Select Your Language

Notifications

webdunia
webdunia
webdunia
webdunia

ಈರುಳ್ಳಿ ಸಾಂಬಾರು (Baby Onion Sambar)

ಈರುಳ್ಳಿ ಸಾಂಬಾರು (Baby Onion Sambar)
ಬೆಂಗಳೂರು , ಸೋಮವಾರ, 15 ಅಕ್ಟೋಬರ್ 2018 (17:59 IST)
ಈರುಳ್ಳಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದ್ದು ಇದನ್ನು ಹಸಿಯಾಗಿ ಅಥವಾ ಬೇಯಿಸಿಯೂ ತಿನ್ನಬಹುದಾಗಿದೆ. ಇದು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮತ್ತು ಸಾಕಷ್ಟು ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಒದಗಿಸುವಲ್ಲಿ ತುಂಬಾನೇ ಸಹಾಯಕಾರಿ. ಇದನ್ನು ನಮ್ಮ ಅಡುಗೆಗಳಲ್ಲಿ ಹೆಚ್ಚಾಗಿ ಬಳಸುತ್ತೇವೆ ಇದರಿಂದ ಹಲವು ಆಹಾರ ಪದಾರ್ಥಗಳನ್ನು ನಾವು ತಯಾರಿಸಬಹುದು ಅದರಲ್ಲೂ ಸಾಕಷ್ಟು ಜನಪ್ರಿಯವಾಗಿರುವುದು ಈರುಳ್ಳಿ ಸಾಂಬಾರ್ ಅದನ್ನು ಹೇಗೆ ಮಾಡೋದು ಅಂತಾ ತಿಳ್ಕೋಬೇಕಾ ಇಲ್ಲಿದೆ ವಿವರ.
 
ಬೇಕಾಗುವ ಪದಾರ್ಥಗಳು:
 
ತೊಗರಿ ಬೇಳೆ - ಒಂದು ಕಪ್
ಈರುಳ್ಳಿ 1/2 ಕೇಜಿ
ತೆಂಗಿನ ತುರಿ - ಒಂದು ಹೋಳಿಗೂ ಸ್ವಲ್ಪ ಕಡಿಮೆ
ಕೆಂಪು ಮೆಣಸಿನಕಾಯಿ - 6-7
ಕೊತ್ತುಂಬರಿ ಬೀಜ - 3 ಚಮಚ
ಹುಣಸೆ ಹಣ್ಣು ಸ್ವಲ್ಪ
ಬೆಲ್ಲ - ಚಿಕ್ಕದು
ಕರಿಬೇವು - 10 ಎಲೆ
ಕೊತ್ತುಂಬರಿ ಸೊಪ್ಪು- ಸ್ವಲ್ಪ
ಒಗ್ಗರಣೆಗೆ ಎಣ್ಣೆ - 2 ಚಮಚ
ಸಾಸಿವೆಕಾಳು - ಕಾಲು ಚಮಚ
ಅರಿಶಿನ - ಕಾಲು ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಇಂಗು - ಚಿಟಿಕೆ
 
ಮಾಡುವ ವಿಧಾನ:
ತೊಗರಿಬೇಳೆಯನ್ನು ಸ್ವಲ್ಪ ಹೊತ್ತು ನೀರಲ್ಲಿ ನೆನೆಸಿ ನಂತರ ಅದಕ್ಕೆ ಒಂದೆರಡು ಹನಿ ಎಣ್ಣೆ ಹಾಗೂ ಚಿಟಕಿ ಅರಿಶಿನಹಾಕಿ ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಿ. ಚಿಕ್ಕದಾದ ಈರುಳ್ಳಿಯ ಸಿಪ್ಪೆ ಬಿಡಿಸಿಕೊಳ್ಳಿ.ಗ್ಯಾಸ್ ಹೊತ್ತಿಸಿ, ಫ್ರೈಯಿಂಗ್ ಪ್ಯಾನ್ ಇಟ್ಟು, ಕೊತ್ತುಂಬರಿ ಬೀಜವನ್ನು ಸಣ್ಣ ಉರಿಯಲ್ಲಿ ಹುರಿದುಕೊಂಡು ಬದಿಗಿಡಿ. ಹಾಗೆಯೇ ಕರಿಬೇವಿನ ಎಲೆಗಳನ್ನೂ ಗರಿಗರಿಯಾಗುವವರೆಗೆ ಹುರಿದು ತೆಗೆದಿಡಿ. ತದನಂತರ ಎರಡು ಹನಿ ಎಣ್ಣೆ ಹಾಕಿ, ಬ್ಯಾಡಗಿ ಮೆಣಸಿನ ಕಾಯಿಯನ್ನು ಕೆಂಪಗೆ, ಗರಿಗರಿಯಾಗುವವರೆಗೆ ಸಣ್ಣ ಉರಿಯಲ್ಲಿ ಹುರಿದು ತೆಗೆದಿಡಿ.
 
ಈಗ ತುರಿದಿಟ್ಟ ಕಾಯಿ ತುರಿಯನ್ನೂ ಕೆಂಪಗಾಗುವಂತೆ ಹುರಿದುಕೊಳ್ಳಿ. ತಣ್ಣಗಾದ ನಂತರ ಅದನ್ನು ಒಂದು ಜಾರ್ ಅಲ್ಲಿ ಹಾಕಿ ಅದಕ್ಕೆ ಹುಳಿಯನ್ನು ಹಾಕಿ. ಹುರಿದ ಕೆಂಪು ಮೆಣಸಿನ ಕಾಯಿ, ಕೊತ್ತುಂಬರಿ ಬೀಜ ಮತ್ತು ಕರಿಬೇವನ್ನು ಸೇರಿಸಿಕೊಂಡು ಬೇಕಾದಷ್ಟು ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
 
ನಂತರ ಒಂದು ಪ್ಯಾನ್‌‌ಗೆ ಅರ್ಧ ಚಮಚ ಎಣ್ಣೆ ಹಾಕಿ, ಸಿಪ್ಪೆ ಬಿಡಿಸಿದ ಈರುಳ್ಳಿ ಹಾಕಿ ಕೆಂಪಗಾಗುವವರೆಗೆ ಹುರಿದುಕೊಂಡು ಒಂದು ಕಪ್ ನೀರು ಹಾಕಿ ಮುಚ್ಚಳವನ್ನು ಮುಚ್ಚಿ 6-8 ನಿಮಿಷ ಬೇಯಿಸಿ. ಈರುಳ್ಳಿಯು ಬೆಂದಾಗ ಬೇಯಿಸಿದ ಬೇಳೆಯನ್ನು ಹಾಕಿ, ಕುದಿಸಿ. ನಂತರ ರುಚಿಗೆ ತಕ್ಕಷ್ಟು ಉಪ್ಪು, ಚಿಟಕಿ ಅರಿಶಿನ, ಬೆಲ್ಲ, ಕರಿಬೇವಿನ ಎಲೆಗಳನ್ನು ಹಾಕಿ. ಮತ್ತೆರಡು ನಿಮಿಷಕ್ಕೆ ರುಬ್ಬಿದ ಮಸಾಲೆಯನ್ನೂ ಹಾಕಿ. ಬೇಕಿದ್ದಲ್ಲಿ ನೀರು ಸೇರಿಸಿ ಕುದಿಯಲು ಬಿಡಿ. ಚೆನ್ನಾಗಿ ಕುದ್ದಾದ ನಂತರ ಸಣ್ಣಗೆ ಹೆಚ್ಚಿದ ಕೊತ್ತುಂಬರಿ ಸೊಪ್ಪನ್ನು ಹಾಕಿ. ಎಣ್ಣೆ, ಸಾಸಿವೆಕಾಳು, ಇಂಗಿನ ಒಗ್ಗರಣೆ ಕೊಡಿ. ರುಚಿಯಾದ ಪುಟ್ಟ ಈರುಳ್ಳಿಯ ಸಾಂಬಾರು ಸಿದ್ಧ.

Share this Story:

Follow Webdunia kannada

ಮುಂದಿನ ಸುದ್ದಿ

ಪನ್ನೀರ್ ಕೋಳಿವಡಾ (Paneer Koli Vada)