Select Your Language

Notifications

webdunia
webdunia
webdunia
webdunia

ಅಮ್ಮ ನನ್ನನ್ನು ಕ್ಷಮಿಸೆಂದ ಧನರಾಜ್

ಅಮ್ಮ ನನ್ನನ್ನು ಕ್ಷಮಿಸೆಂದ ಧನರಾಜ್
ಕೆಲವು ದಿನಗಳ ಹಿಂದೆ ಭಾರತೀಯ ಹಾಕಿ ತಂಡದ ಮಾಜಿ ನಾಯಕ ಧನರಾಜ್ ಪಿಳ್ಳೈ ದೆಹಲಿಯಲ್ಲಿದ್ದರು ಪತ್ರಕರ್ತ ಸಂದೀಪ್ ಮಿಶ್ರಾ ಅವರು ಧನರಾಜ್ ಪಿಳ್ಳೈಯವರ ಜೀವನದ ಸಿಹಿಕಹಿಯ ಪಯಣವನ್ನು ಅಕ್ಷರ ರೂಪಕ್ಕೆ ಭಟ್ಟಿ ಇಳಿಸಿದ್ದರು.

ಹುಟ್ಟು ಹೋರಾಟಗಾರನ ಜೀವನದ ಏರಿಳಿತಗಳ ಕಥೆಯ ಕೂಸಿಗೆ ಹಿರಿಯ ಪತ್ರಕರ್ತ ಸಂದೀಪ್ ಮಿಶ್ರಾ "ಫಾರ್ಗಿವ್ ಅಮ್ಮಾ" ಎಂದು ಹೆಸರಿಟ್ಟಿದ್ದಾರೆ.

ಭಾರತೀಯ ಹಾಕಿ ಪರಂಪರೆಯಲ್ಲಿ ಧನರಾಜ್ ಪಿಳ್ಳೈಯದು ನಿಸ್ಸಂಶಯವಾಗಿ ಎದ್ದು ಕಾಣುವ ಹೆಸರು 20 ವರುಷಗಳ ಕ್ರೀಡಾ ಜೀವನದಲ್ಲಿ ನಾಲ್ಕು ಬಾರಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿಯೂ ಒಂದೇ ಒಂದು ಬಾರಿ ಕೇವಲ ಒಂದು ಒಲಿಂಪಿಕ್ ಪದಕ ತರಲಾರದ ಅಸಹಾಯಕ ನಾನು ಎನ್ನುವ ದುಃಖವೆ ಆತ್ಮಚರಿತ್ರೆಯ ಟೈಟಲ್.

ಧನರಾಜ್ ಅವರೇ ಹೇಳುವಂತೆ, ನಾನು ಜಗತ್ತಿನಲ್ಲಿ ಪ್ರೀತಿಸುವುದು ಕೇವಲ ಎರಡನ್ನು ಮಾತ್ರ. ಒಂದು ನನ್ನ ದೇಶ ಇನ್ನೊಂದು ನನ್ನ ಅಮ್ಮ. ಇವರಿಬ್ಬರಿಗೂ ನಾನು ವಚನಭ್ರಷ್ಟ. ನನ್ನ ಕೊನೆಯ ಒಲಿಂಪಿಕ್‌ನಲ್ಲಿ, ದೇಶಕ್ಕೆ ಪದಕವನ್ನು ತರುತ್ತೇನೆ ಎಂದು ಮಾತು ಕೊಟ್ಟಿದ್ದೆ. ಅಲ್ಲಿ ನಾನು ಪೇಲ್. ಪೋಲಂಡ್ ವಿರುದ್ಧ ಪಂದ್ಯ ಡ್ರಾ ಆದ ಮೇಲೆ ಅಮ್ಮನ ಫೋನ್ ಬಂದಿತ್ತು ಉತ್ತರಿಸಲಿಲ್ಲ. ಅಲ್ಲಿ ಮತ್ತೊಮ್ಮೆ ವಚನಭ್ರಷ್ಟತೆಯ ಪಾಪ ನನ್ನೆದೆಯ ಮೇಲೆ ಕೂತಿದೆ.

ಧನರಾಜ್ ಪಿಳ್ಳೈ ಭಾವ ಜೀವಿ. ಅವರಿಗೆ ಹಾಕಿಯೊಂದೇ ಸರ್ವಸ್ವ 1998ರಲ್ಲಿ ಏಷಿಯನ್ ಕ್ರೀಡಾಕೂಟಕ್ಕೆ ಧನರಾಜ್ ಪಿಳ್ಳೈ ನೇತೃತ್ವದಲ್ಲಿ ಭಾರತೀಯ ಹಾಕಿ ತಂಡ ತನ್ನ ತಾಲೀಮು ಮಾಡುತ್ತಿತ್ತು. ಕರ್ನಾಟಕದ ವಿರುದ್ಧ ನಡೆಯುತ್ತಿದ್ದ ಆ ಅಭ್ಯಾಸ ಪಂದ್ಯದಲ್ಲಿ ಆಶಿಷ್ ಬಲ್ಲಾಳ್ ಕರ್ನಾಟಕದ ಗೋಲ್ ಕೀಪರ್ ಆಗಿದ್ದರು. ಭಾರತೀಯ ತಂಡ ಎಷ್ಟೇ ಹೆಣಗಾಡಿದರೂ ಒಂದು ಗೋಲು ಮಾಡಲಿಕ್ಕಾಗದೆ ಆ ಪಂದ್ಯದಲ್ಲಿ ಒದ್ದಾಡಿತು.

ಪಂದ್ಯದ ನಂತರ ಕೋಚ್ ಕೌಶಿಕ್ ಅವರೊಂದಿಗೆ ಮಾತನಾಡಿದ ಪಿಳ್ಳೈ, ಬಲ್ಲಾಳರನ್ನು ರಾಷ್ಟ್ರೀಯ ತಂಡಕ್ಕೆ ಸೇರಿಸಿಕೊಂಡರೆ ಒಳ್ಳೆಯದು ಎಂದು ಸಲಹೆ ನೀಡಿದರು. ಬಲ್ಲಾಳ್ ನಿನಗಿಂತ ಹಿರಿಯ ಆಟಗಾರ, ಅವರು ತಂಡದಲ್ಲಿದ್ದರೆ ನೀನು ನಾಯಕತ್ವದಿಂದ ಕೆಳಗಿಳಿಯಬೇಕಾಗುತ್ತದೆ ಎಂದು ಕೌಶಿಕ್ ಹೇಳಿದ ಮಾತಿಗೆ ತಲೆಕೆಡಿಸಿಕೊಳ್ಳದೆ ಆಶಿಷ್ ಬಲ್ಲಾಳರನ್ನು ತಂಡಕ್ಕೆ ಆಯ್ಕೆ ಮಾಡಿದ್ದರು.

ಪಿಳ್ಳೈ ಆ ಸಲಹೆಯಿಂದಾಗಿ, ಆ ವರುಷ ಏಷಿಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಭಾರತದ ಪಾಲಿಗೆ ಒಲಿದಿತ್ತು. ಇದು ಧನರಾಜ್ ಪಿಳ್ಳೈಯ ಜೀವನದಲ್ಲಿನ ಒಂದು ಸಣ್ಣ ಘಟನೆಯ ಅನಾವರಣ ಅವರ ಹಾಕಿ ಪ್ರೇಮಕ್ಕೆ ಕನ್ನಡಿ ಹಿಡಿಯುತ್ತದೆ.

ಬಹುಶಃ ಭಾವನೆಗಳ ಏರಿಳಿತಕ್ಕೆ ಸಿಲುಕುವ ವ್ಯಕ್ತಿಗಳಿಗೆ ವಾಸ್ತವಿಕದ ಪರಿಚಯ ಎಂದಿಗೂ ಆಗುವುದಿಲ್ಲವೇನೊ.ಇಡೀ ವ್ಯವಸ್ಥೆ ಎನ್ನುವುದೇ ಸಿಡಿದು ನಿಂತಾಗ ನಾವೇನು ಮಾಡಲಿಕ್ಕಾಗುತ್ತದೆ ? ಬೀಳುವುದನ್ನು ತಡೆಯಬಹುದಷ್ಟೆ ಕಟ್ಟಲಿಕ್ಕಾಗುವುದಿಲ್ಲ ಭಾರತೀಯ ಹಾಕಿ ತಂಡದ್ದು ಇಂದು ಇದೇ ಪರಿಸ್ಥಿತಿ. ಹಾಕಿ ಮಂಡಳಿಯ ಅರಾಜಕತೆಯಿಂದಾಗಿ ಎಂದೋ ಭಾರತದಿಂದ ಹಾಕಿ ಅನ್ನುವ ಆಟ ಕಣ್ಮರೆಯಾಗಬಹುದಾಗಿತ್ತು. ಅದೃಷ್ಟ ಇನ್ನೂ ಇದೆ. ಮೊನ್ನೆ 16ನೇ ಅಜ್ಲಾನ್ ಷಾ ಹಾಕಿ ಕಪ್‌ ಮತ್ತು ಚಾಲೆಂಜರ್ ಸರಣಿಯಲ್ಲಿ ಕನಿಷ್ಠ ಕಂಚಿನ ಪದಕವನ್ನಾದರೂ ತಂದಿತಲ್ಲ ಅದಕ್ಕಾದರೂ ಹೆಮ್ಮೆ ಪಡಬೇಕು.

ಅದೇ ಆಟವನ್ನು ಇನ್ನೂ ಮುಂದುವರಿಸುವ ಪ್ರಯತ್ನ ಮಾಡುತ್ತಿರುವ ಹಾಕಿ ಸ್ಟಿಕ್ಕರುಗಳು ಚಾಂಪಿಯನ್ ಚಾಲೆಂಜರ್ಸ್‌ನಲ್ಲಿ ಮತ್ತೊಮ್ಮೆ ಆರಕ್ಕೇರದ ಮೂರಕ್ಕಿಳಿಯದ ಫಲಿತಾಂಶವನ್ನು ತಂದಿತ್ತಿದ್ದಾರೆ. "Some time stagnation is better than negative" ಅಲ್ಲವೇ ?

ದೊಡ್ಡವರು ಅನ್ನಿಸಿಕೊಂಡವರ ಸಾಲಿನಲ್ಲಿ ನಿಲ್ಲುವ ಇಗ್ನೆಸ್ ಟಿರ್ಕೆ, ದಿಲೀಪ್ ಟಿರ್ಕೆ,ಪ್ರಭುಜೋತ್ ಸಿಂಗ್, ಮತ್ತು ಗಗನ ಅಜಿತ್ ಸಿಂಗ್ ಯಾರೂ ಇಲ್ಲ. ಶಿವೇಂದ್ರ ಯಾದವರಂತಹ ಎಳಸಲುಗಳನ್ನು ಸರಿಯಾಗಿ ಆಟಕ್ಕೆ ಹಚ್ಚುವಲ್ಲಿ ಹರ್ಪಾಲ್ ಸಿಂಗ್‌ನಂತವರು ಯಶಸ್ವಿಯಾಗುತ್ತಾರೆ ಅಂದರೆ ಕೋಚ್ ಜಾಕಿಮ್ ಕರ್ವಾಲೋ ತಾಕತ್ ಎಷ್ಟಿರಬಹುದು.

- ಸತೀಶ್ ಪಾಗಾದ್

Share this Story:

Follow Webdunia kannada