Select Your Language

Notifications

webdunia
webdunia
webdunia
webdunia

ಆರನ್ಮುಳದ ಪಾರ್ಥಸಾರಥಿ ಕ್ಷೇತ್ರ

ಆರನ್ಮುಳದ ಪಾರ್ಥಸಾರಥಿ ಕ್ಷೇತ್ರ
ಟಿ.ಪ್ರತಾಪಚಂದ್ರನ್
ಕೇರಳದ ಆರನ್ಮುಳ ಪಾರ್ಥಸಾರಥಿ ದೇವಸ್ಥಾನವು ರಾಜ್ಯದ ಅತ್ಯಂತ ಪುರಾತನ ಕ್ಷೇತ್ರಗಳಲ್ಲೊಂದು. ಇಲ್ಲಿ ಶ್ರೀ ಕೃಷ್ಣನು ಪಾರ್ಥಸಾರಥಿಯಾಗಿ ನೆಲೆಯಾಗಿದ್ದಾನೆ. ಪಟ್ಟಣಂತಿಟ್ಟ ಜಿಲ್ಲೆಯ ಆರನ್ಮುಳವು ಪವಿತ್ರವಾದ ಪಂಪಾ ನದಿಯ ತಟದಲ್ಲಿದೆ ಈ ಮಂದಿರ. ಪಾಂಡವರಲ್ಲಿ ಮಧ್ಯಮನಾದ ಅರ್ಜುನನಿಂದಲೇ ಈ ಮಂದಿರ ಕಟ್ಟಲ್ಪಟ್ಟಿದೆ ಎಂಬ ಪ್ರತೀತಿ ಇದೆ.

ಯುದ್ಧಕ್ಷೇತ್ರದಲ್ಲಿ ಶಸ್ತ್ರರಹಿತ ಕರ್ಣನನ್ನು ಕೊಂದ ಮಹಾಪಾಪವನ್ನು ನಿವಾರಿಸಲೋಸುಗ ಅರ್ಜುನನು ಆರನ್ಮುಳ ದೇವಸ್ಥಾನವನ್ನು ಕಟ್ಟಿಸಿದನೆಂಬ ಪ್ರತೀತಿ ಇದೆ. ಮತ್ತೊಂದು ಕಥೆಯ ಪ್ರಕಾರ, ಈ ಮಂದಿರವನ್ನು ಮೊದಲು ಶಬರಿಮಲೆ ಸಮೀಪದ ನೀಲಕಲ್ ಎಂಬಲ್ಲಿ ಕಟ್ಟಿಸಲಾಗಿತ್ತು ಮತ್ತು ದೇವರ ಚಿತ್ರವನ್ನು ಬಿದಿರಿನ ಆರು ತುಂಡುಗಳಿಂದ ಮಾಡಲಾದ ತೆಪ್ಪದ ಮೂಲಕ ಇಲ್ಲಿಗೆ ತರಲಾಯಿತು. ಹೀಗಾಗಿಯೇ ಇದಕ್ಕೆ ಆರನ್ಮುಳ (ಬಿದಿರಿನ ಆರು ತುಂಡುಗಳು) ಎಂಬ ಹೆಸರು ಬಂತೆಂದೂ ಹೇಳಲಾಗುತ್ತಿದೆ.

ಪ್ರತಿ ವರ್ಷ ಅಯ್ಯಪ್ಪ ಸ್ವಾಮಿಗೆ ತಂಗ ಅಂಗಿ (ಚಿನ್ನದ ಅಂಗಿ)ಯನ್ನು ವೈಭವೋಪೇತ ಮೆರವಣಿಗೆಯ ಮೂಲಕ ಈ ಪಾರ್ಥಸಾರಥಿ ದೇವಸ್ಥಾನದಿಂದಲೇ ತರಲಾಗುತ್ತದೆ. ಓಣಂ ಉತ್ಸವದ ಸಂದರ್ಭದಲ್ಲಿ ವಿಖ್ಯಾತ ದೋಣಿ ಸ್ಪರ್ಧೆ ನಡೆಯುವುದು ಕೂಡ ಇದೇ ಸ್ಥಳದಲ್ಲಿ. ಇಷ್ಟು ಮಾತ್ರವಲ್ಲದೆ, ಈ ದೇವಸ್ಥಾನದಲ್ಲಿ 18ನೇ ಶತಮಾನದ ಕಲಾವಿದರಿಂದ ಚಿತ್ರಿಸಲಾದ ವರ್ಣಚಿತ್ರಗಳ ಐತಿಹಾಸಿಕ ಸಂಗ್ರಹವಿದೆ.

WD
ಆರನ್ಮುಳ ಪಾರ್ಥಸಾರಥಿ ಮಂದಿರವು ಕೇರಳ ವಾಸ್ತುಶಿಲ್ಪ ಶೈಲಿಯ ಅತ್ಯದ್ಭುತ ಮಾದರಿ. ಪಾರ್ಥಸಾರಥಿ ವಿಗ್ರಹವು ಆರಡಿ ಎತ್ತರವಿದೆ. ದೇವಸ್ಥಾನದ ಗೋಡೆಗಳನ್ನು 18ನೇ ಸತಮಾನದ ತೈಲವರ್ಣಚಿತ್ರಗಳು ಅಲಂಕರಿಸಿವೆ. ನಾಲ್ಕೂ ದಿಕ್ಕುಗಳಲ್ಲಿ ನಾಲ್ಕು ಗೋಪುರಗಳನ್ನು ಹೊಂದಿರುವ ದೇವಸ್ಥಾನದ ಪೂರ್ವ ಗೋಪುರಕ್ಕೆ 18 ಮೆಟ್ಟಲುಗಳಿವೆ.

ದೇವಸ್ಥಾನದ ಬಿಂಬ ಪ್ರತಿಷ್ಠೆಯ ವಾರ್ಷಿಕೋತ್ಸವವನ್ನು 10 ದಿನಗಳ ಕಾಲ ನಡೆಯುವ ವಾರ್ಷಿಕ ಜಾತ್ರೆಯಾಗಿ ಆಚರಿಸಲಾಗುತ್ತದೆ. ಓಣಂ ಸಮಯದಲ್ಲಿ ಈ ಉತ್ಸವದ ಆಚರಣೆಯಾಗುತ್ತದೆ. ಆರನ್ಮುಳ ಮಂದಿರವು ಹೆಚ್ಚು ಪ್ರಸಿದ್ಧವಾಗಿರುವುದು ಅದರ ಜಲ ಉತ್ಸವ “ಆರನ್ಮುಳ ವಲ್ಲಂಕಲಿ” (ಆರನ್ಮುಳ ದೋಣಿ ಸ್ಪರ್ಧೆ)ಗಾಗಿ.

webdunia
WD
ಅಕ್ಕಿ ಮತ್ತಿತರ ಸಾಮಗ್ರಿಗಳನ್ನು ದೋಣಿಯ ಮೂಲಕ ಸಮೀಪದ ‘ಮಾಂಗಾಡ್’ ಎಂಬಲ್ಲಿನ ಹಬ್ಬಕ್ಕೆ ಕೊಡುಗೆಯಾಗಿ ಕಳುಹಿಸುವ ಸಂಪ್ರದಾಯವೇ ಈ ದೋಣಿ ಸ್ಪರ್ಧೆಗೆ ಮೂಲ ಹೇತು ಎನ್ನಲಾಗುತ್ತಿದೆ. ಈ ಸಂಪ್ರದಾಯ ಇಂದಿಗೂ ಮುಂದುವರಿದಿದೆ. ಕೊಡಿಯಾಟ್ಟಂ (ಧ್ವಜಾರೋಹಣ) ಮೂಲಕ ಆರಂಭವಾಗುವ ಈ ಉತ್ಸವವು ಪಂಪಾ ನದಿಯಲ್ಲಿ ಆರಾಟ್ಟು (ದೇವರಿಗೆ ಪವಿತ್ರ ಸ್ನಾನ) ಮೂಲಕ ಸಮಾಪನಗೊಳ್ಳುತ್ತದೆ.

ಗರುಡವಾಹನ ಏಳುನಲ್ಲತ್ತು ಎಂಬುದು ಈ ಉತ್ಸವದ ಸಂದರ್ಭದಲ್ಲಿ ನಡೆಯುವ ವರ್ಣರಂಜಿತ ಮೆರವಣಿಗೆ. ಇದರಲ್ಲಿ ಪಾರ್ಥಸಾರಥಿ ದೇವರನ್ನು ಗರುಡನ ಮೇಲೆ ಕುಳ್ಳಿರಿಸಿ, ಗಜ ಪಡೆಗಳಿಂದೊಡಗೂಡಿದ ಮೆರವಣಿಗೆಯಲ್ಲಿ ಪಂಪಾ ನದಿ ತಟಕ್ಕೆ ಕರೆದೊಯ್ಯಲಾಗುತ್ತದೆ. ಉತ್ಸವದ ಸಂದರ್ಭದಲ್ಲಿ ವಲ್ಲ ಸದ್ಯ ಎಂಬ ವಿಶೇಷ ಪ್ರಸಾದ ದೊರೆಯುತ್ತದೆ.

webdunia
WD
ಇಲ್ಲಿ ಆಚರಿಸಲಾಗುವ ಮತ್ತೊಂದು ಉತ್ಸವವೆಂದರೆ ಖಾಂಡವ ವನ ದಹನ. ಧನುರ್ಮಾಸದಲ್ಲಿ ಇದನ್ನು ಆಚರಿಸಲಾಗುತ್ತದೆ. ಈ ಉತ್ಸವದ ಸಂದರ್ಭ, ದೇವಸ್ಥಾನದೆದುರು ಒಣಗಿದ ಎಲೆ, ಗಿಡಗಳಿರುವ ಖಾಂಡವ ಅರಣ್ಯದ ಪ್ರತಿಕೃತಿಯೊಂದನ್ನು ನಿರ್ಮಿಸಲಾಗುತ್ತದೆ. ಮಹಾಭಾರತದ ಖಾಂಡವ ವನ ದಹನ ಪ್ರಸಂಗವನ್ನು ಬಿಂಬಿಸುವ ಮಾದರಿಯಲ್ಲಿ, ಬಳಿಕ ಈ ವನದ ಪ್ರತಿಕೃತಿಗೆ ಬೆಂಕಿ ಹಚ್ಚಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವಾದ ಅಷ್ಟಮಿಯನ್ನು ಕೂಡ ದೇವಸ್ಥಾನದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ.

ಇಲ್ಲಿಗೆ ಹೋಗುವುದು ಹೇಗೆ:

ರಸ್ತೆ ಮಾರ್ಗ: ಜಿಲ್ಲಾ ಕೇಂದ್ರ ಪಟ್ಟಣಂತಿಟ್ಟದಿಂದ ಆರುನ್ಮಳವು 16 ಕಿ.ಮೀ. ದೂರದಲ್ಲಿದ್ದು, ಸಾಕಷ್ಟು ಬಸ್ ಸೌಕರ್ಯಗಳಿವೆ.

ರೈಲು: ಸಮೀಪದ ರೈಲು ನಿಲ್ದಾಣವೆಂದರೆ ಚೆಂಗನ್ನೂರು. ಇದು ಇಲ್ಲಿಂದ 14 ಕಿ.ಮೀ. ದೂರದಲ್ಲಿದೆ.

ವಿಮಾನ ನಿಲ್ದಾಣ: ಸಮೀಪದ ವಿಮಾನ ನಿಲ್ದಾಣವೆಂದರೆ ಇಲ್ಲಿಂದ 110 ಕಿ.ಮೀ. ದೂರದಲ್ಲಿರುವ ಕೊಚ್ಚಿ.

(ವೀಡಿಯೋ ಮತ್ತು ಚಿತ್ರಗಳು: ಅಂಬಿ, ಅರನ್ಮುಳ)


Share this Story:

Follow Webdunia kannada