ಬೆಳಗಾವಿಯಲ್ಲಿ ನಡೆಯುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸದಂತೆ ಕನ್ನಡ ಕುವರಿ ಐಶ್ವರ್ಯಾ ರೈಗೆ ಶಿವಸೇನೆಯ ವರಿಷ್ಠ ಬಾಳಾ ಠಾಕ್ರೆ ಬೆದರಿಕೆ ಹಾಕಿದ್ದಾರೆ. ಸಮ್ಮೇಳನದಲ್ಲಿ ಭಾಗವಹಿಸಿದ್ದೇ ಆದರೆ, ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಅವರು ಹೇಳಿದ್ದಾರೆ ಎಂದು ವರದಿಗಳು ಹೇಳಿವೆ.
ಬೆಳಗಾವಿ ವಿವಾದಿತ ಪ್ರದೇಶ. ಹಾಗಾಗಿ ಅಲ್ಲಿ ನಡೆಯುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಮಹಾರಾಷ್ಟ್ರ ನಿವಾಸಿ ಐಶ್ವರ್ಯಾ ರೈ ಭಾಗವಹಿಸಬಾರದು. ಹಿಂದಿ ಚಿತ್ರರಂಗದಲ್ಲಿ ನೆಲೆ ಪಡೆದುಕೊಂಡಿರುವ ಅವರು ಕನ್ನಡ ಸಮ್ಮೇಳನದಲ್ಲಿ ಪಾಲ್ಗೊಂಡರೆ, ಅದರಿಂದ ಮರಾಠಿಗರಿಗೆ ತೀವ್ರ ನೋವಾಗುತ್ತದೆ ಎಂದು ಠಾಕ್ರೆ ಹೇಳಿದ್ದಾರೆ.
ವಿಶ್ವ ಕನ್ನಡ ಸಮ್ಮೇಳನ ಗಡಿನಾಡು ಬೆಳಗಾವಿಯಲ್ಲಿ ನಡೆಯುತ್ತಿರುವುದೇ ಮರಾಠಿಗರಿಗೆ ನೋವು ತರುವ ವಿಚಾರ. ಹಾಗಾಗಿ ನೀವು ಅದರಲ್ಲಿ ಪಾಲ್ಗೊಳ್ಳಬಾರದು ಎಂದು ಠಾಕ್ರೆ ಬೆದರಿಕೆ ಹಾಕಿದ್ದಾರೆ. ಆದರೆ ಇದನ್ನು ಐಶ್ವರ್ಯಾ ರೈ ಲೆಕ್ಕಿಸುವ ಸಾಧ್ಯತೆಗಳು ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ.
ಠಾಕ್ರೆಯ ಕಿಡಿನುಡಿಗಳ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಬೆಳಗಾವಿಯಲ್ಲಿನ ಮರಾಠಿಗರು ವಿಶ್ವ ಕನ್ನಡ ಸಮ್ಮೇಳನವನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ ಎಂದರು.
ಕೆಲ ದಿನಗಳ ಹಿಂದಷ್ಟೇ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದ ಐಶ್ವರ್ಯಾ ರೈ, ನಾನು ಕನ್ನಡದ ಹುಡುಗಿ; ಕರ್ನಾಟಕದ ಮಗಳು. ಮಹಾರಾಷ್ಟ್ರದ ಸೊಸೆ. ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದರು.
ಇಂದು ಸಂಜೆ ಉದ್ಘಾಟನೆಗೊಳ್ಳಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಐಶ್ವರ್ಯಾ ರೈ ಅವರು ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿನ ರಾಣಿ ಚೆನ್ನಮ್ಮ ವೇದಿಕೆಯಲ್ಲಿ ಸಂಜೆ 5 ಗಂಟೆಗೆ ಇನ್ಫೋಸಿಸ್ ಅಧ್ಯಕ್ಷ ಎನ್.ಆರ್. ನಾರಾಯಣ ಮೂರ್ತಿಯವರಿಂದ ಸಮ್ಮೇಳನಕ್ಕೆ ಚಾಲನೆ ದೊರಕಲಿದೆ.