ಇಂದೋರ್‌ನ ದತ್ತಾತ್ರೇಯ ಮಂದಿರ
ರೂಪಾಲಿ ಬರ್ವೆ ಧಾರ್ಮಿಕ ಯಾತ್ರೆ ಕಥನ ಮಾಲಿಕೆಯಲ್ಲಿ ಈ ಬಾರಿ ನಾವು ಇಂದೋರ್‌ನ ಐತಿಹಾಸಿಕ ಭಗವಾನ್ ದತ್ತಾತ್ರೇಯ ಮಂದಿರವನ್ನು ನೋಡೋಣ. ದತ್ತಾತ್ರೇಯನನ್ನು ಬ್ರಹ್ಮ, ವಿಷ್ಣು, ಮಹೇಶ್ವರರ ಅವತಾರ ಎಂದು ಪರಿಗಣಿಸಲಾಗುತ್ತದೆ. ಅಂತೆಯೇ ಗುರು ದೇವ ದತ್ತ ಎಂದೂ ದತ್ತಾತ್ರೇಯನನ್ನು ಪೂಜಿಸಲಾಗುತ್ತದೆ.ಇಲ್ಲಿನ ದತ್ತಾತ್ರೇಯ ಮಂದಿರವು ಸುಮಾರು 700 ವರ್ಷಗಳಷ್ಟು ಹಳೆಯದು ಎಂಬ ನಂಬಿಕೆ ಇದೆ. ಹೋಳ್ಕರ್ ರಾಜಕುಟುಂಬದ ರಾಜಧಾನಿಯಾಗಿತ್ತು ಇಂದೋರ್. ಹೋಳ್ಕರ್ ಸಾಮ್ರಾಜ್ಯದ ಸಂಸ್ಥಾಪಕ ಸುಬೇದಾರ್ ಮಲ್ಹಾರ್‌ರಾವ್ ಹೋಳ್ಕರ್ ಆಗಮಿಸುವುದಕ್ಕೆ ಸಾಕಷ್ಟು ಮೊದಲೇ ಈ ಮಂದಿರದ ನಿರ್ಮಾಣವಾಗಿತ್ತು ಎಂದು ಇತಿಹಾಸ ಹೇಳುತ್ತದೆ.
ಉಜ್ಜೈನಿಯಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಆಚರಿಸಲಾಗುವ ಸಿಂಹಸ್ಥ ಕುಂಭಮೇಳದ ಸಂದರ್ಭದಲ್ಲಿ ಶಂಕರಾಚಾರ್ಯರೂ ಸೇರಿದಂತೆ ಹಲವಾರು ಸಾಧುಗಳು, ಗುರುಗಳು ಈಗ ಉಜ್ಜೈನಿ ಎಂದು ಕರೆಯಲಾಗುತ್ತಿರುವ ಮಹಾಕಾಳೇಶ್ವರ ನೆಲಸಿದ ಪವಿತ್ರ ನಾಡು ಆವಂತಿಕಾಗೆ ಪ್ರಯಾಣ ಬೆಳೆಸುವ ಸಂದರ್ಭ ಈ ಮಂದಿರದಲ್ಲಿ ತಂಗುತ್ತಿದ್ದರು ಎಂಬುದಕ್ಕೆ ಇತಿಹಾಸದಲ್ಲಿ ಪುರಾವೆ ದೊರೆಯುತ್ತದೆ.ಮಧ್ಯ ಭಾರತದಲ್ಲಿ ಧರ್ಮ ಬೋಧನೆಗಾಗಿ ಬಂದಿದ್ದ ಗುರು ನಾನಕ್ ಅವರು ಮೂರು ತಿಂಗಳ ಕಾಲ ಇಮಾಲಿ ಸಾಹಿಬ್ ಗುರುದ್ವಾರದಲ್ಲಿ ತಂಗಿದ್ದರು. ಅವರಿಲ್ಲಿ ತಂಗುತ್ತಿದ್ದ ಸಂದರ್ಭದಲ್ಲಿ ಪ್ರತಿದಿನ ಸಂಜೆ ನದೀ ತಟಕ್ಕೆ ತೆರಳಿ, ಅಲ್ಲಿಯೇ ವಾಸಿಸುತ್ತಿದ್ದ ಸಂತರು, ಸಾಧುಗಳೊಂದಿಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚರ್ಚೆ ನಡೆಸುತ್ತಿದ್ದರು.ದತ್ತಾತ್ರೇಯ ಜನನಕ್ಕೆ ಸಂಬಂಧಿಸಿ ಪುರಾಣ ಕಥೆಯಿದೆ. ಪ್ರತಿವರ್ಷದ ಮಾರ್ಗಶಿರ ಹುಣ್ಣಿಮೆಯಂದು ದತ್ತ ಜಯಂತಿಯನ್ನು ಆಚರಿಸಲಾಗುತ್ತಿದೆ.ಗುರು ದತ್ತಾತ್ರೇಯನ ಪ್ರಾರ್ಥನೆ ಸಂದರ್ಭ ಗುರುಚರಿತೆಯ ಪಠಣಕ್ಕೆ ವಿಶೇಷ ಮಹತ್ವವಿದೆ. ಇದರಲ್ಲಿ 7491 ಶ್ಲೋಕಗಳು 52 ಅಧ್ಯಾಯಗಳಲ್ಲಿವೆ.
ದತ್ತ ಗುರುವಿನ ಮೂರ್ತಿಯೊಂದಿಗೆ ಯಾವತ್ತಿಗೂ ನಾವು ಗೋವು ಮತ್ತು ನಾಲ್ಕು ಶ್ವಾನಗಳ ಮೂರ್ತಿಯನ್ನೂ ಕಾಣುತ್ತೇವೆ. ಪುರಾಣ ಕಥೆಯ ಪ್ರಕಾರ, ಭೂಮಿ ಮತ್ತು ನಾಲ್ಕು ವೇದಗಳ ರಕ್ಷಣೆಗಾಗಿ ದತ್ತಾತ್ರೇಯನು ಈ ಭೂಮಿಯಲ್ಲಿ ಅವತರಿಸಿದನು. ಹಸುವು ಭೂಮಿಯನ್ನು ಪ್ರತಿನಿಧಿಸುತ್ತಿದ್ದರೆ, ನಾಲ್ಕು ಶ್ವಾನಗಳು ಚತುರ್ವೇದಗಳ ಸಂಕೇತ.
ಶೈವರು, ವೈಷ್ಣವರು ಮತ್ತು ಶಾಕ್ತರನ್ನು ಒಂದುಗೂಡಿಸುವ ನಿಟ್ಟಿನಲ್ಲಿ ದತ್ತಾತ್ರೇಯ ಗುರುವಿನ ಅನನ್ಯ ಖ್ಯಾತಿಯು ಇಡೀ ವಿಶ್ವಕ್ಕೇ ಪಸರಿಸಿದೆ. ಈ ಶ್ರೇಷ್ಠ ಗುರುವಿನ ಅನುಯಾಯಿಗಳಲ್ಲಿ ಮುಸ್ಲಿಮರೂ ಸೇರಿದಂತೆ ಅನ್ಯ ಸಮುದಾಯದವರೂ ಸಾಕಷ್ಟು ಮಂದಿ ಇದ್ದಾರೆ ಎಂಬುದು ಇಲ್ಲಿ ಉಲ್ಲೇಖಾರ್ಹ.
ಹೋಗುವುದು ಹೇಗೆ?
ವಾಯು ಮಾರ್ಗ: ಮಧ್ಯಪ್ರದೇಶದ ವಾಣಿಜ್ಯಕ ವಿಮಾನ ನಿಲ್ದಾಣ ಇಂದೋರ್‌ನಲ್ಲಿ ಅಹಿಲ್ಯಾಬಾಯಿ ವಿಮಾನ ನಿಲ್ದಾಣವಿದೆ.
ರೈಲು ಮಾರ್ಗ: ಇಂದೋರ್ ದೇಶದ ಪ್ರಮುಖ ಪಟ್ಟಣಗಳಿಂದ ರೈಲ್ವೇ ಸಂಪರ್ಕ ಹೊಂದಿದೆ.
ರಸ್ತೆ ಮಾರ್ಗ: ಆಗ್ರಾ-ಮುಂಬಯಿ ಹೆದ್ದಾರಿ ಸಂಪರ್ಕವಿರುವ ಇಂದೋರ್‌ಗೆ ಬಂದರೆ ಅಲ್ಲಿಂದ ಆಟೋ ಅಥವಾ ಯಾವುದೇ ಖಾಸಗಿ ಸಾರಿಗೆ ಸೇವೆ ಪಡೆಯಬಹುದು.