ಶುಭ ಮುಹೂರ್ತದಲ್ಲಿ ವರುಣ್ ಗಾಂಧಿ- ಯಾಮಿನಿ ವಿವಾಹ
ವಾರಣಾಸಿ , ಸೋಮವಾರ, 7 ಮಾರ್ಚ್ 2011 (13:29 IST)
ಗಾಂಧಿ -ನೆಹರು ಕುಟುಂಬದ ಕುಡಿ ಹಾಗೂ ಬಿಜೆಪಿ ಸಂಸದ ಯುವನಾಯಕ ವರುಣ್ ಗಾಂಧಿ ಇಂದು ಯಾಮಿನಿ ರಾಯ್ ಚೌಧರಿಯವರೊಂದಿಗೆ ಕಂಚಿ ಕಾಮಕೋಟಿ ಮಂದಿರದಲ್ಲಿ ಸಂಪ್ರದಾಯಬದ್ಧವಾಗಿ ವಿವಾಹವಾದರು.ಇಂದು ಬೆಳಿಗ್ಗೆ 8ಗಂಟೆ 30 ನಿಮಿಷಕ್ಕೆ ಶುಭ ಮುಹೂರ್ತದಲ್ಲಿ ವಿವಾಹ ಕಾರ್ಯಕ್ರಮ ನೆರವೇರಿತು. ವಿವಾಹದ ನಂತರ ಶಂಕರಾಚಾರ್ಯ ಸ್ವಾಮಿ ಜಯೇಂದ್ರ ಸರಸ್ವತಿ ನವದಂಪತಿಗಳಿಗೆ ಆಶೀರ್ವದಿಸಿದರು. ಮದುವೆ ಸಮಾರಂಭದಲ್ಲಿ ವರುಣ್ ತಂಗಿ ಪ್ರಿಯಾಂಕಾ ಗಾಂಧಿ ಆಗಮಿಸುವ ವದಂತಿಗಳಿದ್ದವು. ಆದರೆ, ಸೋನಿಯಾ ,ರಾಹುಲ್, ಪ್ರಿಯಾಂಕಾ ಗಾಂಧಿ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ. ನೆಹರು -ಗಾಂಧಿ ಪರಿವಾರದಲ್ಲಿ ದಿವಂಗತ ಇಂದಿರಾ ಗಾಂಧಿ ತಾಯಿಯಾದ ಕಮಲಾ ಕೌಲ್ ನಂತರ ಮೊದಲ ಬಾರಿಗೆ ಬ್ರಾಹ್ಮಣ ಕುಟುಂಬದೊಂದಿಗೆ ವಿವಾಹ ನಡೆಯುತ್ತಿದೆ. ವರುಣ್ ಪತ್ನಿ ಯಾಮಿನಿ ಬಂಗಾಲಿ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಸೋನಿಯಾ ಮತ್ತು ಮೇನಕಾ ನಂತರ ಯಾಮಿನಿ ಪ್ರತಿಷ್ಠಿತ ಕುಟುಂಬದ ಮೂರನೇ ಸೊಸೆಯಾಗಿದ್ದಾರೆ. ವರುಣ್ ಮತ್ತು ಯಾಮಿನಿ 2004ರಿಂದ ಗೆಳೆತನವನ್ನು ಹೊಂದಿದ್ದು, ಇದೀಗ ನವದಂಪತಿಗಳಾಗಿದ್ದಾರೆ.ಸುಷ್ಮಾ ಸ್ವರಾಜ್ ಟ್ವಿಟ್ಟರ್‌ನಲ್ಲಿ ವರುಣ್ ಗಾಂಧಿಯವರಿಗೆ ವಿವಾಹದ ಶುಭಾಶಯಗಳನ್ನು ಕೋರಿದ್ದಾರೆ.