Webdunia - Bharat's app for daily news and videos

Install App

ರುಚಿಯಾದ ವೆಗಾನ್ ಸ್ನ್ಯಾಕ್ಸ್ ರೆಸಿಪಿಗಳು...

Webdunia
ಗುರುವಾರ, 11 ಅಕ್ಟೋಬರ್ 2018 (15:19 IST)
ವೆಗಾನ್ ಆಹಾರ ಪದ್ಧತಿ ಇತ್ತೀಚೆಗೆ ಅಮೇರಿಕಾದಲ್ಲಿ ಬಹಳ ಪ್ರಚಲಿತದಲ್ಲಿದೆ. ಇದು ಸಸ್ಯ ಜನ್ಯ ಆಹಾರ ಪದ್ಧತಿಯನ್ನು ಆಧಾರವಾಗಿಟ್ಟುಕೊಂಡು ಬಂದ ಆಹಾರ ಪದ್ಧತಿಯಾಗಿದೆ. ಇದನ್ನು ಅನುಸರಿಸುವವರು ಪ್ರಾಣಿಜನ್ಯ ಆಹಾರಗಳಾದ ಹಾಲು, ಮೊಸರು, ಮಾಂಸ, ಮೊಟ್ಟೆ ಮುಂತಾದವುಗಳನ್ನು ಸೇವಿಸದೇ ಬರಿಯ ಸಸ್ಯಜನ್ಯ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ.

ಇದು ಅನಾರೋಗ್ಯಗಳಿಂದ ದೂರವಿರಲು ಮತ್ತು ದೇಹವನ್ನು ಫಿಟ್ ಆಗಿರಿಸಿಕೊಳ್ಳಲು ಸಹಕಾರಿ ಎಂದು ಹಲವು ಸಂಶೋಧನೆಗಳು ತಿಳಿಸಿವೆ. ಇತ್ತೀಚೆಗೆ ಕ್ರಿಕೆಟ್, ಫುಟ್‌ಬಾಲ್ ಆಟಗಾರರೂ ಸಹ ದೇಹವನ್ನು ಫಿಟ್ ಆಗಿರಿಸಿಕೊಳ್ಳಲು ವೆಗಾನ್ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಅಂತಹ ವೆಗಾನ್ ಪದ್ಧತಿಯನ್ನು ಅನುಸರಿಸುವವರಿಗಾಗಿ ಕೆಲವು ವೆಗಾನ್ ಸ್ನ್ಯಾಕ್ಸ್ ರೆಸಿಪಿಗಳು ಇಲ್ಲಿವೆ.
 
1. ಗೋಬಿ ಫ್ರೈ
 
ಬೇಕಾಗುವ ಸಾಮಗ್ರಿಗಳು:
ಕಟ್ ಮಾಡಿದ ಗೋಬಿ - 2 ಕಪ್
ಕಾಳುಮೆಣಸಿನ ಪುಡಿ - 1 ಚಮಚ
ಜೋಳದ ಹಿಟ್ಟು - 2-3 ಚಮಚ
ಮೈದಾ - 4-5 ಚಮಚ
ಉಪ್ಪು - ರುಚಿಗೆ
ಬ್ರೆಡ್ ಪೌಡರ್ - 1 ಕಪ್
ಬೆಳ್ಳುಳ್ಳಿ - 8-10 ಎಸಳು
ಶುಂಠಿ - 1 ಇಂಚು
ಹಸಿಮೆಣಸು - 1-2
ಈರುಳ್ಳಿ - 1
ಬಿಳಿ ಎಳ್ಳು - 1 ಚಮಚ
ಸೋಯಾ ಸಾಸ್ - 1 ಚಮಚ
ಸ್ವೀಟ್ ಚಿಲ್ಲಿ ಸಾಸ್ - 1 ಕಪ್
ಎಣ್ಣೆ - ಕರಿಯಲು
 
ಮಾಡುವ ವಿಧಾನ:
ಕುದಿಯುವ ನೀರಿನಲ್ಲಿ ಕಟ್ ಮಾಡಿದ ಗೋಬಿ ಚೂರುಗಳನ್ನು ಹಾಕಿ, ಅದರೊಂದಿಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ 2 ನಿಮಿಷ ಕುದಿಸಿ ಸ್ಟೌ ಆಫ್ ಮಾಡಿ. ನಂತರ ನೀರಿನಲ್ಲಿರುವ ಗೋಬಿಯನ್ನು ಬೇರ್ಪಡಿಸಿಕೊಂಡು ಒಂದು ಬೌಲ್‌ಗೆ ಹಾಕಿಕೊಳ್ಳಿ. ಅದಕ್ಕೆ 1/2 ಚಮಚ ಉಪ್ಪು, 1 ಚಮಚ ಕಾಳುಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಅದಕ್ಕೆ ಜೋಳದ ಹಿಟ್ಟು ಮತ್ತು ಮೈದಾ ಹಿಟ್ಟನ್ನು ಸೇರಿಸಿ ಸ್ವಲ್ಪ ನೀರನ್ನು ಹಾಕಿ ಮಿಕ್ಸ್ ಮಾಡಿ. ಈ ಗೋಬಿ ಚೂರುಗಳನ್ನು ಬ್ರೆಡ್ ಪೌಡರ್‌ನಲ್ಲಿ ಹೊರಳಿಸಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಹುರಿದಿಟ್ಟುಕೊಳ್ಳಿ.
 
ಒಂದು ಪ್ಯಾನ್‌ಗೆ 2 ಚಮಚ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಅದಕ್ಕೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮತ್ತು ಹಸಿಮೆಣಸನ್ನು ಹಾಕಿ ಹುರಿಯಿರಿ. 2 ನಿಮಿಷದ ನಂತರ ಅದಕ್ಕೆ ಸೋಯಾ ಸಾಸ್ ಮತ್ತು ಸ್ವೀಟ್ ಚಿಲ್ಲಿ ಸಾಸ್ ಸೇರಿಸಿ ಮಿಕ್ಸ್ ಮಾಡಿ. 2 ನಿಮಿಷದ ನಂತರ ಅದಕ್ಕೆ ಹುರಿದಿಟ್ಟ ಗೋಬಿಯನ್ನು ಮತ್ತು 1 ಚಮಚ ಬಿಳಿ ಎಳ್ಳನ್ನು ಹಾಕಿ ಮಿಕ್ಸ್ ಮಾಡಿದರೆ ಗೋಬಿ ಫ್ರೈ ಸವಿಯಲು ಸಿದ್ಧವಾಗುತ್ತದೆ.
 
2. ಮೆಂತೆ ಸೊಪ್ಪಿನ ಪಾಪಡ್
 
ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು - 1 ಕಪ್
ಉಪ್ಪು - ರುಚಿಗೆ
ಅರಿಶಿಣ - 1/4 ಚಮಚ
ಅಚ್ಚಖಾರದ ಪುಡಿ - 1 ಚಮಚ
ಜೀರಿಗೆ ಪುಡಿ - 1/2 ಚಮಚ
ಇಂಗು - 1/4 ಚಮಚ
ಓಮಕಾಳು - 1/4 ಚಮಚ
ಹೆಚ್ಚಿದ ಮೆಂತೆ ಸೊಪ್ಪು - 1 ಕಪ್
ಎಣ್ಣೆ - ಕರಿಯಲು
 
ಮಾಡುವ ವಿಧಾನ:
ಗೋಧಿ ಹಿಟ್ಟು, ಅರಿಶಿಣ, ಅಚ್ಚಖಾರದ ಪುಡಿ, ಜೀರಿಗೆ ಪುಡಿ, ಇಂಗು, ಓಮಕಾಳು, ಹೆಚ್ಚಿದ ಮೆಂತೆ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಮಿಕ್ಸ್ ಮಾಡಿ. ಇದಕ್ಕೆ ಸ್ವಲ್ಪ ನೀರನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹಿಟ್ಟನ್ನು ಸಿದ್ಧಮಾಡಿಕೊಳ್ಳಿ. ಈ ಹಿಟ್ಟಿಗೆ 2 ಚಮಚ ಎಣ್ಣೆಯನ್ನು ಸವರಿ 15-20 ನಿಮಿಷ ಹಾಗೆಯೇ ಬಿಡಿ.
 
ಈ ಹಿಟ್ಟಿನ ದೊಡ್ಡ ಗಾತ್ರದ ಉಂಡೆಯನ್ನು ತಯಾರಿಸಿ ಅದಕ್ಕೆ ಸ್ವಲ್ಪ ಹಿಟ್ಟನ್ನು ಸವರಿ ದೊಡ್ಡದಾಗಿ ಮತ್ತು ತೆಳುವಾಗಿ ಲಟ್ಟಿಸಿಕೊಳ್ಳಿ. ಈಗ ನಿಮಗೆ ಬೇಕಾದ ಗಾತ್ರದ ಅಚ್ಚಿನಿಂದ ಈ ದೊಡ್ಡ ಗಾತ್ರದ ಚಪಾತಿಯನ್ನು ಕಟ್ ಮಾಡಿಕೊಳ್ಳಿ. ಹೀಗೆ ಕಟ್ ಮಾಡಿದ ಚೂರುಗಳ ಮೇಲೆ ಚಿಕ್ಕದಾಗಿ ಪೋರ್ಕ್‌ನಿಂದ ತೂತುಗಳನ್ನು ಮಾಡಿ ಕಾದ ಎಣ್ಣೆಯಲ್ಲಿ ಕರಿದರೆ ಮೆಂತೆ ಸೊಪ್ಪಿನ ಪಾಪಡ್ ಸಿದ್ಧವಾಗುತ್ತದೆ.
 
3. ಪಾಲಾಕ್ ಸೊಪ್ಪಿನ ಪಕೋಡಾ:
 
ಬೇಕಾಗುವ ಸಾಮಗ್ರಿಗಳು:
ಉದ್ದಿನ ಬೇಳೆ - 1 ಕಪ್
ಜೀರಿಗೆ - 1 ಚಮಚ
ಈರುಳ್ಳಿ - 1-2
ಹಸಿಮೆಣಸು - 1-2
ಶುಂಠಿ - 1 ಇಂಚು
ಕೊತ್ತಂಬರಿ ಸೊಪ್ಪು - ಸ್ವಲ್ಪ
ಪಾಲಾಕ್ ಸೊಪ್ಪು - 1 ಕಪ್
ಉಪ್ಪು - ರುಚಿಗೆ
 
ಮಾಡುವ ವಿಧಾನ:
2-3 ಗಂಟೆ ನೆನೆಸಿಟ್ಟ ಉದ್ದಿನಬೇಳೆಗೆ ಸ್ವಲ್ಪವೇ ನೀರನ್ನು ಸೇರಿಸಿ ಮಿಕ್ಸಿಯಿಂದ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು, ಹೆಚ್ಚಿದ ಪಾಲಾಕ್ ಮತ್ತು ಕೊತ್ತಂಬರಿ ಸೊಪ್ಪು, ಹೆಚ್ಚಿದ ಶುಂಠಿ, ಈರುಳ್ಳಿ ಮತ್ತು ಹಸಿಮೆಣಸು ಮತ್ತು ಜೀರಿಗೆಯನ್ನು ಸೇರಿಸಿ ಮಿಕ್ಸ್ ಮಾಡಿ. ನಂತರ ಈ ಮಿಶ್ರಣವನ್ನು ಕಾದ ಎಣ್ಣೆಯಲ್ಲಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಬಿಟ್ಟು ಚಿಕ್ಕ ಉರಿಯಲ್ಲಿ ಕರಿದರೆ ಪಾಲಾಕ್ ಪಕೋಡಾ ಸವಿಯಲು ಸಿದ್ಧವಾಗುತ್ತದೆ.
 
4. ಅನ್ನದ ಕಟ್ಲೆಟ್
 
ಬೇಕಾಗುವ ಸಾಮಗ್ರಿಗಳು:
ಅನ್ನ - 1 ಕಪ್
ಹೆಚ್ಚಿದ ಬೆಳ್ಳುಳ್ಳಿ - 2 ಚಮಚ
ಹೆಚ್ಚಿದ ಈರುಳ್ಳಿ - 1/2 ಕಪ್
ಹೆಚ್ಚಿದ ಶುಂಠಿ - 1 ಚಮಚ
ಹೆಚ್ಚಿದ ಹಸಿಮೆಣಸು - 1 ಚಮಚ
ಬೇಯಿಸಿ ತುರಿದಿಟ್ಟ ಬಟಾಟೆ - 1
ತುರಿದ ಕ್ಯಾರೆಟ್ - 1
ಹೆಚ್ಚಿದ ಕೊತ್ತಂಬರಿ ಸೊಪ್ಪು - ಒಂದು ಹಿಡಿ
ಉಪ್ಪು - ರುಚಿಗೆ
ಅರಿಶಿಣ - 1 ಚಿಟಿಕೆ
ಅಚ್ಚಖಾರದ ಪುಡಿ - 1 ಚಮಚ
ಜೀರಿಗೆ ಪುಡಿ - 1 ಚಮಚ
ಗರಂ ಮಸಾಲಾ - 1/2 ಚಮಚ
ನಿಂಬೆ ರಸ - 1-2 ಚಮಚ
ಎಣ್ಣೆ - ಕರಿಯಲು
 
ಮಾಡುವ ವಿಧಾನ:
ಮೇಲಿನ ಎಲ್ಲಾ ಸಾಮಗ್ರಿಗಳನ್ನು ಒಂದು ಬೌಲ್‌ನಲ್ಲಿ ಹಾಕಿಕೊಳ್ಳಿ. ನಿಮ್ಮ ಕೈಯಿಂದ ಇವೆಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ಸ್ಮ್ಯಾಶ್ ಮಾಡಿಕೊಳ್ಳಿ. ನಂತರ ನಿಮ್ಮ ಕೈಗೆ ಎಣ್ಣೆ ಅಥವಾ ತುಪ್ಪವನ್ನು ಸವರಿಕೊಂಡು ಅದನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಸ್ವಲ್ಪ ತಟ್ಟಿ ಇರಿಸಿಕೊಳ್ಳಿ. ಒಂದು ಪ್ಯಾನ್‌ನಲ್ಲಿ 5-6 ಚಮಚ ಎಣ್ಣೆಯನ್ನು ಹಾಕಿ ಕಾದ ನಂತರ ತಟ್ಟಿದ ಉಂಡೆಗಳನ್ನು ಹಾಕಿ ಎರಡೂ ಬದಿ ಕೆಂಪಾಗುವಂತೆ ಫ್ರೈ ಮಾಡಿದರೆ ಅನ್ನದ ಕಟ್ಲೆಟ್ ರೆಡಿಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments