Select Your Language

Notifications

webdunia
webdunia
webdunia
webdunia

ಗ್ರಾಮೀಣ ಕ್ರೀಡಾಕ್ರಾಂತಿ ಮಾಡಲು ಹೊರಟಿರುವ ಪಿ.ಟಿ. ಉಷಾರಿಗೆ ಬಸವಶ್ರೀ ಪುರಸ್ಕಾರ

ಗ್ರಾಮೀಣ ಕ್ರೀಡಾಕ್ರಾಂತಿ ಮಾಡಲು ಹೊರಟಿರುವ ಪಿ.ಟಿ. ಉಷಾರಿಗೆ ಬಸವಶ್ರೀ ಪುರಸ್ಕಾರ
PR
PR
ಶತಮಾನದ ಕ್ರೀಡಾಳು, 'ಸ್ಫೋಟ್ಸ್‌ವುಮೆನ್ ಆಫ್ ಮಿಲೇನಿಯಂ' ಬಿರುದಾಂಕಿತ ಚಿನ್ನದ ಓಟದ ರಾಣಿ, 'ಪಯ್ಯೌಲಿ ಎಕ್ಸ್‌ಪ್ರೆಸ್' ಖ್ಯಾತಿಯ ಪಿ.ಟಿ. ಉಷಾರಿಗೆ ಈ ಬಾರಿಯ 'ಬಸವಶ್ರೀ ಪ್ರಶಸ್ತಿ'ಯ ಸನ್ಮಾನ.

ಚಿತ್ರದುರ್ಗದ ಶ್ರೀ ಮುರುಘಾ ಮಠವು ಪ್ರತಿವರ್ಷ ಸಾಧಕರಿಗೆ ಕೊಡಮಾಡುವ 'ಬಸವಶ್ರೀ ಪ್ರಶಸ್ತಿ'ಗೆ ಹದಿಮೂರನೇಯವರಾಗಿ ಪಿಲವುಲ್ಲಕಂಡಿ ತೆಕ್ಕೆಪರಂಬಿಲ್ ಉಷಾ (ಪಿ.ಟಿ. ಉಷಾ) ಪಾತ್ರರಾಗಿದ್ದಾರೆ. ಶರಣ ಸಂಸ್ಕೃತೊ ಉತ್ಸವದಲ್ಲಿ ತಾ. 27 ರಂದು ಸಂಜೆ 6.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಶ್ರೀ ಶಿವಮೂರ್ತಿ ಮುರುಘಾ ಶಿವಶರಣರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

ಏಷಿಯಾ ಟ್ರಾಕ್‌ನಲ್ಲಿ ಐದು ಬಾರಿ ಚಿನ್ನ, ಒಂದು ಕಂಚಿನ ಪದಕ ಪಡೆಯುವುದರೊಂದಿಗೆ ಅಥ್ಲೆಟಿಕ‌್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿ ಭಾರತೀಯ ಪ್ರದೇಶದ ಮಕ್ಕಳಿಗೆ ಕ್ರೀಡಾಶಿಕ್ಷಣ ನೀಡುವತ್ತ ಮುಖ ಮಾಡಿದ್ದಾರೆ. ಈ ಕ್ರೀಡಾ ಕಾಯಕವನ್ನು ಗುರುತಿಸಿರುವ ಶ್ರೀಮಠವು ಪ್ರಥಮ ಬಾರಿಗೆ ಕ್ರೀಡಾಕ್ಷೇತ್ರದಲ್ಲಿ ಸಾಧಿಸಿದ ಗ್ರಾಮೀಣಾ ಮಹಿಳಾ ಪ್ರತಿಭೆಯನ್ನು ಗುರುತಿಸಿ ಬಸವಶ್ರೀ ಪುರಸ್ಕಾರವನ್ನು ಪಿ.ಟಿ. ಉಷಾರಿಗೆ ನೀಡಿ ಸನ್ಮಾನಿಸುತ್ತಿದೆ.

ಕೇರಳ ರಾಜ್ಯದ ಪಯ್ಯೌಲಿ ಜಿಲ್ಲೆಯ ಕುಗ್ರಾಮದಲ್ಲಿ 1964ರ ಜೂನ್ ತಿಂಗಳ 27ರಂದು ಪಿ.ಟಿ. ಉಷಾ ಜನ್ಮಿಸಿದರು. ತಂದೆ ಇ.ಪಿ.ಎಂ. ಪೈತಾಳ್ ಮತ್ತು ತಾಯಿ ಟಿ.ವಿ. ಲಕ್ಷ್ಮಿ.

400 ಮೀಟರ್ ಓಟವನ್ನು 55.42 ಸೆಕೆಂಡುಗಳಲ್ಲಿ ಓಡಿ ಏಷ್ಯಾ ಖಂಡದಲ್ಲೇ ದಾಖಲೆ ಮಾಡಿದ್ದರೂ ಕೂಡ ಉಷಾರ ನಿಜ ಜೀವನ ಓಟ ಅಷ್ಟು ಸುಲಭವಾಗಿರಲಿಲ್ಲ. 1976ರಲ್ಲಿ ಕೇರಳ ಸರ್ಕಾರ ಒ.ಎಂ. ನಂಬಿಯಾರ್ ರ್ನೇತೃತ್ವದಲ್ಲಿ ಮಹಿಳೆಯರಿಗೆ ಆರಂಭಿಸಿದ ಕ್ರೀಡಾ ವಿಭಾಗಕ್ಕೆ ಆಯ್ಕೆಗೊಂಡ ನಲವತ್ತು ಮಹಿಳೆಯರಲ್ಲಿ ಪಿ.ಟಿ. ಉಷಾ ಒಬ್ಬರಾಗಿದ್ದರು. ಅಲ್ಲಿಂದ ಓಡಲಾರಂಬಿಸಿದ ಉಷಾ ಅನಾವರಣಗೊಳ್ಳಲಾರಂಭಿಸಿದ್ದು, 1979ರ ನ್ಯಾಷನಲ್ ಸ್ಕೂಲ್ ಗೇಮ್ಸ್‌ನಲ್ಲಿ ವೈಯಕ್ತಿಕ ಪುರಸ್ಕಾರ ದೊರೆತಾಗ.

1980ರಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ನಡೆದ ರಾಷ್ಟ್ರೀಯ ಮುಕ್ತ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ಪಿ.ಟಿ. ಉಷಾ ಅಂತರರಾಷ್ಟ್ರೀಯ ಕ್ರೀಡಾಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಮೊದಲ ಬಾರಿಗೆ 4 ಚಿನ್ನದ ಪದಕಗಳನ್ನು ಗಳಿಸಿ ಹೊಸ ಅಧ್ಯಾಯ ಆರಂಭಿಸಿದರು.

1982ರಲ್ಲಿ ನಡೆದ ವಿಶ್ವ ಕಿರಿಯರ ಆಹ್ವಾನಿತ ಕ್ರೀಡಾಕೂಟದಲ್ಲಿ 200 ಮೀಟರ್ ಓಟದಲ್ಲಿ ಚಿನ್ನದ ಪದಕ, 100ಲ್ಲಿ ಕಂಚಿನ ಪದಕ ಪಡೆದರು. 1984ರಲ್ಲಿ ಅಮೆರಿಕಾದ ಲಾಸ್ ಏಂಜಲಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಪ್ರತಿನಿಧಿಸಿದ ಉಷಾರಿಗೆ ಕೂದಲೆಳೆ ಅಂತರದಲ್ಲಿ ಕಂಚಿನ ಪದಕ ಕೈ ತಪ್ಪಿತು.

ತಮ್ಮ 20ನೇ ವಯಸ್ಸಿನಲ್ಲೇ ಒಲಂಪಿಕ್ ಕ್ರೀಡಾಕೂಟದ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹಿರಿಮೆಗೆ ಪಿ.ಟಿ. ಉಷಾ ಪಾತ್ರರಾಗಿದ್ದಾರೆ. 1988ರಲ್ಲಿ ಸಿಯೋಲ್‌ನಲ್ಲಿ ನಡೆದ ಒಲಂಪಿಕ್ಸ್‌ನಲ್ಲಿ ಪಿ.ಟಿ. ಉಷಾರಿಗೆ ಪದಕ ಗೆಲ್ಲುವ ಅವಕಾಶ ವಿಫುಲವಾಗಿತ್ತಾದರಾದರೂ, ಕಾಲಿನ ಇಮ್ಮಡಿಗೆ ಶಸ್ತ್ರ ಚಿಕಿತ್ಸೆಯಾದ ಕಾರಣ ಅವರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಾಗಲಿಲ್ಲ. ಇದರಿಂದ ದೃತಿಗೆಡದ ಉಷಾ, 1989ರಲ್ಲಿ ದೆಹಲಿಯಲ್ಲಿ ನಡೆದ ಏಷಿಯನ್ ಟ್ರ್ಯಾಕ್ ಫೆಡರೇಷನ್ ಕ್ರೀಡಾಕೂಟದಲ್ಲಿ 4 ಚಿನ್ನ, 2 ಬೆಳ್ಳಿ ಪದಕವನ್ನು ಗೆಲ್ಲುವುದರ ಮೂಲಕ ಮತ್ತೆ ಹಳೆಯ ಲಯ ಕಂಡುಕೊಂಡರು.

ಬೀಜಿಂಗ್ ಏಷಿಯನ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು 3 ಬೆಳ್ಳಿ ಪದಕಗಳನ್ನು ಪಡೆದ ಉಷಾ ತದನಂತರದ ವರ್ಷಗಳಲ್ಲಿ ವಿ. ಶ್ರೀನಿವಾಸನ್ ವಿವಾಹವಾಗಿ ಉಜ್ವಲ ಎಂಬ ಮಗುವಿಗೆ ತಾಯಿಯಾದರು. ತದನಂತರ ಸ್ವಲ್ಪ ಸಮಯ ಓಟಕ್ಕೆ ಉಷಾ ವಿದಾಯ ಹೇಳಿದರಾದರೂ, 2000ನೇ ವರ್ಷದಲ್ಲಿ ಕ್ರೀಡಾಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ 34ನೇ ಇಳಿ ವಯಸ್ಸಿನಲ್ಲಿ ಜಪಾನ್‌ನ ಟುಕ್ಕೌವಾಕಾದಲ್ಲಿ ನಡೆದ ಏಷಿಯನ್ ಟ್ರ್ಯಾಕ್ ಫಡರೇಷನ್ ಕ್ರೀಡಾಕೂಟದಲ್ಲಿ 200 ಮೀಟರ್ ಮತ್ತು 400 ಮೀಟರ್ ಓಟದಲ್ಲಿ ಕಂಚಿನ ಪದಕಗಳಿಸಿ ಭಾರತೀಯ ಕ್ರೀಡಾಭಿಮಾನಿಗಳು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದರು.

ಶತಮಾನದ ಕ್ರೀಡಾಳು, 'ಸ್ಫೋಟ್ಸ್‌ವುಮೆನ್ ಆಫ್ ಮಿಲೇನಿಯಂ' ಎಂಬ ಬಿರುದನ್ನು ನೀಡಿ ಭಾರತೀಯ ಒಲಂಪಿಕ್ಸ್ ಸಂಸ್ಥೆ ಪಿ.ಟಿ. ಉಷಾರಿಗೆ ಸನ್ಮಾನಿಸಿದೆ. ಭಾರತ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಗಳಾದ 'ಅರ್ಜುನ ಪ್ರಶಸ್ತಿ' ಹಾಗೂ 'ಪದ್ಮಶ್ರೀ ಪ್ರಶಸ್ತಿ' ಇವರಿಗೆ ನೀಡಿ ಭಾರತ ಸರ್ಕಾರ ಗೌರವಿಸಿದೆ.

2000ನೇ ವರ್ಷದಲ್ಲಿ ಕ್ರೀಡೆಯಿಂದ ನಿವೃತ್ತಿ ಹೊಂದಿದ ಉಷಾ, ಅದೇ ವರ್ಷ 'ಉಷಾ ಸ್ಕೂಲ್ ಆಫ್ ಅಥ್ಲೆಟಿಕ್' ಪ್ರಾರಂಭಿಸಿದರು. ಯುವ ಕ್ರೀಡಾಳುಗಳ ಸಮಗ್ರ ಬೆಳವಣಿಗೆಯ ಗುರಿಯೊಂದಿಗೆ ಆರಂಭಗೊಂಡ ಕ್ರೀಡಾಶಾಲೆ ಗ್ರಾಮೀಣ ಕ್ರೀಡಾಳುಗಳ ಪ್ರತಿಭಾಶೋಧ ನಡೆಸಿ ಅವರನ್ನು ಮುಖ್ಯವಾಹಿನಿಗೆ ತರಲು ಮುನ್ನುಡಿ ಬರೆಯಿತು. ಇದು ಭಾರತೀಯ ಕ್ರೀಡಾ ಇತಿಹಾಸದಲ್ಲೇ ಕ್ರಾಂತಿಕಾರಿ ಹೆಜ್ಜೆ. ಇದೀಗ ಪಿ.ಟಿ. ಉಷಾರಿಗೆ 13ನೇ ಬಸವಶ್ರೀ ಪ್ರಶಸ್ತಿ ನೀಡಿ ಮುರುಘಾ ಮಠ ಸನ್ಮಾನಿಸುತ್ತಿದೆ.




Share this Story:

Follow Webdunia kannada