ಜ್ಯೋತಿರ್ಲಿಂಗ ಕ್ಷೇತ್ರ- ಓಂಕಾರೇಶ್ವರ
ಮಧ್ಯಪ್ರದೇಶದ ಮಾಳ್ವಾ ಪ್ರದೇಶದಲ್ಲಿರುವ ನರ್ಮದಾ ನದಿಯ ದಂಡೆಯ ಮೇಲೆ ಕಂಗೊಳಿಸುತ್ತಿದೆ ಶ್ರೀ ಓಂಕಾರೇಶ್ವರ ಸನ್ನಿಧಿ. ಭಾರತದಲ್ಲಿರುವ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಇದು, ಭಕ್ತ ಜನಕೋಟಿಯನ್ನು ಕೈಬೀಸಿ ಕರೆಯುತ್ತಿದೆ.ಪುರಾಣ ಕಥೆಗಳಲ್ಲಿ ಓಂಕಾರೇಶ್ವರ ಹಾಗೂ ಮಮಲೇಶ್ವರ ಕುರಿತ ಉಲ್ಲೇಖವಿದೆ. ಭಕ್ತರು ಮಂದಿರವನ್ನು ಪ್ರವೇಶಿಸುವ ಮುಂಚೆ ಎರಡು ಮಂಟಪಗಳನ್ನು ದಾಟಿ ಸಾಗಬೇಕಾಗುತ್ತದೆ. ಓಂಕಾರೇಶ್ವರ ಜ್ಯೋತಿರ್ಲಿಂಗವು ನೆಲದ ಮೇಲೆ ಸ್ಥಾಪಿತವಾಗದೇ ನೈಸರ್ಗಿಕವಾಗಿ ಎತ್ತರದ ಸ್ಥಳದಲ್ಲಿ ನಿರ್ಮಾಣಗೊಂಡಿದೆ.
ಜ್ಯೋತಿರ್ಲಿಂಗ ಕ್ಷೇತ್ರದ ಸುತ್ತಲೂ ಸದಾ ಸ್ಫಟಿಕದಂತೆ ತಿಳಿಯಾದ, ಸಿಹಿಯಾದ ನರ್ಮದಾ ನೀರು ಜುಳು ಜುಳು ಎಂದು ಹರಿಯುತ್ತಾ ಇರುತ್ತದೆ. ಈ ಜ್ಯೋತಿರ್ಲಿಂಗದ ವಿಶೇಷತೆಯೆಂದರೆ, ವಿಗ್ರಹವು ಗೋಪುರದ ಕೆಳಗಡೆ ಸ್ಥಾಪಿತವಾಗಿಲ್ಲ. ಮಂದಿರದ ಮೇಲ್ಬಾಗದಲ್ಲಿ ಅದನ್ನು ಶಿವನು ಸ್ಥಾಪಿಸಿದ ಎಂಬುದು ಇಲ್ಲಿನ ಜನರ ನಂಬಿಕೆ. ಪ್ರತಿವರ್ಷ ಕಾರ್ತಿಕ ಪೌರ್ಣಮಿ ದಿನದಂದು ಬೃಹತ್ ಜಾತ್ರೆ ನಡೆಯುತ್ತದೆ ಇಲ್ಲಿ. ಮಾಳವಾ ಪ್ರದೇಶದ ಮಾಂಧಾತಾ ಪರ್ವತದ ಮೇಲೆ ವಿರಾಜಮಾನನಾಗಿದ್ದಾನೆ ಶ್ರೀ ಓಂಕಾರೇಶ್ವರ. ಶಿವಪುರಾಣದಲ್ಲಿ ಓಂಕಾರೇಶ್ವರ ಹಾಗೂ ಮಮಲೇಶ್ವರರ ಕುರಿತು ಅನೇಕ ಕಥೆಗಳಲ್ಲಿ ಹಾಡಿ ಹೊಗಳಲಾಗಿದೆ. ಮಾಂಧತಾ ರಾಜ್ಯದ ಸೂರ್ಯ ವಂಶದ ಮಾಂಧಾತಾ ರಾಜಮನೆತನದವರಾದ ಆಂಬರೀಶ ಮತ್ತು ಮುಚುಕುಂದರು ಘೋರ ತಪಸ್ಸನ್ನು ಮಾಡಿ ಶಿವನನ್ನು ಒಲಿಸಿಕೊಂಡ ಸ್ಥಳವಾಗಿದೆ ಇದು. ನಂತರ ತಮ್ಮ ಧಾರ್ಮಿಕ ಸೇವೆ ಮತ್ತು ತ್ಯಾಗಗಳಿಂದ ಕರ್ತವ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಈ ಪರ್ವತಕ್ಕೆ ಮಾಂಧಾತಾ ಎಂಬ ಹೆಸರು ಬಂತು ಎಂದು ಹೇಳಲಾಗುತ್ತಿದೆ.ಓಂಕಾರೇಶ್ವರ ಕ್ಷೇತ್ರದ ಫೋಟೋ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಓಂಕಾರೇಶ್ವರ ಮಂದಿರ ಉತ್ತರ ಭಾರತೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಕೃತಯುಗದಲ್ಲಿ ಮಂದಿರವನ್ನು ನಿರ್ಮಿಸಲಾಗಿದೆ ಎಂದು ಪುರಾಣ ಕಥೆಗಳಲ್ಲಿ ಉಲ್ಲೇಖಿಸಲಾಗಿದೆ. ಒಂದು ಬಾರಿ ತ್ರಿಲೋಕ ಸಂಚಾರಿ, ಋಷಿ ನಾರದರು ವಿಂಧ್ಯ ಪರ್ವತಕ್ಕೆ ಭೇಟಿ ನೀಡಿದಾಗ ಮೇರು ಪರ್ವತ ಕುರಿತು ಗುಣಗಾನ ಮಾಡಿ ಹಾಡಿದರು. ಇದನ್ನು ಕೇಳಿದ ವಿಂಧ್ಯ ಪರ್ವತವು ಶಿವನನ್ನು ಪ್ರಾರ್ಥಿಸಿ, ತನಗೆ ಪ್ರಾಧಾನ್ಯತೆ ಹೆಚ್ಚಾಗುವಂತೆ ಮಾಡಬೇಕೆಂದು ಬೇಡಿಕೊಂಡಿತು. ಓಂಕಾರೇಶ್ವರ ಹಾಗೂ ಮಮಲೇಶ್ವರರ ರೂಪದಲ್ಲಿ ಪ್ರತ್ಯಕ್ಷನಾದ ಶಿವನು ಭಕ್ತರಿಗೆ ತೊಂದರೆಯಾಗದೆ ಬೆಳೆಯುವ ವರವನ್ನು ನೀಡಿ ತಥಾಸ್ತು ಎಂದು ಹೇಳಿದನು. ಸೂರ್ಯ ಹಾಗೂ ಚಂದ್ರರು ಅಡ್ಡಬಂದರೂ ವಿಂಧ್ಯಪರ್ವತ ಬೆಳೆಯುವುದನ್ನು ನಿಲ್ಲಿಸಲಿಲ್ಲ. ಮಹಾಜ್ಞಾನಿ ಋಷಿ ಅಗಸ್ತ್ಯರು ನಾನು ಹಿಂತಿರುಗಿ ಬರುವವರೆಗೂ ಬೆಳೆಯಬಾರದು ಎಂದು ಹೇಳಿ ಹೋದರು. ಆದರೆ ಅಗಸ್ತ್ಯರು ಮರಳಿ ಬಾರದಿರುವುದರಿಂದ ವಿಂಧ್ಯಪರ್ವತದ ಬೆಳವಣಿಗೆ ಬಂಧನಕ್ಕೊಳಗಾಯಿತು.ಓಂಕಾರೇಶ್ವರ ಮತ್ತು ಮಮ್ಮಲೇಶ್ವರರು ಸ್ವಾಮಿ ಓಂಕಾರೇಶ್ವರದ ಅಧಿದೇವತೆಗಳು. ಇವರಿಬ್ಬರು ಪ್ರತಿ ಸೋಮವಾರದಂದು ಪ್ರಜೆಗಳ ಪರಿಸ್ಥಿತಿಯನ್ನು ಅರಿಯಲು ನಗರ ಪ್ರದಕ್ಷಿಣೆ ಹಾಕುತ್ತಾರೆಂದು ಹೇಳಲಾಗಿದೆ. ಈ ಕಾರಣಕ್ಕಾಗಿ ಓಂಕಾರೇಶ್ವರ ಮೂರ್ತಿಯನ್ನು ನರ್ಮದಾ ನದಿಯ ಮತ್ತೊಂದು ಭಾಗದಲ್ಲಿರುವ ಮಮಲೇಶ್ವರನಲ್ಲಿಗೆ ತರಲಾಗುತ್ತದೆ. ಈ ತಟದಿಂದ ಓಂಕಾರೇಶ್ವರ ಮತ್ತು ಮಮಲೇಶ್ವರ ಮೆರವಣಿಗೆ ಆರಂಭಗೊಂಡು ಓಂಕಾರೇಶ್ವರ ನಗರದಾದ್ಯಂತ ಮುಂದುವರಿಯುತ್ತದೆ.
ಶ್ರಾವಣದ ಪ್ರಥಮ ಸೋಮವಾರದಂದು ಓಂಕಾರೇಶ್ವರನ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಓಂಕಾರೇಶ್ವರ ನಗರಕ್ಕೆ ಆಗಮಿಸುತ್ತಾರೆ. ಓಂಕಾರೇಶ್ವರ ನಗರದ ಪ್ರತಿ ರಸ್ತೆಗಳು ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಭಕ್ತರು ಓಂಕಾರೇಶ್ವರರ ಕ್ಷಣಿಕ ದರ್ಶನ ಪಡೆಯಲು ಕಾತುರದಿಂದ ಕಾಯುತ್ತಾರೆ. ಶ್ರಾವಣದ ಕೊನೆಯ ಸೋಮವಾರದಂದು ಭಕ್ತಸಮೂಹದ ಸಂಭ್ರಮ ತಾರಕಕ್ಕೇರುತ್ತದೆ. ಭಕ್ತರು ಭಜನೆಗಳನ್ನು ಹಾಡುತ್ತಾ ನೃತ್ಯವನ್ನು ಮಾಡುತ್ತಾ ಪರಸ್ಪರ ಗುಲಾಲ್ ಅನ್ನು ಎರಚುತ್ತಾ ತಮ್ಮ ಭಕ್ತಿ ಭಾವವನ್ನು ಪ್ರದರ್ಶಿಸುತ್ತಾರೆ. ಒಂದು ಕಡೆ ಕಾವಡಿಯಾಗಳು ನೃತ್ಯಮಾಡುತ್ತಾ ಶಿವನನ್ನು ಪ್ರಾರ್ಥಿಸುತ್ತಿದ್ದರೆ, ಇನ್ನೊಂದು ಕಡೆ ಯುವಕರು ಪರಸ್ಪರ ಗುಲಾಲ್‌ನ್ನು ಸಂತೋಷದಿಂದ ಎರಚುವುದು ನೋಡುಗರ ಕಣ್ಣಿಗೆ ಸಂತೋಷವನ್ನು ತರುತ್ತದೆ. ನಗರ ಪ್ರದಕ್ಷಿಣೆಯ ನಂತರ ಐದು ಮುಖಗಳ ಓಂಕಾರೇಶ್ವರ ಮೂರ್ತಿಯನ್ನು ಮೆರವಣಿಗೆ ಮುಖಾಂತರ ಕೋಟಿ ತೀರ್ಥ ಘಾಟ್‌ಗೆ ತರಲಾಗುತ್ತದೆ. ಮೂರ್ತಿಗಳನ್ನು ದೋಣಿಯಲ್ಲಿಟ್ಟು ನದಿ ಪ್ರಯಾಣಕ್ಕೆ ಸಿದ್ಧತೆ ಮಾಡಲಾಗುತ್ತದೆ. ಎಲ್ಲಿ ನೋಡಿದರಲ್ಲಿ ಓಂಕಾರೇಶ್ವರನ ಭಕ್ತಿಯ ಮಹಾಪೂರ ಹರಿಯುತ್ತಿರುತ್ತದೆ. ಹೋಗುವುದು ಹೇಗೆ:ರಸ್ತೆ ಮುಖಾಂತರ: ಇಂದೋರ್‌ನಿಂದ( 77 ಕಿ.ಮೀ.). ನೇರ ಬಸ್, ಟ್ಯಾಕ್ಸಿ ಸೌಲಭ್ಯ, ಭೋಪಾಲದಿಂದ (275 ಕಿ.ಮೀ.) ಮತ್ತು ಖಾಂಡವಾದಿಂದ (77 ಕಿ.ಮಿ.).ರೈಲು ಮುಖಾಂತರ: ಇಂದೋರ್ ಮತ್ತು ಖಾಂಡವಾದಿಂದ ನೇರವಾಗಿ ಸಮೀಪದ ಓಂಕಾರೇಶ್ವರ ರೋಡ್ (12 ಕಿ.ಮೀ.) ತಲುಪಬಹುದು. ಓಂಕಾರೇಶ್ವರ ಕ್ಷೇತ್ರದ ಫೋಟೋ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ.