Select Your Language

Notifications

webdunia
webdunia
webdunia
webdunia

ಶೇ. 9 ಸಾಕ್ಷರತೆ ಹೆಚ್ಚಳ: ಭಾರತದಲ್ಲಿ ಶೇ.74 ಮಂದಿ ಅಕ್ಷರಸ್ಥರು

ಭಾರತದ ಸಾಕ್ಷರತೆ
ನವದೆಹಲಿ , ಶುಕ್ರವಾರ, 1 ಏಪ್ರಿಲ್ 2011 (09:14 IST)
ಕಳೆದ ಹತ್ತು ವರ್ಷಗಳಲ್ಲಿ ಭಾರತದ ಸಾಕ್ಷರತೆಯ ಪ್ರಮಾಣ ನಿಧಾನವಾಗಿ ಶೇ.9.2ರಷ್ಟು ಏರಿಕೆ ಕಂಡಿದೆ. ನವದೆಹಲಿಯಲ್ಲಿ ಗುರುವಾರ ಬಿಡುಗಡೆಗೊಳಿಸಿದ 2011ರ ಜನಗಣತಿಯ ತಾತ್ಕಾಲಿಕ ವರದಿಯಲ್ಲಿ ಇದನ್ನು ತಿಳಿಸಲಾಗಿದ್ದು, ಭಾರತದ 121 ಕೋಟಿ ಜನರಲ್ಲಿ ಸಾಕ್ಷರರ ಪ್ರಮಾಣ ಶೇ.74.04.

ಅಂದರೆ ಶೇ.26 ಮಂದಿ ಇಂದಿಗೂ ಅನಕ್ಷರಸ್ಥರು. 2001ರಲ್ಲಿ ಸಾಕ್ಷರತೆಯ ಪ್ರಮಾಣ ಶೇ.64.83 ಇತ್ತು. ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ, ಪುರುಷರಿಗೆ ಹೋಲಿಸಿದರೆ ಮಹಿಳಾ ಸಾಕ್ಷರತೆಯ ಪ್ರಮಾಣ ನೆಗೆದಿರುವುದು. 2001ರಲ್ಲಿ ಶೇ.53.67ರಷ್ಟಿದ್ದ ಮಹಿಳಾ ಸಾಕ್ಷರತೆ ಪ್ರಮಾಣವು ಹತ್ತು ವರ್ಷಗಳಲ್ಲಿ ಶೇ.65.46ಕ್ಕೇರಿದೆ. ಈ ನೆಗೆತಕ್ಕೆ ಹೋಲಿಸಿದರೆ ಪುರುಷರ ಸಾಕ್ಷರತೆಯ ವೃದ್ಧಿಯ ಪ್ರಮಾಣ ಕಡಿಮೆ. ಅಂದರೆ ಶೇ.75.26 ಇದ್ದದ್ದು ಶೇ.82.14ಕ್ಕೆ ಅದು ವೃದ್ಧಿಯಾಗಿದೆ.

ಕೇರಳವು ಶೇ.93.91 ಸಾಕ್ಷರತೆಯೊಂದಿಗೆ ದೇಶದಲ್ಲಿ ನಂ.1 ಸಾಕ್ಷರತಾ ರಾಜ್ಯ ಎಂಬ ಸ್ಥಾನವನ್ನು ಕಾಯ್ದುಕೊಂಡಿದೆ. ಜಿಲ್ಲೆಗಳಲ್ಲಿ ಮಿಜೋರಾಂನ ಸೆರ್ಚಿಪ್ (ಶೇ.98.76) ಮತ್ತು ಐಜ್ವಾಲ್ (ಶೇ. 98.50) ಅಗ್ರಸ್ಥಾನ ಪಡೆದಿವೆ.

ಕೇರಳದ ಬಳಿಕ ಎರಡನೇ ಸ್ಥಾನದಲ್ಲಿರುವುದು ಲಕ್ಷದ್ವೀಪ (ಶೇ.92.28). ಬಿಹಾರವಿನ್ನೂ ಶೇ.63.82 ಸಾಕ್ಷರತೆಯೊಂದಿಗೆ ಈ ಏಣಿಯ ಕೆಳತುದಿಯಲ್ಲಿದೆ. ಅರುಣಾಚಲ ಪ್ರದೇಶ ಶೇ.66.95 ಸಾಕ್ಷರತೆಯೊಂದಿಗೆ ಬಿಹಾರಕ್ಕಿಂತ ಮುಂದಿದೆ.

ಒಟ್ಟು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಕೇರಳ, ಲಕ್ಷದ್ವೀಪ, ಮೀಜೋರಾಂ, ತ್ರಿಪುರ, ಗೋವಾ, ದಾಮನ್-ದಿಯು, ಪುದುಚೇರಿ, ಚಂಡೀಗಢ, ದೆಹಲಿ, ಮತ್ತು ಅಂಡಮಾನ್-ನಿಕೋಬಾರ್‌ಗಳು ಶೇ.85ಕ್ಕಿಂತ ಹೆಚ್ಚಿನ ಸಾಕ್ಷರತೆ ಪ್ರಮಾಣವನ್ನು ಸಾಧಿಸಿವೆ. 2011-12ರ ಅವಧಿಗೆ ಯೋಜನಾ ಆಯೋಗದ ಗುರಿಯೂ ಶೇ.85 ಸಾಕ್ಷರತೆಯಾಗಿತ್ತು.

2001ರಲ್ಲಿ ಪುರುಷ ಮತ್ತು ಮಹಿಳಾ ಸಾಕ್ಷರರ ನಡುವಿನ ಅಂತರ ಶೇ.21.59 ಇದ್ದದ್ದು ಈ ಬಾರಿ ಶೇ.16.68ಕ್ಕೆ ಇಳಿಕೆಯಾಗಿದ್ದು ಸಂತಸಕರ ಸುದ್ದಿ. ಯೋಜನಾ ಆಯೋಗದ 2011-12ರ ಗುರಿ ಈ ಅಂತರವನ್ನು ಶೇ.10ಕ್ಕೆ ಇಳಿಸುವುದು.

Share this Story:

Follow Webdunia kannada