ಗಿಳಿವಿಂಡಿನ ಭಕ್ತಿಯ ತಾಣ: ಹನುಮಾನ್ ಮಂದಿರ
, ಭಾನುವಾರ, 10 ಆಗಸ್ಟ್ 2008 (13:36 IST)
ಭೀಕಾ ಶರ್ಮಾ
ವೈವಿಧ್ಯಮಯ ಆಧ್ಯಾತ್ಮಿಕ ಆಚಾರ ವಿಚಾರಗಳಿಗೆ ಪ್ರಸಿದ್ಧವಾಗಿದೆ ಭಾರತ. ನಿಸ್ವಾರ್ಥ ಸೇವೆಯೇ ದೈವ ಸಂಪ್ರೀತಿ ಎಂದು ತಿಳಿದುಕೊಳ್ಳುವವರೂ ಇದ್ದಾರೆ. ಮಾನವೀಯತೆ ಎಂಬುದು ಭಾರತೀಯರ ರಕ್ತದಲ್ಲೇ ಇದೆ. ಯಾಕೆಂದರೆ ಸದ್ಗುಣಗಳನ್ನು ನಮ್ಮ ಹಿರಿಯರಿಂದ ಕೇಳಿ ತಿಳಿದುಕೊಂಡೇ ಬೆಳೆದವರು ನಾವು. ಇದನ್ನೇಕೆ ಹೇಳಬೇಕಾಯಿತೆಂದರೆ, ಕ್ವಿಂಟಾಲ್‌ಗಟ್ಟಲೆ ಆಹಾರ ಧಾನ್ಯಗಳನ್ನು ಪಕ್ಷಿಗಳಿಗಾಗಿಯೇ ವ್ಯಯಿಸುವ ವಿಶಿಷ್ಟ ಸಂಗತಿಯ ಬಗ್ಗೆ ಎಂದಾದರೂ ನೀವು ಕೇಳಿದ್ದೀರೇ? ಸಾವಿರಾರು ಗಿಳಿಗಳು ಇಲ್ಲಿ ಬಂದು ಈ ಆಹಾರವನ್ನು ಸೇವಿಸಿ ತೃಪ್ತವಾಗುತ್ತವೆ.ಇಂಥದ್ದೊಂದು ಪುಣ್ಯ ಕ್ಷೇತ್ರವನ್ನು ನಾವು ಈ ಬಾರಿಯ ಧಾರ್ಮಿಕ ಯಾತ್ರೆಯಲ್ಲಿ ನಿಮಗೆ ಪರಿಚಯಿಸುತ್ತಿದ್ದೇವೆ. ಇದು ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಪಂಚಕುಯಾ ಮಂದಿರ. (ಪಂಚ ಎಂದರೆ ಐದು, ಕುಂಯಾ ಎಂದರೆ ಬಾವಿ ಎಂಬರ್ಥ.)ಇಲ್ಲಿನ ಹನುಮಾನ್ ಮಂದಿರ ಬಹು ಪ್ರಸಿದ್ಧ. ಇಲ್ಲಿ ಬಂದರೆ ಸಾವಿರ ಇಲ್ಲವೇ ಅದಕ್ಕೂ ಹೆಚ್ಚು ಗಿಳಿಗಳನ್ನು ನೀವು ಕಾಣಬಹುದು. ಈ ಮಂದಿರದಲ್ಲಿ ಮಾನವರು ಮಾತ್ರವೇ ಅಲ್ಲ, ಗಿಳಿಗಳು ಕೂಡ ತಮ್ಮ ಭಕ್ತಿಯನ್ನು ಪ್ರದರ್ಶಿಸುತ್ತವೆ. ಈ ಮಂದಿರದ ಆವರಣದೊಳಗೆ ಸಣ್ಣದೊಂದು ಶಿವ ಮಂದಿರವೂ ಇದೆ.ಈ ಮಂದಿರದಲ್ಲಿರುವ ಸಂತರ ಪ್ರಕಾರ, ಅದೆಷ್ಟೋ ವರ್ಷಗಳಿಂದ ಈ ಗಿಳಿಗಳು ಈ ಕ್ಷೇತ್ರವನ್ನು ಸಂದರ್ಶಿಸುತ್ತಿವೆ. ಈ ಗಿಳಿವಿಂಡಿಗಾಗಿಯೇ ಹಾಕುತ್ತಿರುವ ಆಹಾರ ಧಾನ್ಯ-ಬೇಳೆಕಾಳುಗಳ ಪ್ರಮಾಣ ಎಷ್ಟು ಗೊತ್ತೇ? ದಿನವೊಂದಕ್ಕೆ ನಾಲ್ಕು ಕ್ವಿಂಟಾಲ್!
ಇಲ್ಲಿನ ವಿಶೇಷತೆಯೆಂದರೆ, ಈ ಆಹಾರವನ್ನು ಸೇವಿಸುವ ಮೊದಲು ಗಿಳಿಗಳು ಹನುಮನನ್ನು ಪ್ರಾರ್ಥಿಸುತ್ತವೆ. ಅಂದರೆ ಹನುಮ ವಿಗ್ರಹಕ್ಕೆ ಅಭಿಮುಖವಾಗಿ ಕುಳಿತುಕೊಳ್ಳುತ್ತವೆ. ಆ ಬಳಿಕವೇ ಆಹಾರ ಸೇವಿಸುತ್ತವೆ.ಗಿಳಿಗಳ ಸಂಖ್ಯೆ ಹೆಚ್ಚುತ್ತಲೇ ಇರುವ ಕಾರಣದಿಂದಾಗಿ, ಮಂದಿರದ ಆಡಳಿತ ಮಂಡಳಿ ಮತ್ತು ಇತರ ಭಕ್ತಾದಿಗಳ ನೆರವಿನಿಂದ ಗಿಳಿಗಳಿಗಾಗಿಯೇ 3000 ಚದರಡಿಯ ಟೆರೇಸ್ ಒಂದನ್ನು ರಚಿಸಲಾಗಿದೆ.
ದಿನಂಪ್ರತಿ ಬೆಳಿಗ್ಗೆ 5.30ರಿಂದ 6 ಮತ್ತು ಸಂಜೆ 4ರಿಂದ 5 ಗಂಟೆಯ ನಡುವೆ ಗಿಳಿಗಳಿಗಾಗಿ ಆಹಾರ ಧಾನ್ಯ ಹರಡುವ ಕಾಯಕದಲ್ಲಿ ನಿರತರಾಗಿರುವ ರಮೇಶ್ ಅಗರ್ವಾಲ್ ಅವರ ಪ್ರಕಾರ, ದಿನವೊಂದಕ್ಕೆ ಬಂದಿರುವ ಗಿಳಿಗಳ ಸಂಖ್ಯೆಯು ಹೆಚ್ಚು ಅಥವಾ ಕಡಿಮೆ ಇದ್ದರೆ, ಅದಕ್ಕೆ ಅನುಗುಣವಾಗಿ ಆಹಾರವನ್ನು ಟೆರೇಸ್‌ನಲ್ಲಿ ಹರಡಲಾಗುತ್ತದೆ. ಒಂದು ಗಂಟೆಯೊಳಗೆ ಧಾನ್ಯಗಳೆಲ್ಲವೂ ಖಾಲಿಯಾಗಿಬಿಡುತ್ತವೆ.
ಇಲ್ಲಿಗೆ ಭೇಟಿ ನೀಡುವ ಭಕ್ತಾದಿಗಳಿಗೆ ಭಂಡಾರದ ಮೂಲಕ ಪ್ರಸಾದ ವಿತರಣೆ ಆಯೋಜಿಸಲಾಗುತ್ತದೆ. ಅದೇ ರೀತಿಯಾಗಿ ಗಿಳಿಗಳಿಗೂ ಆಹಾರ ಪ್ರಸಾದ ವಿತರಣೆಯಾಗುತ್ತಿರುವುದು ಕಾಕತಾಳೀಯವಷ್ಟೆ. ಇದು ಗಿಳಿಗಳ ದೈವಭಕ್ತಿಯ ಪ್ರತೀಕವೂ ಹೌದು, ಮಾನವೀಯತೆಯ ಶ್ರದ್ಧಾಕೇಂದ್ರವೂ ಹೌದು. ನೀವೇನು ಹೇಳುತ್ತೀರಿ?