Select Your Language

Notifications

webdunia
webdunia
webdunia
webdunia

ಲಾಭದ ಹುದ್ದೆ; ಕೊನೆಗೂ ರಾಜ್ಯಪಾಲ ಭಾರದ್ವಾಜ್ ರಾಜೀನಾಮೆ

ಕರ್ನಾಟಕ ರಾಜ್ಯಪಾಲ
ನವದೆಹಲಿ , ಶನಿವಾರ, 12 ಮಾರ್ಚ್ 2011 (12:07 IST)
ಕಳೆದ 15 ವರ್ಷಗಳಿಂದ ಅಕ್ರಮವಾಗಿ ಎರಡು ಹುದ್ದೆಗಳನ್ನು ನಿರ್ವಹಿಸುತ್ತಾ ಬಂದಿದ್ದ ಆರೋಪ ಎದುರಿಸುತ್ತಿದ್ದ ಕರ್ನಾಟಕ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಇದೀಗ ಐಸಿಎಡಿಆರ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಅಂತಾರಾಷ್ಟ್ರೀಯ ಪರ್ಯಾಯ ವ್ಯಾಜ್ಯ ಪರಿಹಾರ ಕೇಂದ್ರ (International Centre for Alternative Dispute Resolution - ಐಸಿಎಡಿಆರ್) ಅಧ್ಯಕ್ಷರಾಗಿ ಕಳೆದ 15 ವರ್ಷಗಳಿಂದ ಭಾರದ್ವಾಜ್ ಕಾರ್ಯ ನಿರ್ವಹಿಸುತ್ತಿದ್ದರು. ಈ ಸಂಸ್ಥೆ ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅದಕ್ಕಿಂತಲೂ ಅಚ್ಚರಿಯ ವಿಚಾರವೆಂದರೆ, ಈ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದದ್ದೇ ಭಾರದ್ವಾಜ್ ಎನ್ನುವುದು.

ಹೌದು, ಅವರು 1995ರಲ್ಲಿ ಕೇಂದ್ರ ಕಾನೂನು ಸಚಿವರಾಗಿದ್ದಾಗ (ಪಿ.ವಿ. ನರಸಿಂಹ ರಾವ್ ಕಾಲದಲ್ಲಿ) ಐಸಿಎಡಿಆರ್ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗಿತ್ತು. ನಂತರ ಅವರೇ ಆ ಸಂಸ್ಥೆಗೆ ಅಧ್ಯಕ್ಷರಾಗಿದ್ದರು. ಅವರ ಮಗ ಅರುಣ್ ಭಾರದ್ವಾಜ್ ಕೂಡ ಈ ಸಂಸ್ಥೆಯ ಅಜೀವ ಸದಸ್ಯ!

ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡ ನಂತರವೂ ಭಾರದ್ವಾಜ್ ಇದಕ್ಕೆ ರಾಜೀನಾಮೆ ಸಲ್ಲಿಸಿರಲಿಲ್ಲ. ಇದನ್ನು ಆಂಗ್ಲ ಪತ್ರಿಕೆಯೊಂದು ಬಹಿರಂಗಪಡಿಸಿತ್ತು. ಬಳಿಕ ಹಿರಿಯ ವಕೀಲ ರಾಜೀವ್ ಧವನ್ ಮುಂತಾದವರು ಕೂಡ ಪ್ರಶ್ನಿಸಿದ್ದರು. ಸಂವಿಧಾನಾತ್ಮಕ ಸ್ಥಾನವಾದ ರಾಜ್ಯಪಾಲರಾಗಿರುವ ಹೊರತಾಗಿಯೂ ಲಾಭದಾಯಕ ಹುದ್ದೆಯಲ್ಲಿ ಮುಂದುವರಿಯುತ್ತಿರುವುದು ಎಷ್ಟು ಸರಿ ಎಂದು ಅವರು ತಗಾದೆ ಎತ್ತಿದ್ದರು.

ಬಹುರಾಷ್ಟ್ರೀಯ ಕಾರ್ಪೋರೇಷನ್ ಸಂಸ್ಥೆಗಳ ನಡುವಿನ ವಿವಾದಗಳನ್ನು ಬಗೆಹರಿಸುವ ಅಧಿಕಾರವನ್ನು ಹೊಂದಿರುವ, ದೆಹಲಿಯಲ್ಲಿ ಕಚೇರಿ ಹೊಂದಿರುವ ಈ ಸಂಸ್ಥೆ ಕೇಂದ್ರ ಸರಕಾರದಿಂದ ಪ್ರತಿ ವರ್ಷ 11 ಕೋಟಿ ರೂಪಾಯಿ ಸಹಾಯಧನ ಪಡೆದುಕೊಳ್ಳುತ್ತಿದೆ. ಅರೆ ನ್ಯಾಯಾಂಗ ಸಂಸ್ಥೆಯಾಗಿ ಇದು ಕಾರ್ಯ ನಿರ್ವಹಿಸುತ್ತಿದೆ. ಇದರ ಅಧ್ಯಕ್ಷ ಸ್ಥಾನದಲ್ಲಿ ಕಳೆದ 15 ವರ್ಷಗಳಿಂದ ಬದಲಾಗದೆ, ಭಾರದ್ವಾಜ್ ಮುಂದುವರಿದಿದ್ದರು.

ಕೊನೆಗೂ ರಾಜೀನಾಮೆ...
ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ತಾನು ರಾಜೀನಾಮೆಗೆ ಸಿದ್ಧ ಎಂದು ಭಾರದ್ವಾಜ್ ಹೇಳಿಕೆ ನೀಡಿದ್ದರು. ಈಗ ಅದರಂತೆ ರಾಜೀನಾಮೆ ಕೊಟ್ಟು ಸಂಸ್ಥೆಯಿಂದ ನಿರ್ಗಮಿಸಿದ್ದಾರೆ.

ಐಸಿಎಡಿಆರ್ ಅಧ್ಯಕ್ಷ ಹುದ್ದೆ ನಿರ್ವಹಿಸಲು ಯಾರಾದರೂ ಮುಂದೆ ಬಂದರೆ ತಾನು ರಾಜೀನಾಮೆ ಕೊಡುತ್ತೇನೆ. ತಾನೇ ಆ ಹುದ್ದೆಯಲ್ಲಿ ಅತಿ ಹೆಚ್ಚು ಕಾಲ ಮುಂದುವರಿಯುತ್ತಿರುವುದರ ಅರಿವು ನನಗಿದೆ ಎಂದು ರಾಜ್ಯಪಾಲರು ಹೇಳಿದ್ದರು. ಈಗ ರಾಜೀನಾಮೆಯೊಂದಿಗೆ ವಿವಾದದಿಂದ ನುಣುಚಿಕೊಳ್ಳಲು ಭಾರದ್ವಾಜ್ ಯತ್ನಿಸಿದ್ದಾರೆ.

Share this Story:

Follow Webdunia kannada