ಸೋನಿಯಾ ಗಾಂಧಿಯ ಧರ್ಮ ಯಾವುದು ಎಂಬ ಪ್ರಶ್ನೆ ಇದುವರೆಗೆ ಕಾಂಗ್ರೆಸ್ ಮಟ್ಟಿಗೆ ತೀರಾ ಸೂಕ್ಷ್ಮ ವಿಚಾರವಾಗಿತ್ತು. ಇದನ್ನೇ ಯುಪಿಎ ಸರಕಾರ ಕೂಡ ಅನುಸರಿಸಿಕೊಂಡು ಬಂದಿತ್ತು. ಆದರೆ ಈಗ ಭಾರತದ ರಾಯಭಾರಿಯೊಬ್ಬರು ಸೋನಿಯಾ ಗಾಂಧಿಯನ್ನು 'ಕ್ರಿಶ್ಚಿಯನ್' ಎಂದು ಉಲ್ಲೇಖಿಸಿರುವ ಅಂಶ ಬೆಳಕಿಗೆ ಬಂದಿದೆ.
ಇಂತಹ ಉಲ್ಲೇಖ ಮಾಡಿರುವುದು ಯುಪಿಎ ಸರಕಾರದ ಅಮೆರಿಕಾದಲ್ಲಿನ ಪ್ರತಿನಿಧಿ, ಭಾರತದ ರಾಯಭಾರಿ ಮೀರಾ ಶಂಕರ್. ವೈವಿಧ್ಯತೆ ಮತ್ತು ಭಿನ್ನತೆಯನ್ನು ಹೊಂದಿರುವ ಭಾರತಕ್ಕೆ ಕ್ರಿಶ್ಚಿಯನ್ ಆಗಿರುವ ಸೋನಿಯಾ ಗಾಂಧಿ ಒಗ್ಗಿಕೊಂಡಿದ್ದಾರೆ ಎಂದು ಅಮೆರಿಕಾ ವಿಶ್ವ ವಿದ್ಯಾಲಯದಲ್ಲಿ ಮಾಡಿದ ಭಾಷಣದಲ್ಲಿ ಮೀರಾ ಶಂಕರ್ ಉಲ್ಲೇಖಿಸಿದ್ದರು.
ಫೆಬ್ರವರಿ 24ರಂದು ಇಮೋರಿ ಯುನಿವರ್ಸಿಟಿಯಲ್ಲಿ ಮೀರಾ ಅವರು 'ಭಾರತ ಯಾಕೆ ಮುಖ್ಯವಾಗುತ್ತದೆ' ಎಂಬ ವಿಚಾರದ ಕುರಿತು ಭಾಷಣ ಮಾಡಿದ್ದರು.
ಇಂದು ಒಬ್ಬ ಮಹಿಳೆ ದೇಶದ ರಾಷ್ಟ್ರಪತಿಯಾಗಿದ್ದಾರೆ. ಸಿಖ್ ಧರ್ಮೀಯರೊಬ್ಬರು ಸರಕಾರದ ಮುಖ್ಯಸ್ಥರಾಗಿದ್ದಾರೆ. ಮುಸ್ಲಿಂ ವ್ಯಕ್ತಿಯೊಬ್ಬರು ಉಪ ರಾಷ್ಟ್ರಪತಿಯಾಗಿದ್ದಾರೆ. ದೇಶದ ಅತಿದೊಡ್ಡ ರಾಷ್ಟ್ರೀಯ ರಾಜಕೀಯ ಪಕ್ಷವೊಂದಕ್ಕೆ ಕ್ರಿಶ್ಚಿಯನ್ ನಾಯಕಿಯಾಗಿದ್ದಾರೆ. ಬಹುಶಃ ಭಾರತದ ಬಹು ಜನಾಂಗೀಯ ಮತ್ತು ಬಹು ಧರ್ಮೀಯತೆಯ ಲಕ್ಷಣಗಳನ್ನು ಇದೇ ನಿರೂಪಿಸುತ್ತದೆ ಎಂದು ಅವರು ತನ್ನ ಭಾಷಣದಲ್ಲಿ ಹಲವರನ್ನು ಉಲ್ಲೇಖಿಸಿದ್ದರು.
ಕಾಂಗ್ರೆಸ್ ಮತ್ತು ಯುಪಿಎ ಅಧ್ಯಕ್ಷೆಯ ಧರ್ಮವನ್ನು ಸರಕಾರದ ವ್ಯಕ್ತಿಯೊಬ್ಬರು ಉಲ್ಲೇಖಿಸಿರುವುದು ಇದೇ ಮೊದಲು ಎಂದು ಹೇಳಲಾಗಿದೆ.
ಭಾಷಣವನ್ನು ರಾಯಭಾರ ಕಚೇರಿಯ ವೆಬ್‌ಸೈಟಿನಲ್ಲಿ ಪ್ರಕಟ ಮಾಡಲಾಗಿದೆ. ಆದರೆ ಸೋನಿಯಾ ಗಾಂಧಿ ಕುರಿತ ವಿವಾದಿತ ಅಂಶವನ್ನು ಅದರಿಂದ ಕಿತ್ತು ಹಾಕಲಾಗಿದೆ.
ಕಾಂಗ್ರೆಸ್ ಅಧ್ಯಕ್ಷೆಯ ಧರ್ಮ ಯಾವುದು ಎಂದು ಈ ಹಿಂದೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿನಲ್ಲಿ ಡಿಜಿಪಿ ದರ್ಜೆಯ ನಿವೃತ್ತ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದ ಅರ್ಜಿ ವಜಾಗೊಂಡಿರುವುದನ್ನು ಇದೇ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.