Select Your Language

Notifications

webdunia
webdunia
webdunia
webdunia

ಸೀಟು ಹಂಚಿಕೆ; ಕರುಣಾನಿಧಿ-ಸೋನಿಯಾ ದೋಸ್ತಿ ಕಟ್?

ಕರುಣಾನಿಧಿ
ಚೆನ್ನೈ , ಶನಿವಾರ, 5 ಮಾರ್ಚ್ 2011 (12:12 IST)
ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಡಿಎಂಕೆ-ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಬಿಕ್ಕಟ್ಟು ಮುಂದುವರಿಯುವ ಮೂಲಕ ಕಳೆದ ಏಳು ವರ್ಷಗಳ ಮೈತ್ರಿ ಮುರಿದು ಬೀಳುವ ಸಾಧ್ಯತೆ ಹೆಚ್ಚಾಗಿದ್ದು, ಈ ಬಗ್ಗೆ ಶನಿವಾರ ಪಕ್ಷದ ಮುಖಂಡರ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಂ.ಕರುಣಾನಿಧಿ ತಿಳಿಸಿದ್ದಾರೆ.

ಕಾಂಗ್ರೆಸ್ ಈ ಮೊದಲು 60 ಸೀಟುಗಳಿಗೆ ಒಪ್ಪಿಗೆ ಸೂಚಿಸಿತ್ತು. ಆದರೆ ಇದೀಗ 63 ಸೀಟುಗಳನ್ನು ನೀಡಬೇಕೆಂದು ಬೇಡಿಕೆ ಇಟ್ಟಿದೆ. ತಮಿಳುನಾಡು ವಿಧಾನಸಭಾ ಕ್ಷೇತ್ರದಲ್ಲಿ 63 ಸೀಟುಗಳನ್ನು ನೀಡಬೇಕೆಂಬ ಕಾಂಗ್ರೆಸ್ ಬೇಡಿಕೆ ಸರಿಯಾದುದಲ್ಲ ಎಂದು ಕರುಣಾನಿಧಿ ತಮ್ಮ ಪ್ರಕಟಣೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೀಟು ಹಂಚಿಕೆ ಕುರಿತಂತೆ ಡಿಎಂಕೆ-ಕಾಂಗ್ರೆಸ್ ನಡುವೆ ಮೂರು ಸುತ್ತಿನ ಮಾತುಕತೆ ನಡೆದಿತ್ತಾದರೂ ಅದ್ಯಾವುದು ಫಲಪ್ರದವಾಗಿಲ್ಲ. ಆದರೆ ಎರಡೂ ಪಕ್ಷಗಳು ತಮ್ಮ-ತಮ್ಮ ಪಟ್ಟು ಬಿಟ್ಟುಕೊಡದ ಪರಿಣಾಮ ಅತಂತ್ರ ಸ್ಥಿತಿ ನಿರ್ಮಾಣಗೊಂಡಿದೆ. ಏಪ್ರಿಲ್ 13ರಂದು ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ರಾಜ್ಯದಲ್ಲಿ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಉಭಯ ಪಕ್ಷಗಳ ನಡುವೆ ಆರಂಭಿಕ ಮಾತುಕತೆ ನಡೆದಾಗ, ತಮಗೆ 51 ಸೀಟುಗಳನ್ನು ನೀಡಬೇಕೆಂದು ಕಾಂಗ್ರೆಸ್ ಹೇಳಿತ್ತು. ನಂತರ ಆ ಸಂಖ್ಯೆ 53, 55, 58ಕ್ಕೆ ಏರಿಕೆಯಾಯ್ತು. ಏತನ್ಮಧ್ಯೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಅಜಾದ್ ಎರಡು ದಿನಗಳ ಹಿಂದೆ ತಮ್ಮನ್ನು ಭೇಟಿಯಾದಾಗ ಕಾಂಗ್ರೆಸ್‌ಗೆ 60 ಸೀಟು ನೀಡುವುದಾಗಿ ಹೇಳಿದಾಗ ಅದಕ್ಕೆ ಒಪ್ಪಿಗೆ ಸೂಚಿಸಿದ್ದರು ಎಂದು ಕರುಣಾನಿಧಿ ವಿವರಿಸಿದ್ದಾರೆ.

ಚುನಾವಣೆ ದಿನಾಂಕ ಘೋಷಣೆಯಾದ ನಂತರ ಗುಲಾಂ ನಬಿ ಅಜಾದ್ ತಮ್ಮನ್ನು ಭೇಟಿಯಾಗಿ ಮಾತುಕತೆ ನಡೆಸದೆ ದೆಹಲಿಗೆ ತೆರಳಿದ್ದರು. ಇದೀಗ ಕಾಂಗ್ರೆಸ್ 63 ಸೀಟುಗಳನ್ನು ನೀಡಬೇಕೆಂದು ಬೇಡಿಕೆ ಇಟ್ಟಿದೆ. ಇದು ನಿಜಕ್ಕೂ ಸರಿಯಾದ ಬೇಡಿಕೆಯಲ್ಲ ಎಂದು ಅವರು ತಿಳಿಸಿದ್ದಾರೆ.
2006ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ 132 ಸೀಟುಗಳಲ್ಲಿ, ಉಳಿದ 48 ಕಾಂಗ್ರೆಸ್‌ ಪಕ್ಷಕ್ಕೆ, 31 ಪಿಎಂಕೆ ಹಾಗೂ 23 ಎಡಪಕ್ಷಗಳಿಗೆ ನೀಡಲಾಗಿತ್ತು ಎಂದರು.

ಕೇಂದ್ರದಲ್ಲಿ ಯುಪಿಎ ಸರಕಾರಕ್ಕೆ ಬೆಂಬಲ ನೀಡಿ ಏಳು ವರ್ಷಗಳ ಕಾಲ ಮೈತ್ರಿಯಲ್ಲಿದ್ದ ಡಿಎಂಕೆ-ಕಾಂಗ್ರೆಸ್ ದೋಸ್ತಿ ಕಳಚಿಬೀಳಲಿದೆಯೇ ಅಥವಾ ಸೋನಿಯಾ ಗಾಂಧಿ ಮಧ್ಯಸ್ಥಿಕೆಯಲ್ಲಿ ಬಿಕ್ಕಟ್ಟು ಇತ್ಯರ್ಥವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Share this Story:

Follow Webdunia kannada