Select Your Language

Notifications

webdunia
webdunia
webdunia
webdunia

ಅಹಮದಾಬಾದಿನ ಜಗನ್ನಾಥ ಮಂದಿರ

ಅಹಮದಾಬಾದಿನ ಜಗನ್ನಾಥ ಮಂದಿರ
(ವೆಬ್‌ದುನಿಯಾ ಡೆಸ್ಕ್)
ಸಂಪತ್ತು ಮತ್ತು ಸೌಂದರ್ಯಕ್ಕಾಗಿ ಪ್ರಖ್ಯಾತಿ ಪಡೆದಿದೆ ಅಹಮದಾಬಾದಿನಲ್ಲಿರುವ ಶ್ರೀ ಜಗನ್ನಾಥ ದೇವಾಲಯ. ಇದು ನಗರದ ಜಮಲ್‌ಪುರ ಪ್ರದೇಶದಲ್ಲಿದ್ದು, ಅಹಮದಾಬಾದ್ ಪಟ್ಟಣದ ವೈಭವದ ಸಂಕೇತವೂ ಆಗಿದೆ.

ಸುಮಾರು 150 ವರ್ಷಗಳ ಹಿಂದೆ ಈ ದೇವಳದ ನಿರ್ಮಾಣವಾಯಿತು. ಇಲ್ಲಿನ ಸಂತ ನರಸಿಂಗದಾಸಜಿ ಎಂಬವರ ಕನಸಿನಲ್ಲಿ ಕಾಣಿಸಿಕೊಂಡ ಜಗನ್ನಾಥ ದೇವನು, ತನ್ನ ಸಹೋದರ ಬಲದೇವ ಮತ್ತು ಸಹೋದರಿ ಸುಭದ್ರೆ ಸಹಿತವಾಗಿ ತನಗೊಂದು ಆಲಯ ಕಟ್ಟಿಸುವಂತೆ ಕೋರಿಕೊಂಡನು ಎಂಬ ಪ್ರತೀತಿ ಇದೆ. ಈ ಕನಸಿನ ಬಗ್ಗೆ ಗ್ರಾಮಸ್ಥರಿಗೆಲ್ಲಾ ತಿಳಿಸಿದ ಸಂತ ನರಸಿಂಗದಾಸಜಿ ಅವರು, ಸಂತೋಷದಿಂದಲೇ ಈ ದೇವಾಲಯವನ್ನು ನಿರ್ಮಿಸಿದರು.

ಜಗನ್ನಾಥನು ಆ ಮಂದಿರದಲ್ಲಿ ನೆಲೆಯಾದ ಬಳಿಕ ಆ ಪ್ರದೇಶದಲ್ಲಿ ಶಾಂತಿ, ಸಮೃದ್ಧಿಯುಂಟಾಯಿತು. ಇಲ್ಲಿರುವ ಜಗನ್ನಾಥ, ಬಲದೇವ ಮತ್ತು ಸುಭದ್ರೆಯರ ಮೂರ್ತಿಗಳು ಅತ್ಯಂತ ಆಕರ್ಷಕವಾಗಿದ್ದು, ಭಕ್ತರ ಕಣ್ಮನ ಸೆಳೆಯುತ್ತಿದೆ. 1878ರಿಂದೀಚೆಗೆ ಈ ದೇವಳದಿಂದ ಹೊರಡುವ ಮೆರವಣಿಗೆಯು ಆ ಬಳಿಕ ಸಂಪ್ರದಾಯವಾಗಿಯೇ ರೂಪುಗೊಂಡಿತ್ತು. ಈ ಸಂದರ್ಭದಲ್ಲಿ ಮಂದಿರವು ಸಕಲ ರೀತಿಯಲ್ಲೂ ಅಲಂಕೃತವಾಗಿರುತ್ತದೆ ಮತ್ತು ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆಯುವವರೆಲ್ಲರೂ ತಾವು ತುಂಬಾ ಅದೃಷ್ಟವಂತರು ಎಂಬ ಭಾವನೆ ಹೊಂದಿರುತ್ತಾರೆ.
WD


ರಾಂಚೋರ್, ಮಕಾನ್ ಚೋರ್ ಎಂಬ ಘೋಷಣೆಗಳೊಂದಿಗೆ ಈ ಮೆರವಣಿಗೆಯು ಮುಂದುವರಿಯುತ್ತದೆ. ಇದನ್ನು ನೋಡಲೆಂದೇ ದೂರದೂರುಗಳಿಂದ ಭಕ್ತಜನರು ಇಲ್ಲಿಗಾಗಮಿಸುತ್ತಾರೆ. ಈ ಕಾರಣದಿಂದ ಕಟ್ಟು ನಿಟ್ಟಿನ ಭದ್ರತಾ ಕ್ರಮಗಳನ್ನೂ ಕೈಗೊಳ್ಳಲಾಗುತ್ತದೆ. ಮೆರವಣಿಗೆಯಲ್ಲಿ ಸಾಗುವ ದೇವಾಧಿದೇವನನ್ನು ನೋಡಿದಲ್ಲಿ ತಮ್ಮ ನೋವು-ದುಃಖಗಳೆಲ್ಲವೂ ಶಮನಗೊಳ್ಳುತ್ತವೆ ಮತ್ತು ಇಷ್ಟಾರ್ಥ ಸಿದ್ಧಿಸುತ್ತದೆ ಎಂಬುದು ಭಕ್ತ ಜನರ ಬಲವಾದ ನಂಬಿಕೆ.

ಈ ಮಂದಿರದ ವಿಶೇಷತೆಗಳಲ್ಲೊಂದು ಅನ್ನದಾನ. ಸದಾವರ್ತ ಎಂಬ ಹೆಸರಿನ ಟ್ರಸ್ಟ್ ಮೂಲಕ, ಮಹಾ ಮಂಡಲೇಶ್ವರ ಸಂತ ನರಸಿಂಗಜಿ ಅವರ ಉಸ್ತುವಾರಿಯಲ್ಲಿ ದೇವಾಲಯವು ಬಡಬಗ್ಗರಿಗೆ ಮತ್ತು ದೀನರಿಗೆ ಉಚಿತ ಅನ್ನಾಹಾರವನ್ನು ಒದಗಿಸುತ್ತದೆ. ಪ್ರತಿದಿನ ನರಾರು ಮಂದಿ ಈ ಪ್ರಸಾದ ಸೇವಿಸಿ ಪುನೀತರಾಗುತ್ತಾರೆ.

webdunia
WD
ಇಲ್ಲಿಗೆ ಹೋಗುವುದು ಹೇಗೆ?
ವಾಯು ಮಾರ್ಗ: ಸಮೀಪದ ವಿಮಾನ ನಿಲ್ದಾಣವೆಂದರೆ ಅಹಮದಾಬಾದ್. ಅಲ್ಲಿಂದ ಟ್ಯಾಕ್ಸಿ ಹಿಡಿಯಬಹುದು.

ರೈಲು ಮಾರ್ಗ: ಅಹಮದಾಬಾದ್ ರೈಲು ನಿಲ್ದಾಣವು ದೇಶದ ಪ್ರಮುಖ ನಗರಗಳಿಂದ ರೈಲು ಸಂಪರ್ಕ ಹೊಂದಿದೆ. ಕಾಳುಪುರ ಎಂಬ ರೈಲು ನಿಲ್ದಾಣವು ಜಗನ್ನಾಥ ಮಂದಿರದಿಂದ ಕೇವಲ 3 ಕಿ.ಮೀ. ದೂರದಲ್ಲಿದೆ. ಮಣಿನಗರ ಮತ್ತು ಸಬರಮತಿ ರೈಲು ನಿಲ್ದಾಣಗಳ ಮೂಲಕವೂ ಮಂದಿರಕ್ಕೆ ತಲುಪಬಹುದು.

ರಸ್ತೆ ಮಾರ್ಗ: ಪ್ರಮುಖ ನಗರಗಳು ಅಹಮದಾಬಾದ್‌ಗೆ ರಸ್ತೆ ಮೂಲಕವು ಉತ್ತಮ ಸಂಪರ್ಕ ಹೊಂದಿವೆ. ಮಂದಿರಕ್ಕೆ ಹೋಗಬೇಕಿದ್ದರೆ ಗೀತಾ ಮಂದಿರ ಬಸ್ಸು ನಿಲ್ದಾಣದಲ್ಲಿಳಿದು, ಟ್ಯಾಕ್ಸಿ ಮಾಡಿಕೊಂಡು ಹೋಗಬಹುದು.


Share this Story:

Follow Webdunia kannada