Select Your Language

Notifications

webdunia
webdunia
webdunia
webdunia

ಏಳು ಬೆಟ್ಟದೊಡೆಯ ಶ್ರೀ ವೆಂಕಟೇಶ

ಏಳು ಬೆಟ್ಟದೊಡೆಯ ಶ್ರೀ ವೆಂಕಟೇಶ
WD
"ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ, ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ"

ತಿರುಪತಿ ಬೆಟ್ಟದಲ್ಲಿರುವ ಸಪ್ತಗಿರಿಯೊಡೆಯ ಶ್ರೀ ವೆಂಕಟೇಶ್ವರ ಜಗನ್ನಿಯಾಮಕ ಶಕ್ತಿ. ಜಗತ್ತಿನ ಅತ್ಯಂತ ಶ್ರೀಮಂತ ದೇವರು ಎಂಬ ಹೆಗ್ಗಳಿಕೆ ತಿರುಮಲದ ಬಾಲಾಜಿ ಮಂದಿರಕ್ಕಿದೆ. ಅತೀ ಹೆಚ್ಚು ಭಕ್ತಾದಿಗಳನ್ನು ಸೆಳೆಯುವ ಸುಕ್ಷೇತ್ರವಿದು. ಇದನ್ನು ನೋಡಿಕೊಳ್ಳುತ್ತಿರುವುದು ತಿರುಮಲ-ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ).

ಹಿನ್ನೆಲೆ:
ಬಾಲಾಜಿ ಅಥವಾ ವೆಂಕಟೇಶ್ವರನು ಮಹಾವಿಷ್ಣುವಿನ ಅವತಾರ. ತಿರುಮಲ ಬಳಿಯ ಸ್ವಾಮಿ ಪುಷ್ಕರಿಣಿಯ ದಕ್ಷಿಣ ಭಾಗದಲ್ಲಿ ಆತ ನೆಲಸಲು ಬರುತ್ತಾನೆ. ತಿರುಮಲ-ತಿರುಪತಿ ಸುತ್ತಲಿರುವ ಏಳು ಬೆಟ್ಟಗಳನ್ನು ಸಪ್ತಗಿರಿ ಎಂದು ಕರೆಯಲಾಗುತ್ತದೆ. ಈ ಏಳು ಬೆಟ್ಟಗಳು ಶೇಷನಾಗನ ಏಳು ಹೆಡೆಗಳು ಎಂದೂ ನಂಬಲಾಗುತ್ತದೆ. ಏಳನೇ ಬೆಟ್ಟವಾದ ವೆಂಕಟಾದ್ರಿಯಲ್ಲಿ ಶ್ರೀ ವೆಂಕಟೇಶ್ವರನ ಸನ್ನಿಧಿ ಇದೆ.

11ನೇ ಶತಮಾನದಲ್ಲಿದ್ದ ಸಂತ ರಾಮಾನುಜರು ತಿರುಪತಿಯ ಸಪ್ತಗಿರಿಯನ್ನೇರಿದಾಗ ಅಲ್ಲಿ ಭಗವಾನ್ ಶ್ರೀನಿವಾಸನು ಅವರಿಗೆ ದರ್ಶನ ನೀಡಿದ ಎಂಬ ಪ್ರತೀತಿ ಇದೆ. ಇಲ್ಲಿ ವೈಕುಂಠ ಏಕಾದಶಿ ದಿನ ಸ್ವಾಮಿಯ ದರ್ಶನ ಪಡೆದರೆ ಎಲ್ಲಾ ಪಾಪಗಳೂ ಕಳೆಯುತ್ತವೆ ಎಂದು ಭಕ್ತರು ನಂಬುತ್ತಾರೆ. ಅದಲ್ಲದೆ ಇಹಲೋಕ ತ್ಯಜಿಸಿದ ಬಳಿಕ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದೂ ಹೇಳಲಾಗುತ್ತದೆ.

ದೇವಸ್ಥಾನದ ಇತಿಹಾಸ:
ದೇವಳದ ಇತಿಹಾಸವು ಸುಮಾರು 9ನೇ ಶತಮಾನದಷ್ಟು ಹಿಂದಿನದು. ಕಾಂಚಿಪುರದ ಅರಸರಾದ ಪಲ್ಲವರು ಈ ಮಂದಿರವನ್ನು ಪೋಷಿಸಿದರು. ಆದರೆ 15ನೇ ಶತಮಾನದಲ್ಲಿ ವಿಜಯನಗರ ಆಡಳಿತದ ಅವಧಿಯಲ್ಲಿ ಈ ದೇವಸ್ಥಾನವು ಪ್ರಸಿದ್ಧಿಯಾಯಿತು ಮತ್ತು ಭಕ್ತರ ಹರಕೆಗಳು ಹೆಚ್ಚಾಗಿ ಹರಿದುಬರಲಾರಂಭಿಸಿದವು.

1843ರಿಂದ 1933ರವರೆಗೆ ತಿರುಮಲ ದೇವಸ್ಥಾನದ ಆಡಳಿತವು ಹತೀರಾಮಜಿ ಮಠದ ಮಹಾಂತರ ಕೈಯಲ್ಲಿತ್ತು. 1993ರಲ್ಲಿ ಮದ್ರಾಸ್ ಸರಕಾರವು ಇದನ್ನು ವಶಪಡಿಸಿಕೊಂಡು ಆಡಳಿತವನ್ನು ತಿರುಮಲ-ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಎಂಬ ಸ್ವಾಯತ್ತ ಸಮಿತಿಗೆ ಒಪ್ಪಿಸಿತು.
webdunia
WD
ಆಂಧ್ರಪ್ರದೇಶ ರಾಜ್ಯ ರಚನೆಯಾದ ಬಳಿಕ ಟ್ರಸ್ಟಿಗಳ ಮಂಡಳಿಯೊಂದಿಗೆ ಟಿಟಿಡಿಯನ್ನು ಪುನಾರಚಿಸಲಾಯಿತು. ಆಂಧ್ರ ಸರಕಾರವನ್ನು ಪ್ರತಿನಿಧಿಸುವ ಕಾರ್ಯನಿರ್ವಹಣಾಧಿಕಾರಿಯೊಬ್ಬರನ್ನು ನೇಮಿಸಲಾಯಿತು.

ಮುಖ್ಯ ದೇವಸ್ಥಾನ:
ವೆಂಕಟಾದ್ರಿ ಬೆಟ್ಟದಲ್ಲಿ ಬಾಲಾಜಿಯು ಸ್ಥಿತನಾಗಿರುವುದರಿಂದ ಅವನಿಗೆ ವೆಂಕಟೇಶ್ವರ ಎಂಬ ಅಭಿದಾನ. ಬೇರೆ ಧರ್ಮೀಯರಿಗೂ ಗರ್ಭಗುಡಿ ದ್ವಾರದವರೆಗೆ ಪ್ರವೇಶಿಸಲು ಅವಕಾಶವಿರುವ ಕೆಲವೇ ದೇವಸ್ಥಾನಗಳಲ್ಲಿ ಈ ಪ್ರಾಚೀನ ದೇವಸ್ಥಾನವೂ ಒಂದು. ವೆಂಕಟೇಶ್ವರನ ದಯೆಯಿದ್ದರೆ ಮಾತ್ರವೇ ಕಲಿಯುಗದಲ್ಲಿ ಮುಕ್ತಿ ಹೊಂದಬಹುದು ಎಂದು ಪುರಾಣಗಳಲ್ಲಿ, ಆಳ್ವಾರ್ ಗ್ರಂಥಗಳಲ್ಲಿ ವಿವರಿಸಲಾಗಿದೆ.

webdunia
WD
ಪ್ರತಿದಿನ 50 ಸಾವಿರದಷ್ಟು ಭಕ್ತರು ವೆಂಕಟೇಶ್ವರನ ಸನ್ನಿಧಿಗೆ ಆಗಮಿಸುತ್ತಾರೆ. ಕೆಲವರು ಬರಿಗಾಲಿನಲ್ಲೇ ಟಿಟಿಡಿ ರಚಿಸಿರುವ ಮೆಟ್ಟಿಲುಗಳನ್ನೇರುತ್ತಾ ತಿರುಮಲ ಬೆಟ್ಟದ ಬುಡದಲ್ಲಿರುವ ಅಲಿಪಿರಿಯಿಂದ ತಿರುಮಲ ಸನ್ನಿಧಿ ತಲುಪುತ್ತಾರೆ.

ಮುಡಿ ಒಪ್ಪಿಸುವುದು:
ಹರಕೆ ಹೊತ್ತ ಭಕ್ತರು ಇಲ್ಲಿ ಮುಡಿ ಒಪ್ಪಿಸುವುದು ವಿಶೇಷ. ವೈಷ್ಣವ ಪದ್ಧತಿ ಪ್ರಕಾರ, ದೇವರಿಗೆ ತಮ್ಮ ಕೇಶ ಒಪ್ಪಿಸುವ ಮೂಲಕ ತಮ್ಮ ಅಹಂ ಅನ್ನು ತೊಡೆದುಕೊಳ್ಳುತ್ತಾರೆ ಎಂಬುದು ನಂಬಿಕೆ. ಈಗ ಕಲ್ಯಾಣ ಘಟ್ಟ ಎಂಬ ಬೃಹತ್ ಕಟ್ಟಡದಲ್ಲಿ ಸಾವಿರಾರು ಮಂದಿ ಕ್ಷೌರಿಕರು ಕೇಶಮುಂಡನ ಕಾರ್ಯದಲ್ಲಿ ನಿರತರಾಗುತ್ತಾರೆ. ಕೇಶಮುಂಡನ ಮಾಡಿದ ಬಳಿಕ ಶುಚಿಗಾಗಿ ಸ್ನಾನಗೃಹದ ವ್ಯವಸ್ಥೆಯೂ ಇದೆ. ನಂತರ ಪವಿತ್ರ ಪುಷ್ಕರಿಣಿ ತೀರ್ಥದಲ್ಲಿ ಶುಚಿರ್ಭೂತರಾದ ನಂತರ ದೇವರ ದರ್ಶನ ಮಾಡಬಹುದು.

ಸರ್ವ ದರ್ಶನ:
ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ನಿಂದ ಸರ್ವ ದರ್ಶನದ ಹಾದಿ ಆರಂಭವಾಗುತ್ತದೆ. ಇದಕ್ಕೆ ಟಿಕೆಟ್ ಮಾಡಿಸಬೇಕಾಗುತ್ತದೆ. ಇದರೊಂದಿಗೆ ಉಚಿತ ದರ್ಶನ, ಹೆಚ್ಚು ಹಣ ಪಾವತಿಸಿದರೆ ವಿಶೇಷ ದರ್ಶನವೂ ಲಭ್ಯವಿದೆ. ಅಂಗ ವೈಕಲ್ಯ ಹೊಂದಿದವರಿಗಾಗಿ ಮಹಾದ್ವಾರದಲ್ಲಿ ಪ್ರತ್ಯೇಕ ಗೇಟ್ ಇದೆ.

ಪ್ರಸಾದ:
ಅನ್ನ ಪ್ರಸಾದ, ಚಿತ್ರಾನ್ನ, ಸಿಹಿ ಪೊಂಗಲ್ ಮತ್ತು ಮೊಸರನ್ನವನ್ನು ದರ್ಶನ ಪಡೆದ ಎಲ್ಲಾ ಯಾತ್ರಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಗುತ್ತದೆ.

ಲಡ್ಡು:
ಮಂದಿರದ ಹೊರಗಿನ ಕೌಂಟರುಗಳಲ್ಲಿ ತಿರುಪತಿ ಲಡ್ಡು ಮಾರಾಟ ಮಾಡಲಾಗುತ್ತದೆ.
webdunia
WD
ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ನಲ್ಲಿ ಟೋಕನ್ ಪಡೆದು ಈ ಪ್ರಸಾದವನ್ನು ಪಡೆದುಕೊಳ್ಳಬಹುದು.

ಬ್ರಹ್ಮೋತ್ಸವ:
ತಿರುಪತಿಯ ಅತ್ಯಂತ ಪವಿತ್ರ ವಿಶೇಷ ಉತ್ಸವವೆಂದರೆ ಬ್ರಹ್ಮೋತ್ಸವ. ಈ ವಾರ್ಷಿಕ ಉತ್ಸವವು ಸೂರ್ಯನು ಕನ್ಯಾ ರಾಶಿ ಪ್ರವೇಶಿಸಿದ ಬಳಿಕ ಆಶ್ವಯುಜ ಶುದ್ಧ ಪಾಡ್ಯಮಿಯಿಂದ ಆಶ್ವಯುಜ ಶುದ್ಧ ದಶಮಿವರೆಗೆ (ಸೆಪ್ಟೆಂಬರ್/ಅಕ್ಟೋಬರ್ ತಿಂಗಳಲ್ಲಿ) 9 ದಿನ ನಡೆಯುತ್ತದೆ.

ವರಾಹ ಪುರಾಣದ ಪ್ರಕಾರ, ಸೃಷ್ಟಿಕರ್ತ ಬ್ರಹ್ಮನು ವೆಂಕಟೇಶ್ವರನ ಗೌರವಾರ್ಥ ಈ ಉತ್ಸವ ಆರಂಭಿಸಿದ. ಇದೇ ಕಾರಣಕ್ಕೆ ಬ್ರಹ್ಮೋತ್ಸವ ಎಂಬ ಹೆಸರು. ಈ ಅವಧಿಯಲ್ಲಿ ಭಕ್ತಾದಿಗಳ ಸಂಖ್ಯೆ ಅತ್ಯಧಿಕವಾಗಿರುತ್ತದೆ. ಉತ್ಸವದ 9ನೇ ದಿನ ಶ್ರೀ ವೆಂಕಟೇಶ್ವರ ಜಯಂತಿ ಆಚರಿಸಲಾಗುತ್ತದೆ.

webdunia
WD
ತಿರುಪತಿಯಲ್ಲಿ ಆಚರಿಸುವ ಇತರ ಪ್ರಮುಖ ಉತ್ಸವಗಳೆಂದರೆ, ವಸಂತೋತ್ಸವ (ಮಾರ್ಚ್/ಏಪ್ರಿಲ್), ತೆಪ್ಪೋತ್ಸವ (ಜುಲೈ/ಆಗಸ್ಟ್), ಪವಿತ್ರೋತ್ಸವ (ಕಾರ್ತಿಕ ಉತ್ಸವ, ನವೆಂಬರ್/ಡಿಸೆಂಬರ್) ಇತ್ಯಾದಿ. ಅಧಿಕ ಮಾಸದಲ್ಲಿ (ಅಧಿಕ ಆಶ್ವಯುಜ) ಎರಡು ಬ್ರಹ್ಮೋತ್ಸವಗಳಿರುತ್ತವೆ.

ತಿರುಪತಿಯಲ್ಲಿ ಟಿಟಿಡಿಯು ಪುರೋಹಿತ ಸಂಘವೊಂದನ್ನು ರಚಿಸಿದ್ದು, ಅದು ವಿವಾಹ ಮತ್ತಿತರ ಧಾರ್ಮಿಕ ಕಾರ್ಯಗಳಾದ ನಾಮಕರಣ, ಉಪನಯನ ಇತ್ಯಾದಿಗಳನ್ನು ನೆರವೇರಿಸುತ್ತದೆ. ದಕ್ಷಿಣ ಮತ್ತು ಮತ್ತು ಉತ್ತರ ಭಾರತೀಯ ಸಂಪ್ರದಾಯಗಳಿಗೆ ಅನುಗುಣವಾಗಿ ಪುರೋಹಿತ ಸಂಘವು ಧಾರ್ಮಿಕ ವಿಧಿ ನೆರವೇರಿಸುತ್ತದೆ.

ವಸತಿ:
ಹೆಚ್ಚಿನ ಭಕ್ತಾದಿಗಳು ದೇವಸ್ಥಾನದ ಸುತ್ತ ಉಚಿತವಾಗಿ ಲಭ್ಯವಿರುವ ಬೃಹತ್ ಶಯನಾಲಯಗಳನ್ನು ಆಶ್ರಯಿಸುತ್ತಾರೆ. ಬಾಡಿಗೆ ನೀಡಿದರೆ ಅತಿಥಿ ಗೃಹಗಳು, ಕಾಟೇಜ್‌ಗಳು
webdunia
WD
ಲಭ್ಯವಿವೆ. ಟಿಟಿಡಿಯ ಸೆಂಟ್ರಲ್ ರಿಸೆಪ್ಷನ್ ಕಚೇರಿಯಲ್ಲೇ ಎಲ್ಲಾ ಬುಕಿಂಗ್‌ಗಳನ್ನೂ ಮಾಡಬೇಕಾಗುತ್ತದೆ. ಆಫ್-ಸೀಸನ್‌ಗಳಲ್ಲಿ ಒಂದು ತಿಂಗಳ ಮೊದಲು ಪತ್ರ ಮತ್ತು ಹಣ ರವಾನಿಸಿ ಬುಕಿಂಗ್ ಮಾಡಬಹುದು. ತಿರುಪತಿಯಲ್ಲಿ ಎಲ್ಲಾ ವಿಧದ ಹೋಟೆಲ್‌ಗಳು ಲಭ್ಯ ಇವೆ.

ಹೇಗೆ ಹೋಗುವುದು:
ತಿರುಪತಿಯು ದೇಶದ ಮೆಟ್ರೋ ನಗರ ಚೆನ್ನೈನಿಂದ 130 ಕಿ.ಮೀ. ದೂರದಲ್ಲಿದೆ. ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈಗಳಿಂದ ರಸ್ತೆ, ರೈಲು ಸಂಪರ್ಕವೂ ಸಾಕಷ್ಟಿದೆ. ಕೆಎಸ್ಸಾರ್ಟಿಸಿ, ಎಪಿಎಸ್ಸಾರ್ಟಿಸಿ ಬಸ್ ವ್ಯವಸ್ಥೆಗಳೂ ಸಾಕಷ್ಟಿವೆ. ತಿರುಪತಿಯಲ್ಲಿ ಪುಟ್ಟ ವಿಮಾನ ನಿಲ್ದಾಣವೂ ಇದೆ. ಹೈದರಾಬಾದಿನಿಂದ ಪ್ರತಿ ಮಂಗಳವಾರ ಮತ್ತು ಶನಿವಾರ ವಿಮಾನ ಸೌಲಭ್ಯಗಳಿವೆ. ಚೆನ್ನೈಯಿಂದ ಪ್ರತಿದಿನ ಎರಡು ವಿಮಾನಗಳಿವೆ. 20 ನಿಮಿಷದ ಪ್ರಯಾಣ.

Share this Story:

Follow Webdunia kannada