Select Your Language

Notifications

webdunia
webdunia
webdunia
webdunia

ಸ್ಟೀಲ್ ಫ್ಯಾಕ್ಟರಿ ಡಿಜಿಎಂನ್ನೇ ಜೀವಂತ ಸುಟ್ಟ ಕಾರ್ಮಿಕರು!

ಒರಿಸ್ಸಾ
ಒರಿಸ್ಸಾ , ಶುಕ್ರವಾರ, 4 ಮಾರ್ಚ್ 2011 (12:24 IST)
PR
ಕೆಲಸದಿಂದ ವಜಾಗೊಂಡ ಆಕ್ರೋಶಿತ ಕಾರ್ಮಿಕರ ಗುಂಪೊಂದು ಸ್ಟೀಲ್ ಫ್ಯಾಕ್ಟರಿಯ 55ರ ಹರೆಯದ ಡೆಪ್ಯುಟಿ ಜನರಲ್ ಮ್ಯಾನೇಜರ್ ಅನ್ನು ಸಜೀವವಾಗಿಯೇ ಬೆಂಕಿ ಹಚ್ಚಿ ಸುಟ್ಟ ಆಘಾತಕಾರಿ ಘಟನೆ ಒರಿಸ್ಸಾದ ಟಿಟಿಲಾಗಢ್‌ನ ಬಾಲಾನ್‌ಗಿರ್ ಎಂಬಲ್ಲಿ ನಡೆದಿದೆ.

ಕೆಲಸದಿಂದ ವಜಾಗೊಂಡ ಖಾಸಗಿ ಸ್ಟೀಲ್ ಫ್ಯಾಕ್ಟರಿಯ ಕಾರ್ಮಿಕರು ಕಳೆದ ಕೆಲವು ತಿಂಗಳಿನಿಂದ ಹೊರಗಡೆ ಧರಣಿ ನಡೆಸುತ್ತಿದ್ದರು. ತಮ್ಮ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿರುವುದೇ ಡಿಜಿಎಂ ಹತ್ಯೆ ಕಾರಣ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.

ಇಲ್ಲಿನ ಪೌಮೆಕ್ಸ್ ಸ್ಟೀಲ್ ಫ್ಯಾಕ್ಟರಿಯ ಡೆಪ್ಯುಟಿ ಜನರಲ್ ಮ್ಯಾನೇಜರ್ ರಾಧೇಶ್ಯಾಮ್ ರಾಯ್ ಗುರುವಾರ ಮಧ್ಯಾಹ್ನ ತಮ್ಮ ಕಾರಿನಲ್ಲಿ ಊಟಕ್ಕೆ ಹೊರಡುವ ಸಂದರ್ಭದಲ್ಲಿ ಸುಮಾರು 30 ಕಾರ್ಮಿಕರು ಏಕಾಏಕಿ ದಾಳಿ ನಡೆಸಿದ್ದರು. ಕಾರ್ಮಿಕರು ಕಾರಿನ ಸುತ್ತ ಗುಂಪಾಗಿ ನಿಂತು ಚಾಲಕ ಹಾಗೂ ಮತ್ತೊಬ್ಬ ಅಧಿಕಾರಿಯನ್ನು ಹೊರಗೆಳೆದು ಹಾಕಿದ್ದರು. ನಂತರ ರಾಧೇಶ್ಯಾಮ್ ಅವರನ್ನು ಕಾರಿನೊಳಗೆ ಇಟ್ಟು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಾರಿಗೆ ಬೆಂಕಿ ಹತ್ತುತ್ತಿದ್ದಂತೆಯೇ ರಾಧೇಶ್ಯಾಮ್ ಹೊರಬರಲು ಯತ್ನಿಸಿದರಾದರೂ ಕಾರ್ಮಿಕರು ಅದಕ್ಕೆ ಅವಕಾಶ ಕೊಡಲಿಲ್ಲ. ಜೀವಂತವಾಗಿಯೇ ಬೆಂಕಿಯಲ್ಲಿ ಬೇಯುತ್ತಿದ್ದ ಶ್ಯಾಮ್ ರಕ್ಷಿಸಿ ಅಂತ ಬೊಬ್ಬೆ ಹೊಡೆಯುತ್ತಿದ್ದರು. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿರುವುದಾಗಿ ಟಿಟಿಲ್‌ಗಢ್ ಪೊಲೀಸ್ ಠಾಣೆಯ ಅಧಿಕಾರಿಗಳು ತಯಾರಿಸಿದ ಪ್ರಾಥಮಿಕ ವರದಿಯಲ್ಲಿ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ನಾವು ಕೆಲವು ಕಾರ್ಮಿಕರ ಹೆಸರನ್ನು ಸಂಗ್ರಹಿಸಿದ್ದೇವೆ. ಅವರಲ್ಲಿ ಓರ್ವನನ್ನು ಈಗಾಗಲೇ ಬಂಧಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ಸಾದಂಗಿ ತಿಳಿಸಿದ್ದಾರೆ. ಕಾರಿನೊಳಗೆ ಬೆಂಕಿಯಲ್ಲಿ ಬೆಂದು ಹೋದ ಡಿಜಿಎಂ ಅವರನ್ನು ಸ್ಥಳೀಯ ನಿವಾಸಿಗಳು ಹೊರತೆಗೆದಿದ್ದರು. ಆದರೆ ಅವರ ದೇಹ ಶೇ.90ರಷ್ಟು ಸುಟ್ಟು ಹೋಗಿತ್ತು. ಅವರನ್ನು ಆಸ್ಪತ್ರೆಗೆ ಸಾಗಿಸುವ ಮೊದಲೇ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada