Select Your Language

Notifications

webdunia
webdunia
webdunia
webdunia

ವಿಧಾನಸಭೆಯಲ್ಲೇ ಸಚಿವನಿಂದ ಶಾಸಕನಿಗೆ ಕಪಾಳಮೋಕ್ಷ

ವೈಎಸ್ಆರ್
ಹೈದರಾಬಾದ್ , ಸೋಮವಾರ, 28 ಮಾರ್ಚ್ 2011 (12:13 IST)
ಸಚಿವರೊಬ್ಬರು ಶಾಸಕ ಮೇಲೆ ಕೈ ಮಾಡುವುದೇ? ಅದೂ ಕಪಾಳಕ್ಕೆ ಬಾರಿಸುವುದೆಂದರೆ..? ಹೌದು, ಭಾರತದ ಸಂಸದೀಯ ಇತಿಹಾಸದಲ್ಲೇ ಇಂತಹ ಪ್ರಸಂಗ ಈ ಹಿಂದೆಂದೂ ನಡೆದಿಲ್ಲ. ಪ್ರಸಕ್ತ ನಡೆದಿರುವುದು ಆಂಧ್ರಪ್ರದೇಶ ವಿಧಾನಸಭೆಯಲ್ಲಿ. ಬಾರಿಸಿರುವುದು ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿಯವರ ಸಹೋದರ ವಿವೇಕಾನಂದ ರೆಡ್ಡಿ. ಪೆಟ್ಟು ತಿಂದಿರುವುದು ತೆಲುಗು ದೇಶಂ ಶಾಸಕ.

ಟಿಡಿಪಿ ಶಾಸಕ ಸಿ.ಎಚ್. ಪ್ರಭಾಕರ್ ಎಂಬವರು, ವೈ.ಎಸ್. ರಾಜಶೇಖರ ರೆಡ್ಡಿಯವರನ್ನು 'ಕಳ್ಳ' ಎಂದು ಹೇಳಿದ್ದೇ ಆಂಧ್ರ ಕಾಂಗ್ರೆಸ್ ಸರಕಾರದ ಕೃಷಿ ಸಚಿವರಾಗಿರುವ ವಿವೇಕಾನಂದ ರೆಡ್ಡಿ ಕೆರಳಲು ಕಾರಣ ಎಂದು ಹೇಳಲಾಗಿದೆ.

ಶಾಸಕನೊಬ್ಬನ ಮೇಲೆ ಇನ್ನೊಂದು ಸದನದ ಸದಸ್ಯನಿಂದ (ವಿವೇಕಾನಂದ ರೆಡ್ಡಿ ವಿಧಾನ ಪರಿಷತ್ ಸದಸ್ಯ) ಹಕ್ಕುಚ್ಯುತಿ ನಡೆದಿರುವುದರಿಂದ ಸಚಿವ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿ ಕೋಲಾಹಲ ಎಬ್ಬಿಸುತ್ತಿದ್ದಂತೆ ಕಲಾಪವನ್ನು ಮುಂದೂಡಲಾಗಿದೆ.

ಇಂದು ನಡೆದದ್ದೇನು?
ಸೋಮವಾರ ಬೆಳಗ್ಗೆ ಒಂಬತ್ತು ಗಂಟೆಗೆ ಆಂಧ್ರಪ್ರದೇಶ ವಿಧಾನಸಭೆಯ ಕಲಾಪ ಆರಂಭವಾಗಿತ್ತು. ಈ ಹಿಂದಿನ ಬಜೆಟ್ ಅಧಿವೇಶನಗಳಲ್ಲಿ ನಡೆದಿರುವಂತೆ ಈ ಬಾರಿಯೂ ಹಲವು ಬೇಡಿಕೆಗಳನ್ನು ಮುಂದಿಟ್ಟು ಟಿಡಿಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಆಡಳಿತ ಪಕ್ಷ ಕಾಂಗ್ರೆಸ್‌ನ ಮೈತ್ರಿ ಪಕ್ಷ ಮಜ್ಲಿಸ್ ಇ ಇತೆಹಾದುಲ್ ಮುಸ್ಲಿಮೀನ್ (ಎಂಐಎಂ) ಕೂಡ ತನ್ನದೇ ಬೇಡಿಕೆಯ ಈಡೇರಿಕಾಗಿ ಗದ್ದಲ ಎಬ್ಬಿಸಿತ್ತು.

'ವೈಎಸ್ಆರ್ ಅವರ ದರೋಡೆಕೋರರ ಗ್ಯಾಂಗ್', 'ವೈಎಸ್ಆರ್ ಕಳ್ಳ' ಮುಂತಾದ ಭಿತ್ತಿಪತ್ರಗಳನ್ನು ಕಳೆದ ಕೆಲವು ದಿನಗಳಿಂದ ಟಿಡಿಪಿ ಶಾಸಕರು ಸದನದಲ್ಲಿ ಪ್ರದರ್ಶಿಸುತ್ತಾ ಬಂದಿದ್ದರು. ಇಂದು ಕೂಡ ಇದು ಪುನರಾವರ್ತನೆಯಾಯಿತು.

ಇದರಿಂದ ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಸಚಿವ ವಿವೇಕಾನಂದ ರೆಡ್ಡಿ ತನ್ನ ಸೀಟಿನಿಂದ ಎದ್ದು ಸೀದಾ ಟಿಡಿಪಿ ಶಾಸಕರ ಆಸನಗಳತ್ತ ತೆರಳಿದರು. ಅಲ್ಲಿ ಹಿರಿಯ ಸದಸ್ಯ ಜಿ. ಮುದ್ದುಕೃಷ್ಣ ನಾಯ್ಡು ಅವರೊಂದಿಗೆ ವಾಗ್ವಾದ ಮಾಡಿದರು.

ನಾಯ್ಡು ಜತೆ ರೆಡ್ಡಿ ವಾಗ್ವಾದ ನಡೆಸುತ್ತಿದ್ದಾಗ ಹಿಂದಿನ ಸಾಲಿನ ಆಸನದಲ್ಲಿದ್ದ ಶಾಸಕ ಪ್ರಭಾಕರ್ ಸಚಿವರತ್ತ ಏನೋ ಹೇಳಿದ್ದರು. ಇದರಿಂದ ಆಕ್ರೋಶಗೊಂಡ ರೆಡ್ಡಿಯವರು ಪ್ರಭಾಕರ್ ಕಪಾಳಕ್ಕೆ ಬಾರಿಸಿದರು. ಎರಡನೇ ಬಾರಿ ಕಪಾಳಕ್ಕೆ ಬಾರಿಸಲು ಯತ್ನಿಸಿದಾಗ ಮುದ್ದುಕೃಷ್ಣ ನಾಯ್ಡು ಅಡ್ಡ ಬಂದು ತಡೆದರು. ಸಚಿವ ನಾಯ್ಡು ಅವರ ಭುಜವನ್ನು ಗಟ್ಟಿಯಾಗಿ ಹಿಡಿದುಕೊಂಡರು.

ಬೆಳವಣಿಗೆಯಿಂದ ಒಂದು ಕ್ಷಣ ಇಡೀ ಸದನ ಸ್ತಬ್ಧವಾಯಿತು. ಹಲವು ಸಚಿವರು ವಿವೇಕಾನಂದ ರೆಡ್ಡಿಯ ವರ್ತನೆಯಿಂದ ಆಘಾತಕ್ಕೊಳಗಾದರು. ಸಚಿವ ಮೊಹಮ್ಮದ್ ಅಹ್ಮೆದುಲ್ಲಾ ಸಯ್ಯದ್ ಸೇರಿದಂತೆ ಹಲವು ಶಾಸಕರು ವಿವೇಕಾನಂದ ರೆಡ್ಡಿಯವರತ್ತ ಬಂದು ಅವರನ್ನು ಬೇರೆಡೆಗೆ ಎಳೆದುಕೊಂಡು ಹೋಗಿ ಸಮಾಧಾನ ಪಡಿಸಿದರು. ತಕ್ಷಣವೇ ಕಲಾಪವನ್ನು ಮುಂದಕ್ಕೆ ಹಾಕಲಾಯಿತು.

ವಿವೇಕಾನಂದ ರೆಡ್ಡಿಯವರ ವಿಧಾನ ಪರಿಷತ್ ಸದಸ್ಯತ್ವದ ಅವಧಿ ನಾಳೆ ಕೊನೆಗೊಳ್ಳಲಿರುವುದರಿಂದ ಮತ್ತು ಕಡಪ ಮತ್ತು ಪುಲಿವೆಂದುಲಾ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವ ಸಾಧ್ಯತೆಗಳು ಹೆಚ್ಚಿವೆ. ಪ್ರಸಕ್ತ ವಿವಾದ ಕೂಡ ಅವರನ್ನು ಸುತ್ತುವರಿದಿರುವುದರಿಂದ ರಾಜೀನಾಮೆ ನೀಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಕಾಂಗ್ರೆಸ್‌ನಿಂದ ಜಗನ್ ಹೊರ ಬಿದ್ದ ಸಂದರ್ಭದಲ್ಲಿ ಪಕ್ಷಕ್ಕೆ ನಿಷ್ಠೆ ತೋರಿಸಿದ್ದ ವಿವೇಕಾನಂದ ರೆಡ್ಡಿಯವರಿಗೆ ಸಚಿವ ಸ್ಥಾನ ಕರುಣಿಸಲಾಗಿತ್ತು. ಇದು ಕಾಂಗ್ರೆಸ್‌ನ ಮನೆ ಒಡೆಯುವ ಕೆಲಸ ಎಂದೂ ಆ ಸಂದರ್ಭದಲ್ಲಿ ಆರೋಪ ಕೇಳಿ ಬಂದಿತ್ತು.

Share this Story:

Follow Webdunia kannada