಳಿ ಬಣ್ಣವನ್ನು ಮರಳಿ ಪಡೆಯಿತು. ಅಂದರೆ ಬ್ರಹ್ಮಹತ್ಯಾ ದೋಷ ಪರಿಹಾರವಾಯಿತು ಎಂಬುದರ ಸಂಕೇತವಿದು.ಪರಶಿವನೂ ಇದೇ ರೀತಿ ಮಾಡಿದ. ರಾಮಕುಂಡದಲ್ಲಿ ಸ್ನಾನ ಪೂರೈಸಿದ ಪರಶಿವ, ಬ್ರಹ್ಮಹತ್ಯಾ ದೋಷದಿಂದ ಮುಕ್ತಿ ಪಡೆದ. ಈ ಗೋದಾವರಿ ತಟದಲ್ಲಿ ಒಂದು ಪರ್ವತವಿತ್ತು. ಈಶ್ವರನು ಆ ಪರ್ವತವೇರಿದ. ಕರು ಶಿವನನ್ನು ಹಿಂಬಾಲಿಸಿತು ಮತ್ತು ಶಿವನೆದುರು ಕುಳಿತುಕೊಂಡಿತು. ಆದರೆ, ನಂದಿ (ಕರು)ಯ ಸಲಹೆಯ ಅನುಸಾರ ತನ್ನ ಬ್ರಹ್ಮ ಹತ್ಯಾ ದೋಷ ನಿವಾರಣೆಯಾಗಿದೆ. ಹೀಗಾಗಿ ನಂದಿಯು ತನ್ನ ಗುರು ಸ್ಥಾನದಲ್ಲಿರುವುದರಿಂದ ಇಲ್ಲಿ ತನ್ನೆದುರು ಕುಳಿತುಕೊಳ್ಳದಂತೆ ಶಿವನು ನಂದಿಗೆ (ಕರುವಿಗೆ) ಸೂಚಿಸಿದ ಎನ್ನುತ್ತದೆ ಈ ಕಥೆ.
ಈ ಕಾರಣದಿಂದ ಈ ದೇವಾಲಯದಲ್ಲಿ ಶಿವಲಿಂಗದೆದುರು ನಂದಿಯ ವಿಗ್ರಹವಿಲ್ಲ. ಈ ನಂದಿಯು ರಾಮಕುಂಡದಲ್ಲೇ ಇದೆ ಎಂದೂ ಹೇಳಲಾಗುತ್ತಿದೆ. ಪುರಾಣ ಪುಣ್ಯ ಕ್ಷೇತ್ರವಾಗಿರುವ ಈ ದೇವಾಲಯವು ಶಿವ ಭಕ್ತರ ಮನಸ್ಸಿನಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.
ಮೊದಲು ಇಲ್ಲಿ ಶಿವಲಿಂಗ ಮಾತ್ರವೇ ಇತ್ತು. ನಂತರ ಬೃಹತ್ ದೇವಾಲಯವೊಂದು ಇಲ್ಲಿ ರೂಪುಗೊಂಡಿತು. ಆ ಬಳಿಕ ಇಲ್ಲಿ ಆಳ್ವಿಕೆ ನಡೆಸುತ್ತಿದ್ದ ಪೇಶ್ವೆಗಳು ಭಾರೀ ಖರ್ಚು ಮಾಡಿ ಮಂದಿರವನ್ನು ಪುನರುಜ್ಜೀವನಗೊಳಿಸಿದರು. ಈ ಮಂದಿರದ ಸಮೀಪವೇ ಗೋದಾವರಿ ನದಿ ಹರಿಯುತ್ತಿದೆ. ಪೌರಾಣಿಕ ಕಥೆಯ ಪ್ರಕಾರ, ಶ್ರೀರಾಮನು ತನ್ನ ತಂದೆಯ ಶ್ರಾದ್ಧ ಕರ್ಮಾದಿಗಳನ್ನು ಇಲ್ಲೇ ನೆರವೇರಿಸಿದ್ದ. ಇದೇ ಕಾರಣಕ್ಕೆ ಪ್ರತಿವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಬಂದು ತಮ್ಮ ಅಗಲಿದ ಬಂಧುಗಳ ಶ್ರಾದ್ಧ ನೆರವೇರಿಸುತ್ತಾರೆ.
ಪ್ರತಿ ಸೋಮವಾರ ಇಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಶ್ರಾವಣ ಮಾಸದಲ್ಲಿ ಸಾವಿರಾರು ಭಕ್ತಾದಿಗಳು ಈ ಕ್ಷೇತ್ರಕ್ಕೆ ದಿನಂಪ್ರತಿ ಭೇಟಿ ನೀಡಿ ಈಶ್ವರನ ದರ್ಶನ ಪಡೆಯುತ್ತಾರೆ.
ಈ ಕ್ಷೇತ್ರಕ್ಕೆ ತಲುಪುವುದು ಹೇಗೆ?:
ರಸ್ತೆ ಮಾರ್ಗ:
ಮುಂಬಯಿಯಿಂದ ನಾಸಿಕ್‌ಗೆ 160 ಕಿ.ಮೀ. ಪುಣೆಯಿಂದ ನಾಸಿಕ್ 210 ಕಿ.ಮೀ. ದೂರದಲ್ಲಿದೆ. ಸಾಕಷ್ಟು ಸಂಖ್ಯೆಯಲ್ಲಿ ಬಸ್ಸುಗಳು ಮತ್ತು ಟ್ಯಾಕ್ಸಿಗಳು ಲಭ್ಯವಿವೆ.
ರೈಲು ಮಾರ್ಗ:
ಮುಂಬಯಿಯಿಂದ ನಾಸಿಕ್‌ಗೆ ಸಾಕಷ್ಟು ರೈಲುಗಳಿವೆ.
ವಿಮಾನ ಮಾರ್ಗ:
ಸಮೀಪದ ವಿಮಾನ ನಿಲ್ದಾಣಗಳೆಂದರೆ ಮುಂಬಯಿ (160 ಕಿ.ಮೀ.) ಮತ್ತು ಪುಣೆ (210 ಕಿ.ಮೀ.).