ಪಾನಿಪುರಿವಾಲಾನ ಮಿ ವರ್ಲ್ಡ್ ಕನಸು
ಸಾಧನೆಯಲ್ಲಿ ಸಾಗಿರುವ ಕಿಟ್ಟಿ ಕಿರುಪರಿಚಯ
ಚಿಕ್ಕವನಿದ್ದಾಗ ನಿತ್ಯ ತನ್ನ ಪಾನಿ ಪುರಿ ತಿನ್ನಲು ಬರುತ್ತಿದ್ದ ಬಾಡಿ ಬಿಲ್ಡರ್ ಒಬ್ಬನನ್ನು ನೋಡುತ್ತ ನಾನೂ ಒಬ್ಬ ಬಾಡಿ ಬಿಲ್ಡರ್ ಯಾಕೆ ಆಗಬಾರದು ಎಂಬ ಯೋಚನೆ. ಕನಸುಗಳೇ ಹಾಗೆ. ಮನಸ್ಸಿನಲ್ಲಿ ಸುಳಿದರೆ ಕನಸಿಗೊಂದು ಸುಂದರ ಮೂರ್ತ ಸ್ವರೂಪ ನೀಡುವ ತುಡಿತ ಇರುತ್ತದೆ. ಅಂಥವರಲ್ಲಿ ಇಂದಿಗೂ ಎಲೆ ಮರೆಯ ಕಾಯಿಯಾಗಿ ಅಂತಾರಾಷ್ಟ್ರೀಯ ಮಟ್ಟದ ದೇಹದಾರ್ಢ್ಯ ಪಟು ಕಿಟ್ಟಿ ಕೂಡ ಒಬ್ಬ. ಈತ ಇಂದಿಗೂ ಅದೇ ಪಾನಿಪುರಿ ಮಾರುವ ತನ್ನ ಕಾಯಕಕ್ಕೆ ಕುಂದು ತಂದುಕೊಂಡಿಲ್ಲ. ಒಂದು ದಿನ ನಾನು ಕೂಡ ಮಿ. ವರ್ಲ್ಡ್ ಪಟ್ಟಕ್ಕೇರುತ್ತೇನೆ ಎನ್ನುವ ಅದಮ್ಯ ವಿಶ್ವಾಸವಿದೆ.
ಖರಾಬ್ ನಸೀಬು ಕಣ್ರಿ ಎಂದುಕೊಂಡು ಕೈಕಟ್ಟಿ ಕುಳಿತುಕೊಳ್ಳದೆ ಸಾಧನೆಯತ್ತ ಸಾಗಬೇಕೆನ್ನುವ ಛಲ ಬೆಳೆಸಿಕೊಂಡು ಈಗಾಗಲೇ ಕೆಲ ದೂರ ಕ್ರಮಿಸಿರುವ ಬೆಂಗಳೂರು ಎಂಬ ಮಹಾನಗರಿಯ ಮಹಾಲಕ್ಷ್ಮೀ ಲೇ ಔಟ್ ಕಿಟ್ಟಿ ಇಂದಿನ ಯುವಕರಿಗೆ ಜೀವಂತ ಉದಾಹರಣೆಯಾಗಬಲ್ಲರು. ಸವಾಲುಗಳ ನಡುವೆ ಸೌಧಕ್ಕೆ ಬುನಾದಿ ಹಾಕಿದವನಿಗೆ ಸೌಧ ನಿರ್ಮಿಸುವುದು ದೊಡ್ಡ ಮಾತೆ ?
ಇಂದು ಮಹಾಲಕ್ಷ್ಮೀ ಲೇ ಔಟಿನ ಕಿಟ್ಟಿ ಅಂತಾರಾಷ್ಟ್ರೀಯ ಮಟ್ಟದ ದೇಹದಾರ್ಢ್ಯ ಪಟು. ಆದರೂ ಪಾನಿಪುರಿ ಮಾರುವುದನ್ನು ಬಿಟ್ಟಿಲ್ಲ. ಬರುವ ಗಿರಾಕಿಗಳಲ್ಲಿ ಅರ್ಧದಷ್ಟು ಅಭಿಮಾನಿಗಳು. ಅವರಲ್ಲಿ ಕೆಲವರಿಗಂತೂ ಕಿಟ್ಟಿಯ ಸಾಧನೆ ಕುರಿತು ಹೇಳಿಕೊಳ್ಳುವುದು ಎಂದರೆ ಹೆಮ್ಮೆ.
ಪಾನಿ ಪುರಿ ಕಿಟ್ಟಿ, ಮನುಷ್ಯ ಮತ್ತು ಸಾಧನೆಯ ಕಥೆಯಾಗಿ ನಮ್ಮೊಂದಿಗೆ ನಿಲ್ಲುತ್ತಾನೆ. ನಿತ್ಯ ಬದುಕಿನ ಜಂಜಾಟದ ನಡುವೆ ಎದ್ದು ನಿಂತವನನ್ನು ಗುರುತಿಸಬೇಕು ಎಂದು ಅನ್ನುತ್ತಾರೆ, ರೂಪಶ್ರೀ ಮತ್ತು ವಿನೋದ್.
ಕೆಲವು ವರ್ಷಗಳ ಹಿಂದಿನ ಮಾತು. ಕಿಟ್ಟಿ ಇನ್ನೂ ಹುಡುಗನಾಗಿದ್ದ. ಆಗಲೇ ಪಾನಿಪುರಿ ವ್ಯಾಪಾರ ಶುರುಹಚ್ಚಿಕೊಂಡಿದ್ದವನ ಅಂಗಡಿಗೆ ಜಿಮ್ ಮಾಸ್ಟರ್ ಒಬ್ಬ ಬರುತ್ತಿದ್ದನಂತೆ. ಆ ದಢೂತಿಯ ಮಾಂಸಭರಿತ ಕೈಗಳನ್ನು ನೋಡಿಯೇ ಕನಸು ಕಟ್ಟಿದ. ಒಂದು ದಿನ್ ಜಿಮ್ ಮಾಸ್ಟರ್ ಎದುರು ಕನಸು ಬಿಚ್ಚಿದ. ಸರಿ ಅಲ್ಲಿಂದ ಶುರುವಾದ ತಾಲೀಮು ಇಂದೂ ಹಾಗೆ ಮುಂದುವರಿದಿದೆ. ಸಾಫ್ಟ್ವೇರ್ ಇಂಜಿನಿಯರ್ ಸ್ನೇಹಿತ ಸುಧಾಕರ ಕೆಲವು ದಿನ ಸಹಾಯ ಹಸ್ತ ನೀಡಿದನಂತೆ.
ಕಿಟ್ಟಿ ಇಂದು ತನ್ನದೇ ಆದ ವ್ಯಾಯಾಮ ಶಾಲೆಯನ್ನು ನಡೆಸಿಕೊಂಡು ಹೋಗುತ್ತಿದ್ದಾನೆ.ಅಲ್ಲಿ ತನ್ನಂತೆ ಕನಸು ಕಟ್ಟಿಕೊಂಡು ಬರುವ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಾಧನೆಯ ಹಾದಿಯಲ್ಲಿ ಸಾಗುವ ಹಾದಿ ತೋರಿಸುತ್ತಿದ್ದಾನೆ.