Select Your Language

Notifications

webdunia
webdunia
webdunia
webdunia

ಬಗೆ ಬಗೆಯ ಬಾರ್ಲಿ ತಿನಿಸುಗಳು

ಬಗೆ ಬಗೆಯ ಬಾರ್ಲಿ ತಿನಿಸುಗಳು
ಬೆಂಗಳೂರು , ಸೋಮವಾರ, 25 ಮಾರ್ಚ್ 2019 (18:24 IST)
ಬಾರ್ಲಿಯು ಆರೋಗ್ಯಕ್ಕೆ ಪೂರಕವಾದ ಒಂದು ಧಾನ್ಯ. ಇದರಿಂದ ನಾನಾ ವಿಧದ ಖಾದ್ಯಗಳನ್ನು ಮಾಡಿ ಸವಿಯಬಹುದು. 
1) ಬಾರ್ಲಿ ಚಪಾತಿ:
 
ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಬಾರ್ಲಿ ಹಿಟ್ಟು 1 ಕಪ್
* ನೀರು 1 ಕಪ್
* ಚಿಟಿಕೆಯಷ್ಟು ಉಪ್ಪು
* ತುಪ್ಪ ಒಂದು ಚಮಚ
 
  ತಯಾರಿಸುವ ವಿಧಾನ:
  ಮೊದಲು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ ಉಪ್ಪು ಮತ್ತು ತುಪ್ಪವನ್ನು ಹಾಕಬೇಕು. ನಂತರ ಬಾರ್ಲಿಯನ್ನು ಜರಡಿ ಹಿಡಿದು ಬಿಸಿನೀರಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಸಣ್ಣ ಉರಿಯಲ್ಲಿ ನಿಧಾನವಾಗಿ ಐದು ನಿಮಿಷ ಮಗುಚಬೇಕು. ಹಾಗೆ ಮಾಡಿದರೆ ಹಿಟ್ಟು ಕೈಗೆ ಅಂಟುವುದಿಲ್ಲ. ನಂತರ ಒಲೆಯಿಂದ ಇಳಿಸಿ ಪೂರ್ತಿಯಾಗಿ ಆರಲು ಬಿಡಬೇಕು. ನಂತರ ಬೇಕಾದ ಗಾತ್ರದ ಉಂಡೆಗಳನ್ನು ತಯಾರಿಸಿಕೊಳ್ಳಬೇಕು. ನಂತರ ಬಾರ್ಲಿ ಹಿಟ್ಟನ್ನು ಉದುರಿಸಿಕೊಂಡು ಲಟ್ಟಣಿಗೆಯಿಂದ ತೆಳುವಾಗಿ ಲಟ್ಟಿಸಿಕೊಳ್ಳಬೇಕು. ನಂತರ ತವಾವನ್ನು ಬಿಸಿಮಾಡಿ ಎರಡೂ ಬದಿಯಲ್ಲಿ ಬೇಯಿಸಬೇಕು. ಎಣ್ಣೆಯನ್ನು ಹಾಕುವ ಅಗತ್ಯವಿರುವುದಿಲ್ಲ. ಹಾಗೆಯೇ ಉಬ್ಬಿ ಬರುತ್ತದೆ. ಈ ರೀತಿಯಾಗ ಬಾರ್ಲಿಯ ಚಪಾತಿಯನ್ನು ಮಾಡಬಹುದು. ಇದನ್ನು ಯಾವುದೇ ಕರಿ, ಚಟ್ನಿ ಅಥವಾ ಸಾಂಬಾರಿನೊಂದಿಗೆ ಸವಿಯಬಹುದು. 
 
2) ಬಾರ್ಲಿ ದೋಸೆ:
    ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಬಾರ್ಲಿ, ಗೋಧಿ ಮತ್ತು ಅಕ್ಕಿ 1/2 ಕಪ್
* ಹಸಿಮೆಣಸು 2
* ಉದ್ದಿನಬೇಳೆ 2 ಚಮಚ
* ಮೆಂತ್ಯ 1 ಚಮಚ
* ಕರಿಬೇವಿನ ಎಲೆ 20 ಎಸಳು
* ಉಪ್ಪು ರುಚಿಗೆ ತಕ್ಕಷ್ಟು 
* ಕರಿಯಲು ಎಣ್ಣೆ/ತುಪ್ಪ
 
  ತಯಾರಿಸುವ ವಿಧಾನ:
  ಮೊದಲು ಬಾರ್ಲಿ, ಗೋಧಿ, ಅಕ್ಕಿ, ಉದ್ದಿನಬೇಳೆ ಮತ್ತು ಮೆಂತ್ಯವನ್ನು ಚೆನ್ನಾಗಿ ತೊಳೆದು 3 ರಿಂದ 4 ಗಂಟೆಗಳ ಕಾಲ ನೆನೆಸಿಡಬೇಕು. ಜೊತೆಗೆ ಕರಿಬೇವು ಮತ್ತು ಹಸಿಮೆಣಸನ್ನೂ ನೆನೆಸಿದರೆ ಒಳ್ಳೆಯದು. ನಂತರ ನೆನೆದ ಪದಾರ್ಥಗಳನ್ನು ಮಿಕ್ಸಿಯಲ್ಲಿ ಅದೇ ನೀರಿನೊಂದಿಗೆ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಆ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಬೇಕು. ಅದನ್ನು ಎಂಟು ಗಂಟೆಗಳ ಕಾಲ ಹುದುಗಲು ಬಿಡಬೇಕು. ನಂತರ ದೋಸೆ ತವವನ್ನು ಮಧ್ಯಮ ಉರಿಯಲ್ಲಿ ಇಟ್ಟು ಹಿಟ್ಟನ್ನು ಹಾಕಿ ತೆಳುವಾಗಿ ಹರಡಬೇಕು. ನಂತರ ದೋಸೆಯ ಸುತ್ತಲೂ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಎರಡೂ ಬದಿಗೆ ಗರಿಗರಿಯಾಗಿ ಬೇಯಿಸಿದರೆ ಬಾರ್ಲಿಯ ದೋಸೆ ಸವಿಯಲು ಸಿದ್ಧ. 
 
3) ಬಾರ್ಲಿ ಸೂಪ್:
    ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಶುಂಠಿ 1 ಇಂಚು
* ಬೆಳ್ಳುಳ್ಳಿ 10 ಎಸಳು
* ಈರುಳ್ಳಿ 1/2 
* ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ, ಕೋಸು ಎಲ್ಲಾ ಸೇರಿ 1 ಕಪ್
* ಕೊತ್ತಂಬರಿ ಸೊಪ್ಪು ಸ್ವಲ್ಪ
* ಎಣ್ಣೆ/ಬೆಣ್ಣೆ 2 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಪಾವ್ ಬಾಜಿ ಮಸಾಲೆ 1 ಚಮಚ
* ಕಾಳುಮೆಣಸಿನ ಪುಡಿ 1/2 ಚಮಚ
* ಬಾರ್ಲಿ 100 ಗ್ರಾಂ
* ನೀರು 1 ಲೀಟರ್
 
   ತಯಾರಿಸುವ ವಿಧಾನ:
  ಮೊದಲು ಬಾರ್ಲಿಯನ್ನು ಕುಕ್ಕರಿನಲ್ಲಿ ಹಾಕಿ ನೀರನ್ನು ಸೇರಿಸಿ 10 ವಿಷಲ್ ಕೂಗಿಸಬೇಕು. ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದರಲ್ಲಿ ಶುಂಠಿ, ಬೆಳ್ಳುಳ್ಳಿ, ಈರುಳ್ಳಿಯನ್ನು ಹಾಕಿ ಹುರಿಯಬೇಕು. ನಂತರ ತರಕಾರಿಗಳನ್ನು ಸೇರಿಸಿ ಹುರಿಯಬೇಕು. ನಂತರ ಬೇಯಿಸಿದ ಬಾರ್ಲಿ ಮತ್ತು ಅದರ ನೀರನ್ನು ಹಾಕಬೇಕು. ತದನಂತರ ಉಪ್ಪನ್ನು ಸೇರಿಸಿ ಕುದಿಸಬೇಕು. ನಂತರ ಪಾವ್ ಬಾಜಿ ಮಸಾಲೆ ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಸೇರಿಸಿದರೆ ರುಚಿಕರವಾದ ಆರೋಗ್ಯಕರವಾದ ಬಾರ್ಲಿ ಸೂಪ್ ಸವಿಯಲು ಸಿದ್ಧ. 

Share this Story:

Follow Webdunia kannada

ಮುಂದಿನ ಸುದ್ದಿ

ರುಚಿಯಾದ ಶುಗರ್ ಫ್ರೀ ಮೋದಕ ಮಾಡಿ ಸವಿಯಿರಿ..