ಈ ಬಾರಿಯ ಒಲಿಂಪಿಕ್ ಗೇಮ್ಸ್‌ನಲ್ಲಿ ಒಟ್ಟು 37 ವಿಶ್ವ ಹಾಗೂ 77ಒಲಿಂಪಿಕ್ ದಾಖಲೆಗಳನ್ನು ಮುರಿಯಲಾಗಿದೆ ಎಂದು ಶುಕ್ರವಾರ ರಾತ್ರಿ ಬೀಜಿಂಗ್ ಗೇಮ್ಸ್ ಸಂಘಟಕರ ಪ್ರಕಟಣೆ ತಿಳಿಸಿದೆ.
29ನೇ ಒಲಿಂಪಿಕ್ ಗೇಮ್ಸ್ ಕ್ರೀಡಾ ಸಮಿತಿಯ ಸಹಾಯಕ ನಿರ್ದೇಶಕ ಲಿಯು ವೆನ್‌ಬಿನ್ ಸುದ್ದಿಗಾರರೊಂದಿಗೆ ಮಾತನಾಡುತ್ತ,ಈ ಬಾರಿಯ ಗೇಮ್ಸ್‌ನಲ್ಲಿ ಹಲವಾರು ವಿಶ್ವ ದಾಖಲೆಗಳನ್ನು ಅಳಿಸಿ ಹಾಕಲಾಗಿದೆ ಎಂದು ತಿಳಿಸಿದರು.
ಅಲ್ಲದೇ ಈವರೆಗೆ ಒಟ್ಟು 237 ಸ್ವರ್ಣ ಪದಕ,238 ರಜತ ಹಾಗೂ 273 ಕಂಚಿನ ಪದಕಗಳನ್ನು ವಿಜೇತ ಕ್ರೀಡಾಳುಗಳಿಗೆ ಪ್ರದಾನ ಮಾಡಲಾಗಿದೆ ಎಂದು ಲೀ ಈ ಸಂದರ್ಭದಲ್ಲಿ ಹೇಳಿದರು.
ಅದಕ್ಕಿಂತಲೂ ಬಹು ಮುಖ್ಯವಾದ ಅಂಶ ಈ ಸಲದ ಕ್ರೀಡಾಕೂಟದಲ್ಲಿ ಉದ್ದೀಪನಾ ಮದ್ದು ಸೇವನೆ ಅಂಶ ಗಣನೀಯವಾಗಿ ಕಡಿಮೆಯಾಗಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ವಕ್ತಾರ ಗಿಸೆಲ್ಲೆ ಡಾವಿಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ಗೇಮ್ಸ್‌ನಲ್ಲಿ 4620 ಉದ್ದೀಪನಾ ಪರೀಕ್ಷೆಗಳನ್ನು ಮಾಡಲಾಗಿದ್ದು,ಅದರಲ್ಲಿ 3681ಮೂತ್ರ ಪರೀಕ್ಷೆ ಹಾಗೂ 939ರಕ್ತ ಪರೀಕ್ಷೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಒಲಿಂಪಿಕ್ ಕ್ರೀಡಾ ವೀಕ್ಷಣೆಗಾಗಿ ಶುಕ್ರವಾರದವರೆಗೆ 408,271ಟಿಕೆಟ್‌ಗಳು ಮಾರಾಟವಾಗಿದ್ದರೆ,ಕೇವಲ ಗುರುವಾರದಂದು 30,418ಟಿಕೆಟ್ ಮಾರಾಟವಾಗಿತ್ತು ಎಂದು ಒಲಿಂಪಿಕ್ ಆರ್ಗನೈಜೇಶನ್ ಸಮಿತಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ವಾಂಗ್ ವೇ ತಿಳಿಸಿದ್ದಾರೆ.