Select Your Language

Notifications

webdunia
webdunia
webdunia
webdunia

ಹನುಮಂತನ ನೂರಾರು ರೂಪಗಳು

ಹನುಮಂತನ ನೂರಾರು ರೂಪಗಳು
WD
ಅರವಿಂದ ಶುಕ್ಲಾ

ಭಕ್ತಾಗ್ರೇಸರ ಹನುಮಂತನ ಭಕ್ತರಿಗಾಗಿ, ವಿಶ್ವದ ಮೊತ್ತ ಮೊದಲ ಮತ್ತು ಅಪರೂಪದ ಹನುಮಾನ್ ಮ್ಯೂಸಿಯಂ ಉತ್ತರ ಪ್ರದೇಶ ರಾಜಧಾನಿ ಲಖ್ನೋದಲ್ಲಿದೆ.

ಭಗವಾನ್ ಹನುಮಂತನಿಗೆ ಸಂಬಂಧಿಸಿದ ಅಪರೂಪದ ವಸ್ತುಗಳು ಇಲ್ಲಿದ್ದು, ಲಿಮ್ಕಾ ದಾಖಲೆಗಳ ಪುಸ್ತಕದಲ್ಲೂ ಈ ವಸ್ತು ಸಂಗ್ರಹಾಗಾರದ ಹೆಸರು ದಾಖಲಾಗಿದೆ. ಹನುಮದ್ಭಕ್ತ, ಸುನಿಲ್ ಗೊಂಬಾರ್ ಎಂಬವರೇ ಈ ವಸ್ತು ಸಂಗ್ರಹಾಲಯದ ಹಿಂದಿನ ರೂವಾರಿ. ವಿಶ್ವದ ವಿವಿಧೆಡೆಗಳಿಂದ ಸುನಿಲ್ ಅವರು ಈ ವಸ್ತುಗಳನ್ನು ಸಂಗ್ರಹಿಸಿದ್ದಾರೆ.

ಲಖ್ನೋದ ಇಂದಿರಾನಗರದಲ್ಲಿರುವ ತಮ್ಮ ಮನೆಗೆ ಅವರು "ಬಜರಂಗ ನಿಕುಂಜ್" ಎಂದೇ ಹೆಸರಿಟ್ಟಿದ್ದು, ಅದರ ಮೊದಲ ಮಹಡಿಯಲ್ಲೇ ಈ ವಸ್ತು ಸಂಗ್ರಹಾಗಾರವಿದೆ. ಭಗವಾನ್ ಶ್ರೀ ರಾಮನ ಚಿಹ್ನೆಗಳಿಂದ ಅಲಂಕೃತವಾದ "ಚರಣ ಪಾದುಕೆ"ಗಳು ಇಲ್ಲಿವೆ. ಇವು ಬೆಳ್ಳಿಯ ಕಲಾ ಕೌಶಲ್ಯದಿಂದ ಮಾಡಲ್ಪಟ್ಟಿವೆ. ಶ್ರೀರಾಮ ಉಚ್ಚರಿಸಿದನೆನ್ನಲಾದ ಹನುಮಂತನ ಸಹಸ್ರ ನಾಮಾವಳಿಯೂ ಇಲ್ಲಿದೆ. ಹನುಮಾನ್ ಸಹಸ್ರನಾಮ ಸ್ತೋತ್ರದಿಂದ ಇವುಗಳನ್ನು ಪಡೆದುಕೊಳ್ಳಲಾಗಿದ್ದು, ಸಂಸ್ಕೃತದಿಂದ ಹಿಂದಿಗೆ ಭಾಷಾಂತರಿಸಲಾಗಿದೆ.

webdunia
WD
ಅಲ್ಲದೆ 600ರಷ್ಟು ಅತ್ಯಂತ ಅಪರೂಪದ ಚಿತ್ರಗಳೂ ಇಲ್ಲಿದ್ದು, ಅವುಗಳಲ್ಲಿ ಕೆಲವಂತೂ 17ನೇ ಶತಮಾನಕ್ಕೆ ಸೇರಿದವು. ಹನುಮಂತನ ಅಪರೂಪದ ವಿಗ್ರಹಗಳು ಭಕ್ತರನ್ನು ಸೆಳೆಯುತ್ತದೆ.

ಹನುಮನ ಪವಿತ್ರ ಜಗತ್ತಿನ ಕೆತ್ತನೆ ಕಲಾ ಸೌಂದರ್ಯವು ಮ್ಯೂಸಿಯಂನ ಗೋಡೆಗಳಲ್ಲಿ ರಾರಾಜಿಸುತ್ತಿದೆ. ಈ ಚಿತ್ರಕಲೆಗಳಲ್ಲಿ, ಹನುಮಂತನ ಕುಟುಂಬ, ಭಗವಾನ್ ಶಿವ, ರಾಮ-ಸೀತೆ, ಲಕ್ಷ್ಮಿ, ಹನುಮಂತನ ತಂದೆ ಕೇಸರಿ ಮತ್ತು ತಾಯಿ ಅಂಜನಾ, ಹನುಮನ ಗುರು ಸೂರ್ಯ ಮತ್ತು ಪವನ ದೇವನನ್ನು ಈ ಕೆತ್ತನೆಗಳಲ್ಲಿ ಕಾಣಬಹುದಾಗಿದೆ. ಹನುಮಂತನ ಮಿತ್ರ ಸುಗ್ರೀವ, ಅಂಗದ, ನಳ, ನೀಳ, ಜಾಂಬವಂತರನ್ನೂ ಈ ಕೆತ್ತನೆ ಜಗತ್ತಿನಲ್ಲಿ ಕಾಣಬಹುದು. ಇದರೊಂದಿಗೆ ಹನುಮದ್ಭಕ್ತ ಗೋಸ್ವಾಮಿ ತುಳಸೀದಾಸನನ್ನೂ ಇಲ್ಲಿ ಕೆತ್ತಲಾಗಿದೆ.

ಭಗವಂತ ಹನುಮನಿಗೆ ಸಂಬಂಧಿಸಿದ ಹಲವಾರು ಕ್ಯಾಸೆಟ್‌ಗಳು, ಸಿಡಿಗಳೂ ಇಲ್ಲಿ ಸಾಕಷ್ಟಿವೆ. ಸುಮಾರು 250ರಷ್ಟು ಪುಸ್ತಕಗಳು, ಹನುಮಂತನ ಕಿರೀಟ, ಕಿವಿಯೋಲೆ, ಗದೆ, ಧ್ವಜ, ಸಿಂಧೂರ ಮುಂತಾದವನ್ನೂ ಇಲ್ಲಿ ಕಾಣಬಹುದು. ದೇಶದ ವಿವಿಧ ಭಾಗಗಳಲ್ಲಿ ಹನುಮನ ಮಹಿಮೆಯನ್ನು ಪ್ರಚುರಪಡಿಸಿದ ನೀಮ್ ಕರೌಲಿ ಬಾಬಾ, ಗುರು ಸಮರ್ಥ ರಾಮದಾಸ್ ಮುಂತಾದ ಸಂತರ ಚಿತ್ರಗಳು ಈ ಮ್ಯೂಸಿಯಂನಲ್ಲಿವೆ. ಹನುಮಂತನಿಗೆ ಸಂಬಂಧಿಸಿದ ಮಾಹಿತಿ ಇರುವ 137 ವೆಬ್‌ಸೈಟ್‌ಗಳ ಪಟ್ಟಿಯನ್ನು ಕೂಡ ನೀಡಲಾಗಿದೆ. ಈ ವಸ್ತುಸಂಗ್ರಹಾಲಯವನ್ನು 2004ರ ನವೆಂಬರ್ 24ರಂದು ಅಧಿಕೃತವಾಗಿ ಉದ್ಘಾಟಿಸಲಾಗಿತ್ತು.

webdunia
WD
"ರಾಮಚರಿತ ಮಾನಸ" ಕೃತಿಯಲ್ಲಿ ಬರುವ ಏಳು ಅಧ್ಯಾಯಗಳನ್ನು ಆಧರಿಸಿ, ಹಂಗೆರಿ ಮೂಲದ ಚಿತ್ರ ಕಲಾವಿದ ಹುಮಿಲ್ ರೊಜೆಲಿಯಾ ಎಂಬವರು ರಾಧಿಕಾಪ್ರಿಯ ಎಂಬ ಕುಂಚನಾಮದಲ್ಲಿ ಚಿತ್ರಿಸಿದ ಏಳು ಅದ್ಭುತ, ಸುಂದರ ಚಿತ್ರಕಲಾಕೃತಿಗಳು ಜನಮನ ಸೆಳೆಯುತ್ತವೆ. 1864ರಲ್ಲಿ ಮಹಾರಾಜ ರಣಜಿತ್ ಸಿಂಗ್ ಹೊರತಂದಿದ್ದ ಹನುಮನ ಚಿತ್ರವಿರುವ ನಾಣ್ಯಗಳು ಇಲ್ಲಿದ್ದು, ಥೇಟ್ ಈಗಿನ ಕೋತಿಯ ರೀತಿಯಲ್ಲೇ ಗೋಚರಿಸುವ ಹನುಮಂತನ ಅತ್ಯಂತ ಅಪರೂಪದ ವಿಗ್ರಹವೊಂದು ಗಮನ ಸೆಳೆಯುತ್ತದೆ. ಮತ್ತೊಂದು ವಿಗ್ರಹದಲ್ಲಿ ಹನುಮಂತನು ಧ್ವಜ ಹಿಡಿದುಕೊಂಡು ಒಂಟೆ ಸವಾರಿ ಮಾಡುತ್ತಿದ್ದರೆ, ಬಾಲ ಹನುಮನ ವಿಗ್ರಹವಂತೂ ಪ್ರೀತಿ ಸ್ಫುರಿಸುವಂತಿದೆ.

ರಾಮ ಮತ್ತು ಹನುಮರ ಕುರಿತ ಸಾಹಿತ್ಯವಿರುವ ಭಂಡಾರವೇ ಇಲ್ಲಿದೆ. ಪ್ರಕಾಶನ ಸಂಸ್ಥೆಯೊಂದಕ್ಕೆ ಸೇರಿರುವ ಸುನಿಲ್, 7ನೇ ತರಗತಿಯಲ್ಲಿದ್ದಾಗಲೇ ಭಗವಾನ್ ಹನುಮನಿಂದ ಪ್ರಭಾವಿತರಾಗಿದ್ದರು. ಕೆಲವು ವರ್ಷಗಳ ಹಿಂದೆ, ಮೂಗಿನಲ್ಲಿ ರಕ್ತ ಸೋರಿಕೆಗೆ ಕಾರಣವಾಗಿದ್ದ ಅಪಘಾತವೊಂದು ಅವರ ಬದುಕಿನ ದಿಕ್ಕನ್ನೇ ಬದಲಿಸಿತ್ತು. ಅವರು ಜೈ ಬಜರಂಗ ಹೆಸರಿನ ಚಾರಿಟೇಬಲ್ ಟ್ರಸ್ಟ್ ಒಂದನ್ನೂ ಸ್ಥಾಪಿಸಿದ್ದಾರೆ.

webdunia
WD
ಹನುಮನ ಕುರಿತ ನಾಲ್ಕು ಪುಸ್ತಕಗಳಿಗೆ ವಿಷಯವಸ್ತು ಒದಗಿಸಿರುವ ಅವರು, ಅವುಗಳ ಪ್ರಕಾಶನಕ್ಕೂ ಕಾರಣರಾಗಿದ್ದಾರೆ. ಅವರ "ತುಳಸಿದಾಸ ಹನುಮಾನ್ ಸಾಧನಾ ಶಬ್ದಮಣಿ" ಎಂಬ ಪುಸ್ತಕ ಅತ್ಯಂತ ಹೆಚ್ಚು ಮಾರಾಟವಾಗಿದೆ. ಇದಲ್ಲದೆ, "ಹನುಮಾನ್ ದರ್ಶನ್", "ಸುಂದರ ಕಾಂಡ ಸುಂದರ ಕ್ಯೋಂ" "ಭಕ್ತೋಂ ಕಾ ದೃಷ್ಟಿಕೋನ್" ಮತ್ತು "ವರ್ಲ್ಡ್ ಆಫ್ ಲಾರ್ಡ್ ಹನುಮಾನ್" ಕೃತಿಗಳು ಪ್ರಸಿದ್ಧವಾಗಿವೆ.

ಹನುಮನಿಗೆ ಸಂಬಂಧಿಸಿದ ಯಾವುದೇ ಅಪರೂಪದ ವಸ್ತುಗಳು ಅಥವಾ ಮಾಹಿತಿ ದೊರೆತಲ್ಲಿ ದಯವಿಟ್ಟು ಅದನ್ನು ತಮಗೆ ಕಳುಹಿಸಬಹುದು ಅವರು ಭಕ್ತಾದಿಗಳಿಗೆ ವಿನಂತಿ ಮಾಡಿದ್ದಾರೆ. ಈ ಸೊತ್ತುಗಳು ವಸ್ತು ಸಂಗ್ರಹಾಲಯದಲ್ಲಿ ಸುರಕ್ಷಿತವಾಗಿರುತ್ತವೆ. ಇದು ಪ್ರತಿ ಭಾನುವಾರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಭಕ್ತರ ಸಂದರ್ಶನಕ್ಕೆ ತೆರೆದಿರುತ್ತದೆ.

ವಿಳಾಸ
ಬಜರಂಗ ನಿಕುಂಜ್, 14/1192, ಇಂದಿರಾ ನಗರ, ಲಖ್ನೋ (ಉತ್ತರ ಪ್ರದೇಶ).
ಫೋನ್ ನಂ.- 0522-2711172, ಮೊಬೈಲ್ ನಂ.- 094150 11817

Share this Story:

Follow Webdunia kannada