Select Your Language

Notifications

webdunia
webdunia
webdunia
webdunia

ಹೀರೆಕಾಯಿ ಚಟ್ನಿ ಮಾಡಿ ನೋಡಿ..!!

ಹೀರೆಕಾಯಿ ಚಟ್ನಿ ಮಾಡಿ ನೋಡಿ..!!

ನಾಗಶ್ರೀ ಭಟ್

ಬೆಂಗಳೂರು , ಗುರುವಾರ, 4 ಜನವರಿ 2018 (16:07 IST)
ಬಹುತೇಕ ಕರ್ನಾಟಕದ ಎಲ್ಲೆಡೆ ಹೀರೆಕಾಯಿಯ ಚಟ್ನಿಯನ್ನು ಮಾಡುತ್ತಾರೆ. ಹೀರೆಕಾಯಿಯು ಉತ್ತಮ ಫೈಬರ್ ಅಂಶವನ್ನು ಮತ್ತು ಉತ್ತಮ ಪೋಷಕಾಂಶಗಳನ್ನು ಹೊಂದಿರುವ ತರಕಾರಿಗಳಲ್ಲಿ ಒಂದಾಗಿದ್ದು ಆರೋಗ್ಯದ ದೃಷ್ಟಿಯಿಂದ ಇದನ್ನು ಸೇವಿಸುವುದು ಬಹಳ ಒಳ್ಳೆಯದು. ಆದ್ದರಿಂದ ಆರೋಗ್ಯದ ದೃಷ್ಟಿಯಲ್ಲಿ ಹಾಗೂ ರುಚಿಯಲ್ಲಿ ಉತ್ತಮವಾಗಿರುವ ಹೀರೆಕಾಯಿಯ ಚಟ್ನಿಯನ್ನು ನೀವು ಮಾಡಿಕೊಳ್ಳಬಹುದು. ಇದನ್ನು ಹೇಗೆ ಮಾಡುವುದು ಎಂಬುದನ್ನು ತಿಳಿಯುವ ಕುತೂಹಲವಿದ್ದರೆ ಈ ಲೇಖನವನ್ನು ಓದಿ.
ಬೇಕಾಗುವ ಸಾಮಗ್ರಿಗಳು:
 
ಹೀರೆಕಾಯಿ - 1
ಕಾಯಿತುರಿ - 1/2 ಕಪ್
ಹುಣಿಸೆ ಹಣ್ಣು - 1 ನಿಂಬೆ ಗಾತ್ರ
ಹಸಿಮೆಣಸು - 2-3
ಅರಿಶಿಣ - 1/2 ಚಮಚ
ಬೆಲ್ಲ - 1 ಚಮಚ
ಉಪ್ಪು - ರುಚಿಗೆ
ಬೆಳ್ಳುಳ್ಳಿ - 7-8 ಎಸಳು
ಸಾಸಿವೆ - 1 ಚಮಚ
ಜೀರಿಗೆ - 1 ಚಮಚ
ಒಣ ಮೆಣಸು - 2
ಇಂಗು - ಚಿಟಿಕೆ
ಕರಿಬೇವು - ಸ್ವಲ್ಪ
ಎಣ್ಣೆ - 2-3 ಚಮಚ
 
ಮಾಡುವ ವಿಧಾನ:
 
ಒಂದು ಪ್ಯಾನ್ ಅನ್ನು ಸ್ಟೌ ಮೇಲಿಟ್ಟು 2 ಚಮಚ ಎಣ್ಣೆ ಹಾಕಿ ಅದು ಕಾದಾಗ ಹೆಚ್ಚಿದ ಹೀರೆಕಾಯಿ, ಹಸಿಮೆಣಸು, ಬೆಳ್ಳುಳ್ಳಿ, 1/2 ಚಮಚ ಜೀರಿಗೆಯನ್ನು ಹಾಕಿ 1 ನಿಮಿಷ ಹುರಿಯಿರಿ. ನಂತರ 1/4 ಕಪ್ ನೀರು, ಹುಣಿಸೆ ಹಣ್ಣು, ಬೆಲ್ಲ, ಅರಿಶಿಣ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ 10-15 ನಿಮಿಷ ಚೆನ್ನಾಗಿ ಬೇಯಿಸಿ ಸ್ಟೌ ಆಫ್ ಮಾಡಿ. ಇಲ್ಲಿ ಹೀರೆಕಾಯಿಯ ಬದಲು ಕೇವಲ ಹೀರೆಕಾಯಿಯ ಸಿಪ್ಪೆಯನ್ನೂ ಬಳಸಬಹುದು.
 
ಹೀಗೆ ಬೇಯಿಸಿದ ಸಾಮಗ್ರಿಗಳು ಸ್ವಲ್ಪ ತಣ್ಣಗಾದ ನಂತರ ಕಾಯಿತುರಿಯನ್ನು ಸೇರಿಸಿ ಮಿಕ್ಸಿ ಜಾರ್‌ನಲ್ಲಿ ಹಾಕಿ ರುಬ್ಬಿ ಅದನ್ನು ಒಂದು ಬೌಲ್‌ಗೆ ಹಾಕಿ. ನಂತರ ಸ್ಟೌ ಮೇಲೆ ಪ್ಯಾನ್ ಇಟ್ಟು 2 ಚಮಚ ಎಣ್ಣೆ, ಸಾಸಿವೆ, ಜೀರಿಗೆ, ಒಣ ಮೆಣಸು, ಕರಿಬೇವು ಮತ್ತು ಇಂಗನ್ನು ಹಾಕಿ ಒಂದು ಒಗ್ಗರಣೆಯನ್ನು ರೆಡಿ ಮಾಡಿ ಅದನ್ನು ರುಬ್ಬಿದ ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿದರೆ ಹೀರೆಕಾಯಿ ಚಟ್ನಿ ರೆಡಿ.
ಇದು ಊಟದಲ್ಲಿ ಅನ್ನದ ಜೊತೆ ರುಚಿಯಾಗಿರುತ್ತದೆ ಮತ್ತು ದೋಸೆ, ಅಕ್ಕಿ ರೊಟ್ಟಿ ಮತ್ತು ಚಪಾತಿಯ ಜೊತೆಯೂ ತಿನ್ನಬಹುದು. ನೀವೂ ಒಮ್ಮೆ ಇದನ್ನು ಮಾಡಿ ಸವಿಯಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹೀರೆಕಾಯಿ ಮತ್ತು ಬೇರುಹಲಸು(ದೇವಿ ಹಲಸು) ಕಾಯಿಯ ಬಜ್ಜಿ ಮಾಡಿ ನೋಡಿ..!!