ಅದೃಷ್ಟ, ಪ್ರತಿಭೆ ಜತೆಗೆ ಸಿದ್ಧಿಯೂ ಇದೆ, ಪ್ರಸಿದ್ಧಿಯೂ ಇದೆ. ಈ ಕಾರಣಕ್ಕೆ, ವಿಶ್ವ ಟೆನಿಸ್ ರಂಗದಲ್ಲಿ ಅದ್ಭುತವಾಗಿ ಮಿಂಚಿದ ಜರ್ಮನಿಯ ಜಸ್ಟಿನ್ ಹೆನಿನ್ ಎಂಬ ಜರ್ಮನಿಯ ಬೆಡಗಿ ಜಸ್ಟಿನ್ ಹೆನಿನ್ ಹಠಾತ್ ನಿವೃತ್ತಿ ಘೋಷಿಸಿರುವುದು ವಿಶ್ವದ ಟೆನಿಸ್ ಜಗತ್ತಿನಲ್ಲಿ ಅಚ್ಚರಿ, ಆಘಾತ ಮೂಡಿಸಿರುವುದು ಸುಳ್ಳಲ್ಲ.
ಹಾಗೆ ಹೇಳಿದರೆ, ನಿವೃತ್ತಿ ಘೋಷಿಸುವ ವಯಸ್ಸು ಕೂಡ ಅಲ್ಲ ಆಕೆಯದು. 25ನೇ ವರ್ಷದಲ್ಲಿ ನಿವೃತ್ತಿ ಘೋಷಿಸಿದ್ದಾಳೆಂದರೆ ಇದಕ್ಕೆ ಕಾರಣ ಏನು ಎಂಬ ಪ್ರಶ್ನೆಯೂ ಅಲ್ಲಿ ಉದ್ಭವವಾಗುತ್ತದೆ. ಅದು ಕೂಡ ಸತತ 117 ವಾರಗಳಿಂದ ವಿಶ್ವ ಮಹಿಳಾ ಟೆನಿಸ್ ಡಬ್ಲ್ಯುಟಿಎ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರುವಾಗಲೇ.
ವಿಶ್ವ ವಿಖ್ಯಾತಿ, ಭರ್ಜರಿ ಪ್ರಚಾರಗಳು ಯುವ ಆಟಗಾರರ ಮೇಲೆ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆಯೇ? ಅಥವಾ ಕ್ರೀಡೆಯ ವಾಣಿಜ್ಯೀಕರಣ ವಿಪರೀತವಾಗಿಬಿಟ್ಟ ಪರಿಣಾಮವೇ ಇದು? ಎಂಬುದು ಉತ್ತರಿಸಲಾಗದ ಪ್ರಶ್ನೆ.
ಆಕೆ ಮಹಿಳಾ ಟೆನಿಸ್ ಜಗತ್ತನ್ನೇ ಆಳುತ್ತಾ ಬಲು ದೊಡ್ಡ ಎತ್ತರಕ್ಕೇರುತ್ತಾಳೆ ಎಂದು ಲೆಕ್ಕಾಚಾರ ಹಾಕುತ್ತಿದ್ದವರಿಗೆ ದಿಢೀರ್ ಆಗಿ ಅಪ್ಪಳಿಸಿದ ನಿವೃತ್ತಿ ನಿರ್ಧಾರವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಆಕೆಯ ಅಭಿಮಾನಿಗಳೆಲ್ಲಾ ಅದನ್ನು ಇನ್ನೂ ನಂಬುತ್ತಿಲ್ಲ.
ಇತ್ತೀಚೆಗೆ ಪುರುಷರ ಟೆನಿಸ್ ಅಗ್ರ ಶ್ರೇಯಾಂಕಿತ ಆಟಗಾ ರಾಫೆಲ್ ನಡಾಲ್ ಅವರು ಪಂದ್ಯಾವಳಿಯ ಶೆಡ್ಯೂಲ್ ಬಗ್ಗೆ ಕಿಡಿ ಕಾರಿರುವುದನ್ನು ನೋಡಿದರೆ, ಟೆನಿಸ್ ಆಟವು ವಾಣಿಜ್ಯಾತ್ಮಕವಾಗಿ ಹೊರಳುತ್ತಾ ಆಟಗಾರರನ್ನು ಬಲಿತೆಗೆದುಕೊಳ್ಳುತ್ತದೆ ಎಂಬುದನ್ನು ನಂಬಬೇಕು. ಬಹುಶಃ ಹೆನಿನ್ ನಿವೃತ್ತಿಗೂ ಇದೇ ಕಾರಣವಿರಬಹುದು.
ಏನೇ ಕಾರಣವಿರಲಿ, ಇಷ್ಟು ಸಣ್ಣ ವಯಸ್ಸಿನಲ್ಲೇ ಆಕೆ ಟೆನಿಸ್ನಿಂದ ನಿರ್ಗಮಿಸಿರುವುದು, ಟೆನಿಸ್ ಜಗತ್ತಿನಿಂದ ಧ್ರುವ ತಾರೆಯೊಂದು ತನ್ನ ಹೊಳಪು ಕಳೆದುಕೊಂಡಂತಾಗಿದೆ. ಟೆನಿಸ್ ಆಗಸದ ಪ್ರಕಾಶ ಮಾನ ನಕ್ಷತ್ರವೊಂದು ಹೊಳಪು ಕಳೆದುಕೊಂಡಂತಾಗಿದೆ.