ಸುಪ್ರೀಂ ಕೆಂಗಣ್ಣಿನ ಬಳಿಕ, ಕೊನೆಗೂ ಹಸನ್ ಅಲಿ ವಶಕ್ಕೆ
ವಿದೇಶದಲ್ಲಿ ಕೋಟ್ಯಂತರ ರೂಪಾಯಿ ಕಪ್ಪು ಹಣವನ್ನು ಹುಗಿದಿಟ್ಟಿರುವ ಆರೋಪ ಎದುರಿಸುತ್ತಿರುವ ಪುಣೆಯ ಉದ್ಯಮಿ ಹಸನ್ ಅಲಿಯನ್ನು ಕೊನೆಗೂ ಪುಣೆಯಲ್ಲಿ ಅನುಷ್ಠಾನ ನಿರ್ದೇಶನಾಲಯ ಅಧಿಕಾರಿಗಳು ಸೋಮವಾರ ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ಆರಂಭಿಸಿದ್ದಾರೆ.ಈ ದೇಶದಲ್ಲಿ ಏನಾಗುತ್ತಿದೆ ಎಂದು ಆಕ್ರೋಶದಿಂದ ಪ್ರಶ್ನಿಸಿದ್ದ ಸುಪ್ರೀಂ ಕೋರ್ಟ್, ಕಪ್ಪು ಹಣ ಇಟ್ಟಿರುವವರ ಕುರಿತು ಕೇಂದ್ರ ಸರಕಾರ ಏನು ಕ್ರಮ ಕೈಗೊಂಡಿದೆ ಎಂದು ತಪರಾಕಿ ನೀಡಿ, ಮಾ.8ರ ಗಡುವು ನೀಡಿದ ಹಿನ್ನೆಲೆಯಲ್ಲಿ ಚುರುಕಾಗಿರುವ ಅನುಷ್ಠಾನ ನಿರ್ದೇಶನಾಲಯ ಅಧಿಕಾರಿಗಳು, ಕೋರೆಗಾಂವ್ ಪಾರ್ಕ್ ಪ್ರದೇಶದಲ್ಲಿರುವ ಹಸನ್ ಅಲಿ ಮನೆಗೆ ದಾಳಿ ಮಾಡಿದರು.ಸಿರಿವಂತ ಕೋರೆಗಾಂವ್ ಪ್ರದೇಶದ ವ್ಯಾಲೆಂಟೈನ್ ಸೊಸೈಟಿಯ ಮನೆಗೆ ಎರಡು ತಂಡಗಳು ಸೋಮವಾರ ಬೆಳಿಗ್ಗೆ ದಾಳಿ ಮಾಡಿದ್ದವು.ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ ಕೂಡ ಆಗಿರುವ ಅಲಿ ಮುಂಬೈಯಲ್ಲಿ ಕುದುರೆ ಲಾಯ ಹೊಂದಿದ್ದಾನೆ. ಕಪ್ಪುಹಣವನ್ನು ಬಿಳಿ ಮಾಡುವುದು, ಹವಾಲಾ ಜಾಲ, ಭಯೋತ್ಪಾದಕರಿಗೆ ಹಣ ಪೂರೈಕೆ ಮಾಡುವುದು, ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಮುಂತಾದ ಆರೋಪಗಳನ್ನು ಎದುರಿಸುತ್ತಿದ್ದಾನೆ. ವಿದೇಶಿ ಬ್ಯಾಂಕುಗಳಲ್ಲಿ ಭಾರೀ ಪ್ರಮಾಣದ ಕಪ್ಪುಹಣವನ್ನು ಇಟ್ಟಿರುವ ಪ್ರಕರಣ ಸಂಬಂಧ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್, ಆತ ದೇಶ ಬಿಟ್ಟು ಹೋಗದಂತೆ ನೋಡಿಕೊಳ್ಳುವಂತೆ ಕೇಂದ್ರಕ್ಕೆ ಸೂಚಿಸಿತ್ತು. ಮತ್ತು ಅಲಿಯೊಂದಿಗೆ ಮಹಾರಾಷ್ಟ್ರದ ಕಾಂಗ್ರೆಸ್ ಮುಖಂಡರ ಹೆಸರು ಕೂಡ ಕೇಳಿ ಬಂದು ಇತ್ತೀಚೆಗೆ ಕೋಲಾಹಲ ಎಬ್ಬಿಸಿತ್ತು.ಸ್ವಿಸ್ ಬ್ಯಾಂಕಿನಲ್ಲಿ 2.74 ಲಕ್ಷ ಕೋಟಿ ರೂಪಾಯಿಗಳನ್ನು ಇಟ್ಟಿದ್ದ ಹಸನ್ ಆಲಿ ಸಕಲಗುಣ ಸಂಪನ್ನ. ಹಸನ್ ಆಲಿ ಖಾನ್ ಆಲಿಯಾಸ್ ಸಯ್ಯದ್ ಮೊಹಮ್ಮದ್ ಹಸನ್ ಆಲಿ ಖಾನ್ 4.11 ಲಕ್ಷ ಕೋಟಿ ರೂಪಾಯಿ (411000,00,00,000 ರೂಪಾಯಿ!), ಅಥವಾ ಅದಕ್ಕಿಂತ ಹೆಚ್ಚು ತೂಗುವ ಅಸಾಮಿ. ಮೂಲಗಳ ಪ್ರಕಾರ ಅಜೀಮ್ ಪ್ರೇಮ್‌ಜೀ ಅಥವಾ ಮುಖೇಶ್ ಅಂಬಾನಿಗಿಂತಲೂ ಹೆಚ್ಚು ಆಸ್ತಿ ಹೊಂದಿರುವ ಭಾರತದ ನಾಲ್ಕನೇ ಅತಿ ಶ್ರೀಮಂತ ವ್ಯಕ್ತಿ.ಭೂಗತ ದೊರೆ ದಾವೂದ್ ಇಬ್ರಾಹಿಂ ಆಪ್ತನಾಗಿರುವ ಈ ಹಸನ್ ಆಲಿ ಹೀಗೆ ಹಣ ಸಂಪಾದಿಸಿದ್ದು ಕುಖ್ಯಾತರಿಗೆ ಸಾಲ ಕೊಡುವ ಮೂಲಕ. ಭಯೋತ್ಪಾದಕ ಸಂಘಟನೆಗಳಿಗೆ ಸಾಲ ನೀಡುವುದು, ಹವಾಲಾ ಸೇರಿದಂತೆ ಅಡ್ಡದಾರಿಗಳನ್ನೆಲ್ಲ ಹೊಕ್ಕು ಸಲೀಸಾಗಿ ಹೊರ ಬಂದಿರುವ ಚಾಣಾಕ್ಷನೀತ. ಇಷ್ಟಾದರೂ, ಈತನಲ್ಲಿ ತೋರಿಕೆಗೆ ಕಾಣುತ್ತಿರುವ ಉದ್ಯಮವೆಂದರೆ ಕುದುರೆ ಲಾಯ ಮತ್ತು ರಿಯಲ್ ಎಸ್ಟೇಟ್!ಬ್ಯಾಂಕುಗಳಿಗೆ ಮೋಸ ಮಾಡುವುದು, ಉದ್ಯಮಿಗಳಿಗೆ ಮೋಸ ಮಾಡುವುದೆಲ್ಲ ಆಲಿಗೆ ತುಂಬಾ ಸುಲಭ. ಹಲವರ ಕೊಲೆ ಆಪಾದನೆಗಳೂ ಈತನ ಮೇಲಿದ್ದವು. ಏನೇ ಕಳ್ಳ ವ್ಯವಹಾರ ಮಾಡಿದರೂ, ಜೈಲಿಗೆ ಹೋದರೂ, ಈಗ ಮಾತ್ರ ಆರಾಮವಾಗಿ ಭಾರತದಲ್ಲೇ ಓಡಾಡಿಕೊಂಡಿದ್ದಾನೆ ಎಂಬುದು ಅಷ್ಟೇ ಸತ್ಯ.