Select Your Language

Notifications

webdunia
webdunia
webdunia
webdunia

ಸ್ಟಿಂಗ್ ಆಪರೇಷನ್‌ ಮಾಡಿದ್ರೆ ತಪ್ಪೇನಿದೆ?: ಸುಷ್ಮಾ ಪ್ರಶ್ನೆ

ಕಾಸಿಗಾಗಿ ಓಟು
ನವದೆಹಲಿ , ಶುಕ್ರವಾರ, 25 ಮಾರ್ಚ್ 2011 (10:37 IST)
2008ರಲ್ಲಿ ಯುಪಿಎ ಸರಕಾರದ ವಿಶ್ವಾಸ ಮತದ ಸಂದರ್ಭದಲ್ಲಿ ಬಹಿರಂಗವಾದ 'ಕುಟುಕು ಕಾರ್ಯಾಚರಣೆ' ನಿಜವಾದುದಲ್ಲ. ಅದು ಬಿಜೆಪಿ ಪ್ರಾಯೋಜಿತ ಎಂದು ಇತ್ತೀಚೆಗಷ್ಟೇ ಬಹಿರಂಗವಾಗುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

ವಿಶ್ವಾಸ ಮತದಲ್ಲಿ ಹೇಗಾದರೂ ಮಾಡಿ ಸರಕಾರವನ್ನು ಉಳಿಸಿಕೊಳ್ಳಬೇಕು ಎಂದು ಸಂಸದರನ್ನು ಖರೀದಿಸಲು ಕಾಂಗ್ರೆಸ್ ಮುಂದಾಗಿದ್ದಾಗ ಕುಟುಕು ಕಾರ್ಯಾಚರಣೆಯೊಂದನ್ನು ಬಿಜೆಪಿ ಯೋಜಿಸಿದರೆ, ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸುದ್ದಿವಾಹಿನಿಯೊಂದರ ಜತೆ ಹೇಳಿಕೊಂಡಿದ್ದಾರೆ.

ಆದರೆ ಉದ್ದೇಶಪೂರ್ವಕವಾಗಿ ಸರಕಾರವನ್ನು ಬಲೆಗೆ ಬೀಳಿಸಿರುವುದರಲ್ಲಿ ಬಿಜೆಪಿ ನಾಯಕರು ತಪ್ಪಿತಸ್ಥರು ಎಂಬ ವಾದವನ್ನು ಒಪ್ಪಿಕೊಳ್ಳಲು ಅವರು ನಿರಾಕರಿಸಿದರು. ಹಾಗೆಂದು ಹೇಳಲಾಗದು. ಈ ಸಂಬಂಧ ಯಾವುದೇ ತನಿಖೆಗೆ ಬಿಜೆಪಿ ಸಿದ್ಧವಿದೆ. ಕಾಸಿಗಾಗಿ ಓಟು ಪ್ರಕರಣದಲ್ಲಿ ಬಿಜೆಪಿ ಪಾತ್ರದ ಕುರಿತು ಸಿಬಿಐ ತನಿಖೆ ನಡೆಯಬೇಕೆಂಬ ಬೇಡಿಕೆಯಿಂದ ತಾವು ಹಿಂದಕ್ಕೆ ಸರಿಯುತ್ತಿಲ್ಲ ಎಂದರು.

2008ರ ಜುಲೈ 22ರಂದು ಯುಪಿಎ-Iಕ್ಕೆ ಎದುರಾಗಿದ್ದ ಸಂಕಷ್ಟ ವಿಶ್ವಾಸ ಮತ. ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಇತರ ಪಕ್ಷಗಳ ಸಂಸದರಿಗೆ ಲಂಚ ಕೊಟ್ಟು ಕಾಂಗ್ರೆಸ್ ಮತ್ತು ಸರಕಾರವು ಸಂಸದರನ್ನು ಖರೀದಿಸಿತ್ತು ಎಂದು ಆರೋಪಿಸಲಾಗಿತ್ತು. ಸದನದಲ್ಲಿಯೇ ನೋಟಿನ ಕಟ್ಟುಗಳನ್ನು ಬಿಜೆಪಿ ಸಂಸದರು ಪ್ರದರ್ಶಿಸಿ ಕೇಂದ್ರಕ್ಕೆ ಭಾರೀ ಮುಖಭಂಗವನ್ನುಂಟು ಮಾಡಿದ್ದರು.

ಸಂಸದರನ್ನು ಕಾಂಗ್ರೆಸ್ ಖರೀದಿಸಿದೆ ಎಂಬುವುದನ್ನು ಬಿಂಬಿಸುವ ಕುಟುಕು ಕಾರ್ಯಾಚರಣೆಯ ವೀಡಿಯೋ ಕೆಲವೇ ದಿನಗಳಲ್ಲಿ ಮಾಧ್ಯಮಗಳಲ್ಲಿ ಪ್ರಸಾರಗೊಂಡಿತ್ತು. ರಾಷ್ಟ್ರೀಯ ವಾಹಿನಿಯೊಂದು ಈ ಕಾರ್ಯಾಚರಣೆ ನಡೆಸಿದೆ ಎಂದು ಹೇಳಿಕೊಂಡಿತ್ತು.

ಆದರೆ ವಾಸ್ತವದಲ್ಲಿ ಈ ಕಾರ್ಯಾಚರಣೆ ಬಿಜೆಪಿ ಪ್ರಾಯೋಜಿತ ಎಂದು ಇತ್ತೀಚೆಗಷ್ಟೇ ಟೆಹೆಲ್ಕಾ ಪತ್ರಿಕೆ ಆರೋಪಿಸಿದೆ. ಈ ಸಂಬಂಧ ಹಲವು ದಾಖಲೆಗಳನ್ನು ಕೂಡ ಅದು ಬಿಡುಗಡೆ ಮಾಡಿದೆ. ಇದನ್ನು ಬಿಜೆಪಿಯ ಆಗಿನ ನಾಯಕ ಸುಧೀಂದ್ರ ಕುಲಕರ್ಣಿ ಕೂಡ ಒಪ್ಪಿಕೊಂಡಿದ್ದರು. ಅಣಕು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪತ್ರಕರ್ತ ಕೂಡ ಹೌದು ಎಂದಿದ್ದರು.

ಆದರೆ ಬಿಜೆಪಿ ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದೆ. ಸ್ವತಃ ಸುಷ್ಮಾ ಸ್ವರಾಜ್ ಕೂಡ ಒಪ್ಪಿಕೊಂಡಿಲ್ಲ. ಬದಲಿಗೆ, ಹಾಗೆ ಮಾಡಿದ್ದೇ ಆಗಿದ್ದಲ್ಲಿ ಅದರಲ್ಲಿ ತಪ್ಪೇನಿದೆ ಎಂದು ಹೇಳಿದ್ದಾರೆ. ಕಾಸಿಗಾಗಿ ಓಟು ಪ್ರಕರಣದ ಕುರಿತು ವಿಕಿಲೀಕ್ಸ್ ಮತ್ತಷ್ಟು ವಿಚಾರಗಳನ್ನು ಬಹಿರಂಗಪಡಿಸಿದ ನಂತರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿದ್ದ ಬಿಜೆಪಿ ಇದರಿಂದ ಮಹತ್ವದ ಹಿನ್ನಡೆಯಾಗಿದೆ ಎಂದು ಕೂಡ ಬಿಜೆಪಿ ನಂಬಲು ನಿರಾಕರಿಸುತ್ತಿದೆ.

Share this Story:

Follow Webdunia kannada