ಸಿಬಿಐಗೆ ಬಿಡಿಗಾಸು ಸಿಕ್ಕಿಲ್ಲ-ಮಾಧ್ಯಮದ ವಿಚಾರಣೆ ಬೇಡ: ಕಲ್ಮಾಡಿ
ಪುಣೆ , ಶನಿವಾರ, 5 ಮಾರ್ಚ್ 2011 (18:25 IST)
ನಾನು ಯಾವುದೇ ಅವ್ಯವಹಾರ ನಡೆಸಿಲ್ಲ, ಅಷ್ಟೇ ಅಲ್ಲ ನಾನು ತಪ್ಪು ಮಾಡಿದ್ದೇನೆ ಎಂಬುದಕ್ಕೆ ಯಾವ ಪುರಾವೆಯೂ ಸಿಕ್ಕಿಲ್ಲ. ಸಿಬಿಐ ದಾಳಿ ನಡೆಸಿದಾಗಲೂ ಒಂದೇ ಒಂದು ರೂಪಾಯಿಯನ್ನೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ...ಇದು ಕಾಮನ್ವೆಲ್ತ್ ಗೇಮ್ಸ್ ಹಗರಣದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಸಿಡಬ್ಲ್ಯುಜಿ ಮಾಜಿ ಅಧ್ಯಕ್ಷ ಸುರೇಶ್ ಕಲ್ಮಾಡಿಯ ಮಾತುಗಳು.ಕಾಮನ್ವೆಲ್ತ್ ಗೇಮ್ಸ್ ಆಯೋಜಕ ಸಮಿತಿಯ ಮಾಜಿ ಅಧ್ಯಕ್ಷರಾಗಿರುವ ಕಲ್ಮಾಡಿ ಹಗರಣಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಸರಕಾರ ಹಾಗೂ ತನಿಖಾ ಸಂಸ್ಥೆಗಳು ತಮ್ಮ ಕೆಲಸವನ್ನು ಮಾಡಿವೆ. ಅದಕ್ಕೆ ನಾನು ಸಂಪೂರ್ಣವಾಗಿ ಸಹಕರಿಸಿದ್ದೇನೆ. ಆದರೆ ನನಗೆ ಮಾಧ್ಯಮದ ವಿಚಾರಣೆಯ ಅಗತ್ಯವಿಲ್ಲ ಎಂದು ಪರೋಕ್ಷವಾಗಿ ಟಿವಿ ಚಾನೆಲ್‌ವೊಂದರ ವಿರುದ್ಧ ಟಾಂಗ್ ನೀಡಿದ್ದಾರೆ.ಕಾಮನ್ವೆಲ್ತ್ ಗೇಮ್ಸ್ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ತನಿಖಾ ಸಂಸ್ಥೆಯ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ನಾನು ಗೇಮ್ಸ್ ಮೂಲಕ ವೈಯಕ್ತಿಕವಾಗಿ ಲಾಭ ಮಾಡಿಕೊಂಡಿಲ್ಲ. ಈ ಮಾತನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ನಾನು ಯಾವುದೇ ತನಿಖೆಗೂ ಸಿದ್ದ ಎಂದು ಕಲ್ಮಾಡಿ ತಿಳಿಸಿದ್ದಾರೆ.ಕಾಮನ್ವೆಲ್ತ್ ಗೇಮ್ಸ್ ಭಾರತಕ್ಕೊಂದು ಹೆಮ್ಮೆಯ ವಿಷಯ. ನಾವು ಉತ್ತಮವಾಗಿ ಗೇಮ್ಸ್ ಅನ್ನು ಸಂಘಟಿಸುವ ಮೂಲಕ ಜಾಗತಿಕ ಮಟ್ಟದಲ್ಲಿಯೇ ಶ್ಲಾಘನೆಗೊಳಗಾಗಿದೆ. ಏನೇ ಆರೋಪಗಳಿದ್ದರೂ ಅವೆಲ್ಲದರ ಸತ್ಯಾಂಶ ಜನರಿಗೆ ತಿಳಿಯಲಿದೆ ಎಂದು ಹೇಳಿದರು.ಕಾಮನ್ವೆಲ್ತ್ ಗೇಮ್ಸ್ ಸಂದರ್ಭದಲ್ಲಿ ಭಾರೀ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಕಾಮನ್ವೆಲ್ತ್ ಆಯೋಜಕ ಸಮಿತಿ ಅಧ್ಯಕ್ಷರಾಗಿದ್ದ ಸುರೇಶ್ ಕಲ್ಮಾಡಿ ಅವರನ್ನು ಕೇಂದ್ರ ಸರಕಾರ ಅಮಾನತುಗೊಳಿಸಿತ್ತು. ಅಲ್ಲದೇ ವಿಪಕ್ಷಗಳ ಒತ್ತಡದ ನಂತರ ಕಲ್ಮಾಡಿ ಮನೆಯ ಮೇಲೆ ಸಿಬಿಐ ದಾಳಿ ನಡೆಸಿತ್ತು.