Select Your Language

Notifications

webdunia
webdunia
webdunia
webdunia

ಕಲಿಯುಗ ವರದ ಶಬರಿಮಲೆ ಅಯ್ಯಪ್ಪ

ಕಲಿಯುಗ ವರದ ಶಬರಿಮಲೆ ಅಯ್ಯಪ್ಪ
WD
ಕಲಿಯುಗದಲ್ಲಿ ಕ್ಷಿಪ್ರ ವರಪ್ರಸಾದ ಅನುಗ್ರಹಿಸುವ ದೇವರು ಎಂಬ ನಂಬಿಕೆಗೆ ಪಾತ್ರವಾಗಿರುವ ಶ್ರೀ ಸ್ವಾಮಿ ಅಯ್ಯಪ್ಪನ ನೆಲೆವೀಡು ಕೇರಳದ ಶಬರಿಮಲೆ. ಇದು ವಿಶ್ವದ ಅತ್ಯಂತ ಹೆಚ್ಚು ಭಕ್ತ ಸಮುದಾಯವು ಸಂದರ್ಶಿಸುವ ಧಾರ್ಮಿಕ ತಾಣಗಳಲ್ಲೊಂದು. ಮೆಕ್ಕಾದ ಹಜ್ ಬಳಿಕ ವಿಶ್ವದ ಎರಡನೇ ಅತಿದೊಡ್ಡ ವಾರ್ಷಿಕ ಯಾತ್ರಾ ಕೇಂದ್ರ ಶಬರಿಮಲೆ ಎಂದೂ ಹೇಳಲಾಗುತ್ತಿದೆ. ಕಳೆದ ವರ್ಷದ ನವೆಂಬರ್‌ನಿಂದ ಜನವರಿವರೆಗೆ ಅಂದಾಜು ಐದು ಕೋಟಿ ಭಕ್ತರು ಈ ಕ್ಷೇತ್ರವನ್ನು ಸಂದರ್ಶಿಸಿದ್ದಾರೆ.

ಇಲ್ಲಿ ಅಯ್ಯಪ್ಪ ಸ್ವಾಮಿ (ಧರ್ಮ ಶಾಸ್ತ) ಕಲಿಯುಗ ವರದನಾಗಿ ನೆಲೆ ನಿಂತಿದ್ದಾನೆ. ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಯಾತ್ರಾ ಕೇಂದ್ರಗಳಲ್ಲೊಂದಾಗಿರುವ ಶಬರಿಮಲೆ ಇರುವುದು ಕೇರಳ-ತಮಿಳುನಾಡು ಗಡಿಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ. ದಟ್ಟ ಅರಣ್ಯಗಳಿರುವ ಪೂಂಗಾವನಂ ಎಂಬ 18 ಪರ್ವತಗಳಿಂದ ಈ ಕ್ಷೇತ್ರವು ಆವೃತವಾಗಿದೆ. ಅಯ್ಯಪ್ಪ ಸ್ವಾಮಿ ವಿಗ್ರಹವನ್ನು ಪರಶುರಾಮನು ಸ್ಥಾಪಿಸಿದನೆಂಬ ಪ್ರತೀತಿ ಇದೆ.

ಶಬರಿ ಮಲೆ ಅಯ್ಯಪ್ಪ ಸ್ವಾಮಿಯ ಫೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

webdunia
WD
ಪೌರಾಣಿಕ ಹಿನ್ನೆಲೆ: ಅಯ್ಯಪ್ಪ ಸ್ವಾಮಿಯು ಹರಿ ಮತ್ತು ಹರರಿಗೆ ಜನಿಸಿದ ಎಂದು ಪುರಾಣ ಹೇಳುತ್ತದೆ. ಭಸ್ಮಾಸುರನನ್ನು ವಧಿಸಲು ಮೋಹಿನಿ ರೂಪ ತಾಳಿ ಬಂದ ವಿಷ್ಣುವಿನ ರೂಪಕ್ಕೆ ಈಶ್ವರನು ಮನಸೋತ. ಅವರಿಬ್ಬರ ಸಾಂಗತ್ಯದಿಂದ ಪುಟ್ಟ ಬಾಲಕನೊಬ್ಬ ಆವಿರ್ಭವಿಸಿದ. ಆ ಬಾಲಕನನ್ನು ವಿಷ್ಣು ಮತ್ತು ಈಶ್ವರ ಕಾಡಿನಲ್ಲಿ ಇರಿಸಿ, ಪುತ್ರ ಸಂತಾನಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದ ಪಂದಳ ರಾಜ ಬೇಟೆಗೆಂದು ಕಾಡಿಗೆ ಬಂದಾಗ ಆವನ ಕೈಗೆ ದೊರೆಯುವಂತೆ ಮಾಡಿದರು.

webdunia
WD
ಇಲ್ಲಿ ಮಂಡಲಪೂಜೆ (ನವೆಂಬರ್ 15) ಮತ್ತು ಮಕರವಿಳಕ್ಕು (ಜನವರಿ 14) ಇವೆರಡು ಯಾತ್ರಾ ಅವಧಿಯ ಪ್ರಧಾನ ಧಾರ್ಮಿಕ ಕಾರ್ಯಕ್ರಮಗಳು. ವರ್ಷದ ಇತರ ಅವಧಿಯಲ್ಲಿ ಮಲಯಾಳೀ ವರ್ಷದ ಮೊದಲ ಐದು ದಿನಗಳು ಹಾಗೂ ವಿಷು (ಏಪ್ರಿಲ್) ದಿನದ ಹೊರತಾಗಿ ಈ ಮಂದಿರವು ಮುಚ್ಚಿರುತ್ತದೆ.

ಪಳ್ಳಿಕಟ್ಟು (ಇರುಮುಡಿ) ಕಟ್ಟಿ ಅಯ್ಯಪ್ಪ ಯಾತ್ರಿಗಳು ತರುವ ತುಪ್ಪವನ್ನು ಅಯ್ಯಪ್ಪ ವಿಗ್ರಹದ ಮೇಲೆ ಅಭಿಷೇಕ ಮಾಡಲಾಗುತ್ತದೆ. ಇದು ಜೀವಾತ್ಮವನ್ನು ಪರಮಾತ್ಮನೊಂದಿಗೆ ಮಿಳಿತಗೊಳಿಸುವುದು ಎಂಬುದರ ಪ್ರತೀಕ.

ಶಬರಿಮಲೆ ಅಯ್ಯಪ್ಪ ಸ್ವಾಮಿಯ ಫೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

webdunia
WD
ಈ ಮಂದಿರದಲ್ಲಿ ದೊರೆಯುವ ಪರಮ ಜ್ಞಾನವೆಂದರೆ "ಅಹಂ ಬ್ರಹ್ಮಾಸ್ಮಿ" ಎಂಬುದು. ಎಲ್ಲರೂ ದೇವರು, ದೈವಾಂಶ ಸಂಭೂತರು ಎಂಬುದು ಇದರ ಹಿಂದಿನ ತತ್ವ. ಅದಕ್ಕಾಗಿಯೇ ಅಯ್ಯಪ್ಪ ವ್ರತಧಾರಿಗಳು ಪರಸ್ಪರರನ್ನು, ಅಥವಾ ಯಾರನ್ನೇ ಆದರೂ ಸ್ವಾಮಿ ಎಂದು ಸಂಬೋಧಿಸುತ್ತಾರೆ.

ಮಕರವಿಳಕ್ಕು ಎಂಬುದು ಶಬರಿಮಲೆಯ ಅತ್ಯಂತ ಪ್ರಮುಖ ಪೂಜೆ. ಮಕರ ಸಂಕ್ರಮಣದ ಆ ದಿನದಂದು ಯಾತ್ರಾರ್ಥಿಗಳಿಗೆ ಪರ್ವತದ ಮಧ್ಯೆ "ಮಕರ ಜ್ಯೋತಿ" ಕಾಣಿಸುತ್ತದೆ. ಇದರೊಂದಿಗೆ ಶಬರಿಮಲೆಯಾತ್ರೆಯ ವಾರ್ಷಿಕ ವೈಭವಕ್ಕೆ ತೆರೆಬೀಳುತ್ತದೆ.

ಶಬರಿಮಲೆ ಯಾತ್ರೆ ಮಾಡಬೇಕಾದವರು ಕೆಲವೊಂದು ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ. ಮಂಡಲಪೂಜೆಯಲ್ಲಿ ಭಾಗವಹಿಸುವ ಯಾತ್ರಿಯು 41 ದಿನಗಳ ಕಠಿಣ ವ್ರತದಲ್ಲಿ ಇರಬೇಕಾಗುತ್ತದೆ. ಈ ಅವಧಿಯಲ್ಲಿ ಮದ್ಯ-ಮಾಂಸ ಮತ್ತಿತರ ಐಹಿಕ ಸುಖಗಳಿಂದ ಆತ ದೂರವಾಗಿರಬೇಕಾಗುತ್ತದೆ.

webdunia
WD
ಒಬ್ಬ ನಾಯಕನ (ಗುರುಸ್ವಾಮಿ) ಮುಂದಾಳುತ್ವದಲ್ಲಿ ವ್ರತಧಾರಿಗಳ ಗುಂಪು ತಲೆಯಲ್ಲಿ ಇರುಮುಡಿ ಕಟ್ಟು ಹೊತ್ತು ಯಾತ್ರೆಗೆ ಹೊರಡುತ್ತದೆ. ಶಬರಿಮಲೆ ಸಂದರ್ಶಿಸಬೇಕಾದರೆ ಜಾತಿ-ಮತಭೇದಗಳಿಲ್ಲ. ಆದರೆ 10ರಿಂದ 50 ವರ್ಷದ ನಡುವಿನ (ರಜಸ್ವಲೆಯಾದ) ಮಹಿಳೆಯರಿಗೆ ಮಾತ್ರ ಮುಖ್ಯ ಮಂದಿರಕ್ಕೆ ಪ್ರವೇಶ ನಿಷಿದ್ಧ.

ಸನ್ನಿಧಾನದ ಪೂರ್ವಭಾಗದಲ್ಲಿ ಅಯ್ಯಪ್ಪನ ಅನುಯಾಯಿಯಾಗಿ ಪರಿವರ್ತನೆಗೊಂಡ ವಾವರನಿಗೆ ಮೀಸಲಾದ 'ವಾವರುನಾಡ' ತಾಣವೊಂದಿದೆ. ವಾವರ ಮುಸಲ್ಮಾನನಾಗಿದ್ದು, ಈ ತಾಣದ ವಿಶೇಷತೆಯೆಂದರೆ ಎಲ್ಲಾ ಧರ್ಮೀಯರೂ ಇಲ್ಲಿಗೆ ಯಾತ್ರೆ ಕೈಗೊಳ್ಳುತ್ತಾರೆ.

ಶಬರಿಮಲೆ ಅಯ್ಯಪ್ಪ ಸ್ವಾಮಿಯ ಫೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

ಯಾವಾಗ ಹೋಗಬೇಕು?
webdunia
WD

ಶಬರಿಮಲೆ ಯಾತ್ರೆ ಸೀಸನ್ ಆರಂಭವಾಗುವುದು ನವೆಂಬರ್ ತಿಂಗಳಲ್ಲಿ. ಜನವರಿ 14ರವರೆಗೆ ಇದು ಇರುತ್ತದೆ. ಯಾತ್ರಿಗಳು 41 ದಿನ ವ್ರತ ಆಚರಿಸಿದ ಬಳಿಕ ಯಾತ್ರೆಗೆ ಹೊರಡಬೇಕು. ಈ ಅವಧಿಯಲ್ಲಿ ಮದ್ಯ-ಮಾಂಸ-ಮಾನಿನಿ ಸಂಗ, ರಾಜಸಿಕ ಆಹಾರ ವರ್ಜನೆ, ವಿಶಿಷ್ಟವಾದ ಕರಿ ಅಂಗಿ ಮತ್ತು ಧೋತಿ, ಅಂಗವಸ್ತ್ರ ಧಾರಣೆ, ಬಾಹ್ಯವಾಗಿ ಮತ್ತು ಆಂತರಿಕವಾಗಿ ಮತ್ತು ಪರಿಶುಭ್ರತೆಗೆ ಹೆಚ್ಚಿನ ಮಹತ್ವ ನೀಡಬೇಕು. ತುಪ್ಪ ಮತ್ತು ಇತರ ಪೂಜಾಸಾಮಗ್ರಿ ಇರುವ ಇರುಮುಡಿಕಟ್ಟು ಹೊತ್ತ ಭಕ್ತರಿಗೆ ಅಯ್ಯಪ್ಪ ದೇವಳದ 18 ಮೆಟ್ಟಲು ಏರಲು ಅವಕಾಶ ನೀಡಲಾಗುತ್ತದೆ.

ಮಂದಿರದ ಆಡಳಿತ ನೋಡಿಕೊಳ್ಳುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಭಕ್ತಾದಿಗಳಿಗೆ ಕಡಿಮೆ ವೆಚ್ಚದಲ್ಲಿ ವಸತಿ ವ್ಯವಸ್ಥೆ ಮಾಡುತ್ತಿದೆಯಾದರೂ ಸೀಸನ್ ಸಂದರ್ಭದಲ್ಲಿ ವಸತಿ ಸಿಗುವುದು ಕಷ್ಟವಾಗುತ್ತದೆ.

ಶಬರಿಮಲೆಗೆ ಹೋಗುವುದು ಹೇಗೆ?

webdunia
WD
ವಾಹನದಲ್ಲಿ ಹೋಗುವುದಾದರೆ, ವಾಹನಗಳು ಪಂಪಾವರೆಗೆ ಮಾತ್ರ ಹೋಗುತ್ತವೆ. ಅಲ್ಲಿಂದ ಸುಮಾರು 4 ಕಿ.ಮೀ. ದೂರವನ್ನು ಭಕ್ತಾದಿಗಳು ಕಡಿದಾದ ಬೆಟ್ಟ ಏರಿ ಕ್ರಮಿಸಬೇಕು. ಈಗ ಸಿಮೆಂಟ್ ಹಾಸಲಾಗಿರುವ ಈ ಪಥದ ಅಕ್ಕಪಕ್ಕ ತಾತ್ಕಾಲಿಕ ಅಂಗಡಿ-ಹೋಟೆಲ್‌ಗಳಿವೆ. ವೈದ್ಯಕೀಯ ಸೌಲಭ್ಯಗಳೂ ಅಲ್ಲಲ್ಲಿವೆ. ಅನಾರೋಗ್ಯವಿರುವವರು ಶಬರಿಮಲೆ ಬೆಟ್ಟವೇರದಿರುವುದು ಒಳಿತು.

ಶಬರಿಮಲೆಗೆ ಸಮೀಪದ ರೈಲು ನಿಲ್ದಾಣವೆಂದರೆ ಕೋಟ್ಟಾಯಂ ಮತ್ತು ಚೆಂಗನ್ನೂರ್ (93 ಕಿ.ಮೀ.). ಎರ್ನಾಕುಲಂನಿಂದ ತಿರುವನಂತ ಪುರ (ತ್ರಿವೇಂಡ್ರಂ)ಕ್ಕೆ ಬರುವ ಎಲ್ಲಾ ರೈಲುಗಳು ಈ ನಿಲ್ದಾಣದಲ್ಲಿ ನಿಲ್ಲುತ್ತವೆ.

ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಶಬರಿಮಲೆಗೆ ಇರುವ ದೂರ 175 ಕಿ.ಮೀ. ಅಂತೆಯೇ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಬರಿಮಲೆಯು 200 ಕಿ.ಮೀ. ದೂರದಲ್ಲಿದೆ.

webdunia
WD
ಯಾತ್ರಾ ಸೀಸನ್‌ನಲ್ಲಿ ಭಕ್ತರು ಹಲವಾರು ಮಾರ್ಗಗಳ ಮೂಲಕ ಸನ್ನಿಧಾನ ತಲುಪಬಹುದು. ಒಂದೋ ಚಲಕಾಯಂ ಪಟ್ಟಣ ಅಥವಾ ಎರುಮಲೆ ಪಟ್ಟಣದಿಂದ ಆರಂಭವಾಗುವ ಕರಿಮಲ ಪರ್ವತವನ್ನು ಬರಿಗಾಲಲ್ಲಿ ಏರುವ ಮೂಲಕ ಅಯ್ಯಪ್ಪನ ಸನ್ನಿಧಿಗೆ ತೆರಳಬಹುದು. ಇದರ ದೂರ ಸುಮಾರು 50 ಕಿ.ಮೀ.

ಶಬರಿಮಲೆ ಅಯ್ಯಪ್ಪ ಸ್ವಾಮಿಯ ಫೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

Share this Story:

Follow Webdunia kannada