ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಪೋರ್ಚುಗೀಸ್ ತಂಡದ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅವರನ್ನು 2008ರ ಪ್ರತಿಷ್ಠಿತ ವಿಶ್ವ ಫುಟ್ಬಾಲ್ ಆಟಗಾರ ಎಂದು ಫಿಫಾ ಗುರುತಿಸಿ ಗೌರವಿಸಿದೆ.
ಅವರ ಕುರಿತ ಸ್ಥೂಲ ಮಾಹಿತಿ ಇಲ್ಲಿದೆ:
ಜನ್ಮದಿನ: ಫೆಬ್ರವರಿ 5, 1985
ಜನ್ಮಸ್ಥಳ: ಮಡೀರಾ ದ್ವೀಪ, ಪೋರ್ಚುಗಲ್
2002: 17 ವರ್ಷದವನಾಗಿದ್ದಾಗಲೇ ಸ್ಪೋರ್ಟಿಂಗ್ ಲಿಸ್ಬನ್ ತಂಡಕ್ಕೆ ಚೊಚ್ಚಲ ಫುಟ್ಬಾಲ್ ಪ್ರವೇಶ.
2003 ಆಗಸ್ಟ್: ಮ್ಯಾಂಚೆಸ್ಟರ್ ಯುನೈಟೆಡ್ ವಿರುದ್ಧದ ಫ್ರೆಂಡ್ಲೀ ಪಂದ್ಯದಲ್ಲಿ ಅದ್ಭುತ ನಿರ್ವಹಣೆ, ಬಳಿಕ, 12.42 ಮಿಲಿಯನ್ ಡಾಲರ್ ಒಪ್ಪಂದದಲ್ಲಿ ಓಲ್ಡ್ ಟ್ರಾಫರ್ಡ್‌ಗೆ ವರ್ಗಾವಣೆ.
ನವೆಂಬರ್ 1: ಪೋರ್ಟ್ಸ್‌ಮೌತ್ ವಿರುದ್ಧ 3-0 ಅಂತರದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಜಯ ಗಳಿಸಿದ ಪಂದ್ಯದಲ್ಲಿ ಚೊಚ್ಚಲ ಗೋಲು ದಾಖಲು.
2004: ಜೂನ್ ತಿಂಗಳಲ್ಲಿ ಆ ಋತುವಿನ ಅತ್ಯುತ್ತಮ ಯುನೈಟೆಡ್ ಆಟಗಾರ ಎಂಬ ಬಿರುದು.
2006: ಸ್ಟೇಡಿಯಂ ಆಫ್ ಲೈಟ್‌ನಲ್ಲಿ ಯುನೈಟೆಡ್ ತಂಡವು 2-1 ಅಂತರದಿಂದ ಸೋಲನುಭವಿಸಿದ ಚಾಂಪಿಯನ್ಸ್ ಲೀಗ್ ಪಂದ್ಯದಲ್ಲಿ ಬೆನ್ಫಿಕಾ ಅಭಿಮಾನಿಗಳತ್ತ ಅಸಭ್ಯ ಸನ್ನೆ ಮಾಡಿದ್ದಕ್ಕಾಗಿ ಯುಇಎಫ್ಎಯಿಂದ ಜನವರಿಯಲ್ಲಿ ಒಂದು ಪಂದ್ಯ ನಿಷೇಧ ಶಿಕ್ಷೆ. ವಿಶ್ವಕಪ್ ಕ್ವಾರ್ಟರ್ ಫೈನಲಿನಲ್ಲಿ ಸಹ ಆಟಗಾರ ವೇಯ್ನ್ ರೂನಿ ಮತ್ತು ರಿಕಾರ್ಡೊ ಕರ್ವಾಲೋ ಘರ್ಷಣೆ ವಿಷಯಕ್ಕೆ ಸಂಬಂಧಿಸಿ ರೆಫ್ರಿಗೆ ಪ್ರತಿಭಟನೆ ಸಲ್ಲಿಕೆ. ಅದೇ ಪಂದ್ಯದಲ್ಲಿ ವಿಜಯದ ಪೆನಾಲ್ಟಿ ಶೂಟೌಟ್ ದಾಖಲಿಸಿದ ರೊನಾಲ್ಡೋ, ಇಂಗ್ಲೆಂಡನ್ನು ಕೂಟದಿಂದ ಹೊರಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು.
2007: ಐದು ವರ್ಷಗಳ ಯುನೈಟೆಡ್ ಹೊಸ ಗುತ್ತಿಗೆಗೆ ಸಹಿ. ಏಪ್ರಿಲ್ ತಿಂಗಳಲ್ಲಿ, ಇಂಗ್ಲೆಂಡಿನ ವೃತ್ತಿಪರ ಫುಟ್ಬಾಲ್ ಆಟಗಾರರ ಒಕ್ಕೂಟ (ಪಿಎಫ್ಎ) ಕೊಡಮಾಡುವ ವರ್ಷದ ಆಟಗಾರ ಮತ್ತು ವರ್ಷದ ಯುವ ಆಟಗಾರ ಪ್ರಶಸ್ತಿಗಳೆರಡೂ ಅವರ ಮುಡಿಗೆ. ಸ್ಕಾಟ್ಲೆಂಡಿನ ಆಂಡಿ ಗ್ರೇ ಅವರು 1977ರಲ್ಲಿ ಒಂದೇ ವರ್ಷದಲ್ಲಿ ಎರಡೂ ಪ್ರಶಸ್ತಿ ತನ್ನದಾಗಿಸಿಕೊಂಡ ಬಳಿಕ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ. ಮೇ ತಿಂಗಳಲ್ಲಿ ಇಂಗ್ಲೆಂಡಿನ ಫುಟ್ಬಾಲ್ ಬರಹಗಾರರ ಒಕ್ಕೂಟ ಕೊಡಮಾಡಿದ ವರ್ಷದ ಫುಟ್ಬಾಲ್ ಆಟಗಾರ ಪ್ರಶಸ್ತಿ.
2008: ಮಾರ್ಚ್ 19ರಂದು ಬೋಲ್ಟನ್ ವಿರುದ್ಧದ 2-0 ಪಂದ್ಯದಲ್ಲಿ ಎರಡು ಗೋಲು ದಾಖಲಿಸುವ ಮೂಲಕ, ಆ ಋತುವಿನಲ್ಲಿ ಅತ್ಯಧಿಕ 33 ಗೋಲು ಬಾರಿಸಿ, ಯುನೈಟೆಡ್ ಆಟಗಾರ ಜಾರ್ಜ್ ಬೆಸ್ಟ್ ಎಂಬವರ ದಾಖಲೆ ಮುರಿದರು. ಏಪ್ರಿಲ್‌ನಲ್ಲಿ ಸತತ ಎರಡನೇ ವರ್ಷವೂ ಪಿಎಫ್ಎದಿಂದ ವರ್ಷದ ಆಟಗಾರ ಬಿರುದಿಗೆ ಭಾಜನರಾದರು. ಮೇ ತಿಂಗಳಲ್ಲಿ ಯುನೈಟೆಡ್ ತಂಡವು ಪ್ರೀಮಿಯರ್ ಲೀಗ್ ಪ್ರಶಸ್ತಿ ಪಡೆಯುವಲ್ಲಿ ಪ್ರಧಾನ ಪಾತ್ರ. ಜುಲೈ ತಿಂಗಳಲ್ಲಿ ಮೊಣಗಂಟಿನ ಶಸ್ತ್ರಕ್ರಿಯೆ. ನವೆಂಬರ್ 15ರಂದು ಸ್ಟೋಕ್ ವಿರುದ್ಧ ಯುನೈಟೆಡ್ ತಂಡದ 100ನೇ ಗೋಲು ಬಾರಿಸಿದರು. ಡಿಸೆಂಬರ್ 2ರಂದು ವರ್ಷದ ಯೂರೋಪಿಯನ್ ಫುಟ್ಬಾಲರ್ (ಬ್ಯಾಲನ್ ಡಿಯೋರ್) ಪ್ರಶಸ್ತಿ ಪಡೆದರು.
2009: ಜನವರಿ 12ರಂದು ಫಿಫಾ ವಿಶ್ವ ಫುಟ್‌ಬಾಲ್ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು. ಈ ಪ್ರಶಸ್ತಿಗೆ ಅವರಿಗಿದ್ದ ಪ್ರತಿಸ್ಪರ್ಧಿಗಳೆಂದರೆ 2007ರ ವಿಜೇತ ಕಾಕಾ (ಬ್ರೆಜಿಲ್), ಲಿಯೊನೆಲ್ ಮೆಸ್ಸಿ (ಅರ್ಜೆಂಟೀನಾ), ಫರ್ನಾಂಡೊ ಟೋರೆಸ್ (ಸ್ಪೇನ್) ಮತ್ತು ಕ್ಸೇವಿ (ಸ್ಪೇನ್).