Select Your Language

Notifications

webdunia
webdunia
webdunia
webdunia

ಚಿದಂಬರಂನ ಶ್ರೀ ನಟರಾಜ ದೇವಾಲಯ

ಚಿದಂಬರಂನ ಶ್ರೀ ನಟರಾಜ ದೇವಾಲಯ
WD
ಶಿವನನ್ನು ಪರಮೋಚ್ಚ ಅಧಿದೈವ ಎಂದು ಪೂಜಿಸುವ ಶೈವರಿಗೆಲ್ಲ ತಮಿಳುನಾಡಿನ ಚಿದಂಬರಂನಲ್ಲಿರುವ ಶ್ರೀ ನಟರಾಜ ಮಂದಿರವು ಅತ್ಯಂತ ಪವಿತ್ರವಾದ ಕ್ಷೇತ್ರಗಳಲ್ಲೊಂದು. ಈ ದೇವಾಲಯವು ಸೃಷ್ಟಿಯ ಅದ್ಭುತ ತೀರ್ಥಕ್ಷೇತ್ರವಾಗಿ ರೂಪುಗೊಂಡಿದೆ.

ಶಿವನು ಇಲ್ಲಿ ಪ್ರಣವ ಮಂತ್ರ “ಓಂ” ರೂಪದಲ್ಲಿ ನೆಲಸಿದ್ದಾನೆ ಎಂಬುದು ಭಕ್ತರ ನಂಬಿಕೆ. ಈ ಕಾರಣಕ್ಕೆ ಹಿಂದೂಗಳಿಗೆ ಈ ಮಂದಿರವು ಅತ್ಯಂತ ಪೂಜನೀಯವಾದದ್ದು.

ಶಿವನ ಪಂಚ ಕ್ಷೇತ್ರಗಳಲ್ಲಿ ಚಿದಂಬರಂ ಕೂಡ ಒಂದು. ಚಿದಂಬರಂ ಈಶ್ವರನ ಆಕಾಶ ಕ್ಷೇತ್ರವಾಗಿದ್ದರೆ, ಆಂಧ್ರಪ್ರದೇಶದ ಕಾಳಹಸ್ತಿಯಲ್ಲಿ ವಾಯು ಕ್ಷೇತ್ರ, ಕಾಂಚೀಪುರಂನಲ್ಲಿ ಪೃಥ್ವಿ ಕ್ಷೇತ್ರ, ತಿರುವನೈಕಾದಲ್ಲಿ ಜಲ ಕ್ಷೇತ್ರ ಮತ್ತು ತಿರುವಣ್ಣಾಮಲೈ ಅರುಣಾಚಲೇಶ್ವರವು ಅಗ್ನಿ ಕ್ಷೇತ್ರವಾಗಿ ಪರಿಗಣಿಸಲ್ಪಟ್ಟಿದೆ.

webdunia
WD
ನಾಲ್ಕು ಗೋಪುರಗಳು, ಪ್ರತಿಯೊಂದು ಕೂಡ ಒಂದು ನಿರ್ದಿಷ್ಟ ದಿಕ್ಕಿಗೆ ಅಭಿಮುಖವಾಗಿರುವ ಈ ದೇವಾಲಯ ನೋಡಲು ಅತ್ಯಾಕರ್ಷಕವಾಗಿದೆ. ಅದರ ಒಳಾಂಗಣದ ಶಿಲ್ಪ ಕಲಾ ವೈಭವವಂತೂ ಅತ್ಯದ್ಭುತ. ದೇವಾಲಯದ ಪ್ರತಿಯೊಂದು ಕಂಬಗಳು ಕೂಡ ಭರತನಾಟ್ಯದ ವಿವಿಧ ಭಾವ ಭಂಗಿಗಳನ್ನು ವ್ಯಕ್ತಪಡಿಸುವ ಶಿಲ್ಪಕಾರ್ಯವನ್ನು ಹೊಂದಿದ್ದು, ದೇವಾಲಯವೇ ನೃತ್ಯ ಶಾಲೆಯಂತೆ ಗೋಚರಿಸುತ್ತದೆ. ನೃತ್ಯವನ್ನು ಅತ್ಯುತ್ಕೃಷ್ಟ ಮಟ್ಟಕ್ಕೆ ಕೊಂಡೊಯ್ದ ಕಾರಣ ಶಿವನಿಗೆ ನಟರಾಜ ಎಂಬ ಹೆಸರು. ಈ ಕಾರಣಕ್ಕೆ ನಟರಾಜನೇ ಭರತನಾಟ್ಯ ವಿದ್ಯಾರ್ಥಿಗಳಿಗೆ ಆದರಣೀಯ ದೇವನಾಗಿದ್ದಾನೆ.

ದೇವಾಲಯಕ್ಕೆ ಸುತ್ತು ಬರುವಾಗಲಂತೂ ಭಕ್ತರಿಗೆ ಕಲ್ಲು ಕಂಬಗಳಿಂದ ದೃಷ್ಟಿ ಕೀಳಲು ಮನಸ್ಸು ಬರುವುದೇ ಇಲ್ಲ.

webdunia
WD
ಮಧ್ಯ ಭಾಗದಲ್ಲಿ, ಶಿವನು ಶಿವಕಾಮ ಸುಂದರಿ (ಪಾರ್ವತಿ)ಯೊಂದಿಗೆ ಭಕ್ತರನ್ನು ಹರಸುತ್ತಾನೆ. ಇಲ್ಲಿ ದೇವರ ರಹಸ್ಯವೊಂದನ್ನು ಬಯಲು ಮಾಡಲಾಗುತ್ತದೆ. ಅದುವೇ ‘ಚಿದಂಬರ ರಹಸ್ಯ’ ! ಈ ಚಿದಂಬರ ರಹಸ್ಯ ಏನೆಂದು ನೋಡುವುದಕ್ಕೆ ನೀವು ನಿರ್ದಿಷ್ಟ ಶುಲ್ಕ ಪಾವತಿಸಬೇಕಾಗುತ್ತದೆ. ಇದಕ್ಕೆ ಕಾರಣವೆಂದರೆ, ಈ ಮಂದಿರವನ್ನು ಭಕ್ತಾದಿಗಳ ದಾನದಿಂದಲೇ ನಡೆಸಲಾಗುತ್ತದೆ.

ಇದು ಶ್ರೇಷ್ಠ ಶಿವ ಕ್ಷೇತ್ರಗಳಲ್ಲೊಂದಾಗಿದೆಯಾದರೂ, ಗೋವಿಂದರಾಜನ ಸನ್ನಿಧಿಯೂ ಇಲ್ಲಿದೆ. ಇಲ್ಲಿನ ವಿಶೇಷವೇನೆಂದರೆ, ಒಂದೇ ತಾಣದಲ್ಲಿರುವ ಶಿವ ಮತ್ತು ಗೋವಿಂದ ಇಬ್ಬರ ದರ್ಶನವನ್ನೂ ನೀವು ಪಡೆಯಬಹುದಾಗಿದೆ.

webdunia
WD
ಅತ್ಯಾಕರ್ಷಕ ಕೊಳ ಮತ್ತು ನೃತ್ಯ ಭವನ ಇಲ್ಲಿದೆ. ಪ್ರತಿವರ್ಷ ದೇಶಾದ್ಯಂತದ ನೃತ್ಯ ಕಲಾವಿದರು, ನೃತ್ಯ ಪಟುಗಳು ಇಲ್ಲಿ ಬಂದು ಸಿದ್ಧಿ-ಪ್ರಸಿದ್ಧಿ ಪಡೆಯುವ ನಿಟ್ಟಿನಲ್ಲಿ ತಮ್ಮ ಕಲಾ ಪ್ರದರ್ಶನ ಮಾಡುತ್ತಾರೆ.

ಚಿದಂಬರಂ ಹೋಗುವುದು ಹೇಗೆ:

ರೈಲು ಮಾರ್ಗ: ಚಿದಂಬರಂ ತಮಿಳುನಾಡು ರಾಜಧಾನಿ ಚೆನ್ನೈಯಿಂದ 245 ಕಿ.ಮೀ. ದೂರದಲ್ಲಿದ್ದು, ಚೆನ್ನೈ-ತಂಜಾವೂರು ಮಾರ್ಗದಲ್ಲಿ ಚಿದಂಬರಂ ಹೆಸರಿನ ರೈಲು ನಿಲ್ದಾಣವಿದೆ.

ರಸ್ತೆ: ಚೆನ್ನೈನಿಂದ ಐದಾರು ಗಂಟೆಗಳ ಪ್ರಯಾಣದ ಮೂಲಕ ಬಸ್ ಅಥವಾ ಯಾವುದೇ ವಾಹನದಲ್ಲಿ ತಲುಪಬಹುದು.

ವಿಮಾನ ಮಾರ್ಗ: ಸಮೀಪದ ವಿಮಾನ ನಿಲ್ದಾಣವೆಂದರೆ ಚೆನ್ನೈ. ಅಲ್ಲಿಂದ ರಸ್ತೆ ಇಲ್ಲವೇ ರೈಲು ಮಾರ್ಗದ ಮೂಲಕ ಚಿದಂಬರಂ ತಲುಪಬಹುದು.

Share this Story:

Follow Webdunia kannada