Publish Date: Wed, 03 Feb 2016 (09:33 IST)
Updated Date: Thu, 04 Feb 2016 (12:43 IST)
ತಮ್ಮ ಬಹುಕಾಲದ ಗೆಳತಿ, ಇಂಗ್ಲೆಂಡ್ ಹಾಕಿ ತಂಡದ ಆಟಗಾರ್ತಿ ಮಾಡಿರುವ ಲೈಂಗಿಕ ದೌರ್ಜನ್ಯದ ಆರೋಪವನ್ನು ಭಾರತ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ತಳ್ಳಿ ಹಾಕಿದ್ದಾರೆ.
ನವದೆಹಲಿಯಲ್ಲಿ ಪತ್ರಿಕಾ ವರದಿಗಾರರ ಜತೆ ಮಾತನಾಡುತ್ತಿದ್ದ ಅವರು, ನಿನ್ನೆ ರಾತ್ರಿಯಷ್ಟೇ ಒಂದು ಹಾಕಿ ಪಂದ್ಯವನ್ನು ಆಡಿದ್ದೇನೆ(ಹೆಚ್ಐಎಲ್), ನಾಳೆ ಒಂದು ಆಡಬೇಕಿದೆ. ಹೀಗಾಗಿ ತಾನು ಪಂದ್ಯ ಮುಗಿದ ಬಳಿಕ ಆರೋಪಗಳಿಗೆ ಸ್ಪಷ್ಟನೆ ನೀಡಲಿದ್ದೇನೆ ಎಂದು ಹೇಳಿದ್ದಾರೆ.
ತಮ್ಮ ವಿರುದ್ಧದ ಆರೋಪಗಳು ಬಹಳ ಗಂಭೀರವಾಗಿವೆ ಎಂಬುದನ್ನು ಒಪ್ಪಿಕೊಂಡಿರುವ ಅವರು ಬ್ರಿಟಿಷ್ ಪ್ರಜೆಯ ಜತೆ ನನ್ನ ನಿಶ್ಚಿತಾರ್ಥವಾಗಿರುವುದು ಸುಳ್ಳು ಎಂದಿದ್ದಾರೆ.
ಭಾರತ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಕೇಳಿ ಬಂದಿದ್ದು, ಲೂಧಿಯಾನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ನಾಲ್ಕು ವರ್ಷಗಳ ಹಿಂದೆ 2012 ಲಂಡನ್ ಒಲಿಂಪಿಕ್ಸ್‌ನಲ್ಲಿ ನಮ್ಮಿಬ್ಬರ ಪರಿಚಯವಾಗಿತ್ತು. ಪರಸ್ಪರ ಪ್ರೀತಿಸಿ, ನಿಶ್ಚಿತಾರ್ಥ ಮಾಡಿಕೊಂಡಿದ್ದೆವು. ಕಳೆದ ನಾಲ್ಕು ವರ್ಷಗಳಿಂದ ನಾನು ಆತನ ಜತೆ ವಾಸಿಸುತ್ತಿದ್ದೆ. ಆತ ತನ್ನೊಂದಿಗೆ ದೈಹಿಕ ಸಂಬಂಧವನ್ನು ಕೂಡ ಬೆಳೆಸಿದ್ದಾನೆ ಎಂದು ಲಂಡನ್ ಹಾಕಿ ತಂಡದ ಆಟಗಾರ್ತಿಯಾಗಿರುವ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ತಾನು ಗರ್ಭಿಣಿಯಾಗಿರುವುದಾಗಿ ಸರ್ದಾರ್ ಸಿಂಗ್ ಅವರಿಗೆ ಹೇಳಿದಾಗ ಗರ್ಭಪಾತ ಮಾಡಿಸಲು ಹೇಳಿದ್ದಾರೆ. ಅದನ್ನು ನಾನು ತಳ್ಳಿ ಹಾಕಿದಾಗಿನಿಂದಲೂ ಸರ್ದಾರ್ ಸಿಂಗ್ ತನಗೆ ಮಾನಸಿಕ, ದೈಹಿಕ ಹಾಗೂ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.