ನಾಗಾರಾಧನೆಯ ನಾಡು ಕುಕ್ಕೆಸುಬ್ರಹ್ಮಣ್ಯದಲ್ಲಿ ಷಷ್ಠಿ ಸಂಭ್ರಮ
ಸುತ್ತಲೂ ಹಸಿರು ಹಚ್ಚಡವನ್ನೊದ್ದು ಮುಗಿಲೆತ್ತರಕ್ಕೇರಿ ನಿಂತ ಪರ್ವತಶ್ರೇಣಿಗಳು... ಅವುಗಳ ನಡುವಿನಲ್ಲಿ ತೂಗಿ ತೊನೆಯುವ ತೆಂಗು ಅಡಿಕೆ ತೋಟಗಳು... ಜುಳು ಜುಳು ನಿನಾದಗೈಯ್ಯುತ್ತಾ ಹರಿವ ಕುಮಾರಧಾರಾ ನದಿ... ದೇಗುಲದಿಂದ ಅಲೆಅಲೆಯಾಗಿ ಹೊರಹೊಮ್ಮುವ ಗಂಟೆಯ ನಿನಾದ... ಕಿವಿಗೆ ಅಪ್ಪಳಿಸುವ ಚಂಡೆಯ ಸದ್ದು... ಭಕ್ತಿ ಭಾವದಿಂದ ಸುಬ್ರಹ್ಮಣ್ಯನಿಗೆ ನಮಿಸುವ ಭಕ್ತರು... ಇದು ಸಪ್ತ ಮಹಾಕ್ಷೇತ್ರಗಳಲ್ಲೊಂದಾದ ಪರಶುರಾಮ ಸೃಷ್ಟಿಯ ನಾಗಪೂಜೆಯ ನಾಡು ಶ್ರೀ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಾಣಸಿಗುವ ದಿನನಿತ್ಯದ ಸುಂದರ, ರಮಣೀಯ ದೃಶ್ಯಗಳು.ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿಪರಮ ಪವಿತ್ರ ಕ್ಷೇತ್ರ, ಪ್ರವಾಸಿ ತಾಣವೂ ಆಗಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿಗೆ ಸೇರಿದೆ. ಕೊಡಗು, ಹಾಸನ ಜಿಲ್ಲೆಗಳಿಗೆ ಹೊಂದಿಕೊಂಡಂತಿರುವ ಈ ಕ್ಷೇತ್ರದ ಪೂರ್ವಕ್ಕೆ ಸಹ್ಯಾದ್ರಿ ಶ್ರೇಣಿಯ ಕುಮಾರ ಪರ್ವತ, ಶೇಷ ಪರ್ವತ ಹಾಗೂ ಸಿದ್ದ ಪರ್ವತಗಳಿದ್ದು, ದಟ್ಟ ಕಾಡನ್ನು ಹೊಂದಿ ತನ್ನದೇ ಆದ ನಿಸರ್ಗ ರಮಣೀಯತೆಯಿಂದ ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತದೆ.ಹಾಗಾಗಿ ಇಲ್ಲಿಗೆ ಕೇವಲ ಸ್ವಾಮಿ ಸುಬ್ರಹ್ಮಣ್ಯನ ದರ್ಶನ ಮಾಡಲು ಮಾತ್ರ ಭಕ್ತರು ಬರುವುದಲ್ಲದೆ, ಚಾರಣ ಮಾಡಲು ಕೂಡ ಪ್ರವಾಸಿಗರು ಆಗಮಿಸುತ್ತಾರೆ.ಸುಬ್ರಹ್ಮಣ್ಯ ಕ್ಷೇತ್ರವು ವರ್ಷದ ಎಲ್ಲಾ ದಿನಗಳಲ್ಲಿಯೂ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಅಷ್ಟೇ ಅಲ್ಲ ಸುತ್ತಲೂ ಪರ್ವತ ಹಾಗೂ ಅರಣ್ಯದಿಂದ ಆವೃತವಾಗಿರುವುದರಿಂದ ಮಳೆಯೂ ಹೆಚ್ಚಾಗಿಯೇ ಸುರಿಯುತ್ತಿರುತ್ತದೆ. ಆದರೆ ಇದೀಗ ವರುಣ ಒಂದಷ್ಟು ಬಿಡುವು ನೀಡಿದ್ದರಿಂದ ಜನರೆಲ್ಲಾ ಮೈಕೊಡವಿಕೊಂಡು ಮೇಲೆದ್ದಿದ್ದಾರಲ್ಲದೆ, ಮುಂದೆ ಬರಲಿರುವ ಚಂಪಾಷಷ್ಠಿಯ ದಿವ್ಯ ಕ್ಷಣಕ್ಕಾಗಿ ಕಾಯುತ್ತಿದ್ದಾರೆ.