Select Your Language

Notifications

webdunia
webdunia
webdunia
webdunia

ಹಾಗಲಕಾಯಿ ಸಿಹಿ ಪಲ್ಯ...

ಹಾಗಲಕಾಯಿ ಸಿಹಿ ಪಲ್ಯ...

ನಾಗಶ್ರೀ ಭಟ್

ಬೆಂಗಳೂರು , ಗುರುವಾರ, 25 ಜನವರಿ 2018 (16:21 IST)
ಹಾಗಲಕಾಯಿ ತನ್ನ ಕಹಿಯ ರುಚಿಯಿಂದ ಸುಮಾರಾಗಿ ಎಲ್ಲರೂ ಇಷ್ಟಪಡದ ತರಕಾರಿಯಾಗಿದೆ. ಆದರೆ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗಲಕಾಯಿಯ ನಿಯಮಿತ ಸೇವನೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುತ್ತದೆ ಎಂದು ಹೇಳುತ್ತಾರೆ.

ಹಾಗಲಕಾಯಿಗೆ ಅದರ ಕಹಿಯ ಪರಿಮಳವೇ ಒಂದು ತರಹದ ವಿಶಿಷ್ಟತೆಯನ್ನು ನೀಡುತ್ತದೆ. ಹಾಗಲಕಾಯಿಯ ಈ ಸಿಹಿ ಪಲ್ಯವು ಅನ್ನದ ಜೊತೆಗೆ ರುಚಿಯಾಗಿರುತ್ತದೆ. ಈ ಹಾಗಲಕಾಯಿ ಪಲ್ಯವನ್ನು ಹೇಗೆ ಮಾಡುವುದು ಎಂದು ತಿಳಿದುಕೊಳ್ಳಲು ಈ ಲೇಖನವನ್ನು ಓದಿ.
 
ಬೇಕಾಗುವ ಸಾಮಗ್ರಿಗಳು:
 
ಹಾಗಲಕಾಯಿ - 2
ಹುಣಿಸೆಹಣ್ಣು - 1 ಚಿಕ್ಕ ನಿಂಬೆಗಾತ್ರ
ಬೆಲ್ಲ - 1 ದೊಡ್ಡ ನಿಂಬೆಗಾತ್ರ
ಹಸಿಮೆಣಸು - 1
ಅರಿಶಿಣ - 2 ಚಮಚ
ರಸಂ ಪುಡಿ - 1 ಚಮಚ
ಉಪ್ಪು - ರುಚಿಗೆ
ಸಾಸಿವೆ - 1 ಚಮಚ
ಉದ್ದಿನಬೇಳೆ - 1 ಚಮಚ
ಕೆಂಪು ಮೆಣಸು - 2
ಕರಿಬೇವು - ಸ್ವಲ್ಪ
ಎಣ್ಣೆ - 3-4 ಚಮಚ
 
ಮಾಡುವ ವಿಧಾನ:
 
ಹಾಗಲಕಾಯಿಯನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಅದಕ್ಕೆ 1 ಚಮಚ ಉಪ್ಪು ಮತ್ತು 1 ಚಮಚ ಅರಿಶಿಣವನ್ನು ಹಾಕಿ ಮಿಕ್ಸ್ ಮಾಡಿ 15-20 ನಿಮಿಷ ಹಾಗೆಯೇ ಬಿಡಿ. ನಂತರ ಸ್ವಲ್ಪ ನೀರನ್ನು ಸೇರಿಸಿ ಅದನ್ನು ಹಿಂಡಿ ನೀರನ್ನು ಬೇರ್ಪಡಿಸಿ. ಇದು ಹಾಗಲಕಾಯಿಯ ಕಹಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಸಿ ಹಿಂಡಿ ರಸವನ್ನು ಬೇರ್ಪಡಿಸಿಕೊಳ್ಳಿ.
 
ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ 3-4 ಚಮಚ ಎಣ್ಣೆಯನ್ನು ಹಾಕಿ ಅದು ಬಿಸಿಯಾದಾಗ ಸಾಸಿವೆ, ಉದ್ದಿನಬೇಳೆ, ಹಸಿಮೆಣಸು, ಕೆಂಪು ಮೆಣಸು, ಕರಿಬೇವು, 1 ಚಮಚ ಅರಿಶಿಣ ಮತ್ತು ರಸಂ ಪುಡಿಯನ್ನು ಕ್ರಮವಾಗಿ ಸೇರಿಸಿ ಹುರಿದು ಅದಕ್ಕೆ ಹೆಚ್ಚಿದ ಹಾಗಲಕಾಯಿಯನ್ನು ಸೇರಿಸಿ ಹುರಿಯಿರಿ. ಹಾಗಲಕಾಯಿ ಚೆನ್ನಾಗಿ ಹುರಿದು ಹೊಂಬಣ್ಣಬರುವವರೆಗೂ ಹುರಿಯಿರಿ. ಈಗ ಇದಕ್ಕೆ ಹುಣಿಸೆ ಹಣ್ಣಿನ ರಸ, ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ 5 ನಿಮಿಷ ಹುರಿದರೆ ಹಾಗಲಕಾಯಿ ಪಲ್ಯ ರೆಡಿ.
 
ಆರೋಗ್ಯಕ್ಕೂ ಉತ್ತಮವಾಗಿರುವ ಈ ಹಾಗಲಕಾಯಿ ಪಲ್ಯವನ್ನು ನೀವೂ ಒಮ್ಮೆ ಮಾಡಿ ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರುಚಿಯಾಗಿ ದಾಲ್ ಫ್ರೈ ಮಾಡಿ ಸವಿಯಿರಿ..!