ಮಾಜಿ ಮುಖ್ಯಮತ್ರಿ ದಿವಂಗತ ವೈ.ಎಸ್. ರಾಜಶೇಖರರೆಡ್ಡಿ ಅವರ ಪುತ್ರ ಹಾಗೂ ಕಾಂಗ್ರೆಸ್ ಮಾಜಿ ಸಂಸದ ಆಗಿರುವ ವೈ.ಎಸ್. ಜಗನ್ ಮೋಹನ್ ರೆಡ್ಡಿ ಶನಿವಾರ ತಮ್ಮ ನೂತನ ರಾಜಕೀಯ ಪಕ್ಷವನ್ನು ಅಧಿಕೃತವಾಗಿ ಘೋಷಿಸಿದರು.
ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ತನ್ನ ಹುಟ್ಟೂರಾದ ಇಡುಪುಲಪಾಯದಲ್ಲಿ ನೂತನ ಪಕ್ಷದ ಧ್ವಜವನ್ನು ತನ್ನ ತಂದೆಯ ಸಮಾಧಿ ಬಳಿ ಜನನ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ, ಜಗನ್‌ರ ತಾಯಿ ವಿಜಯಲಕ್ಷ್ಮೀ, ಕುಟುಂಬದ ಸದಸ್ಯರು ಸೇರಿದಂತೆ ಪಕ್ಷದ ಅಸಂಖ್ಯಾತ ಕಾರ್ಯಕರ್ತರು ಭಾಗವಹಿಸಿದರು.
ಯುವಕ, ಶ್ರಾಮಿಕ, ರೈತ (ವೈಎಸ್‌ಆರ್) ಕಾಂಗ್ರೆಸ್ ಪಕ್ಷ ಎಂಬ ಹೆಸರಿನ ಪಕ್ಷದ ಪತಾಕೆಯು ಬಿಳಿ, ಹಸಿರು, ನೀಲಿ ಬಣ್ಣಗಳಿಂದ ಕೂಡಿದೆ. ಪಕ್ಷದ ಪತಾಕೆಯ ಮಧ್ಯೆ ವೈಎಸ್ ರಾಜಶೇಖರ್ ರೆಡ್ಡಿ ಅವರ ಚಿತ್ರವಿದೆ.
ತಂದೆಯ ಆಕಸ್ಮಾತ್ ಮರಣದ ನಂತರ ಕಾಂಗ್ರೆಸ್ ಜತೆ ಜಗನ್ ಮುನಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ವಿರುದ್ಧ ತಿರುಗಿಬಿದ್ದಿದ ಜಗನ್ ತಮ್ಮ ಕಡಪ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ನೂತನ ಪಕ್ಷಕ್ಕೆ ಚಾಲನೆ ನೀಡುವ ಮೂಲಕ ಆಂಧ್ರ ಪ್ರದೇಶದಲ್ಲಿ ಹೊಸ ರಾಜಕೀಯ ಅಲೆ ಎಬ್ಬಿಸಿದ್ದಾರೆ.