ರಾಹುಲ್ ಗಾಂಧಿ ವಿರುದ್ಧ ಸುಳ್ಳು ಕೇಸು: 50 ಲಕ್ಷ ರೂ. ದಂಡ!
ಲಖ್ನೋ , ಮಂಗಳವಾರ, 8 ಮಾರ್ಚ್ 2011 (09:02 IST)
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ತರುಣಿ ಮತ್ತಾಕೆಯ ಪೋಷಕರನ್ನು ಅಕ್ರಮ ಬಂಧನದಲ್ಲಿಟ್ಟಿದ್ದಾರೆ ಎಂದು ಆರೋಪಿಸಿದ ಸಮಾಜವಾದಿ ಪಕ್ಷದ ಮಾಜಿ ಶಾಸಕರೊಬ್ಬರ ವಿರುದ್ಧ ತೀವ್ರವಾಗಿ ಕೆಂಡ ಕಾರಿರುವ ಅಲಹಾಬಾದ್ ಹೈಕೋರ್ಟು, ಸುಳ್ಳು ದೂರು ನೀಡಿದ್ದಕ್ಕಾಗಿ 50 ಲಕ್ಷ ರೂ. ದಂಡ ವಿಧಿಸಿದೆ.ಅಷ್ಟು ಮಾತ್ರವಲ್ಲದೆ, ಈ ತರುಣಿ ಮತ್ತಾಕೆಯ ಪೋಷಕರ ಪರವಾಗಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ ಮಧ್ಯಪ್ರದೇಶದ ಈ ಶಾಸಕ ಕಿಶೋರ್ ಸಮ್ರಿತೆ ವಿರುದ್ಧ ಸಿಬಿಐ ತನಿಖೆ ನಡೆಸುವಂತೆಯೂ ಹೈಕೋರ್ಟಿನ ಲಖ್ನೋ ಪೀಠವು ಆದೇಶಿಸಿದೆ.ಇಂತಹಾ ಯಾವುದೇ ಘಟನೆಯೂ ನಡೆದಿಲ್ಲ ಎಂದು ಸ್ವತಃ ತರುಣಿ ಸುಕನ್ಯಾ ಎಂಬಾಕೆ ಪೊಲೀಸರ ಮೂಲಕ ಕೋರ್ಟಿನಲ್ಲಿ ಹಾಜರಾಗಿ ಹೇಳಿಕೆ ನೀಡಿದ ಬಳಿಕ ನ್ಯಾಯಾಲಯವು ಸೋಮವಾರ ಈ ಆದೇಶ ನೀಡಿದೆ.ತಾನು ವೆಬ್‌ಸೈಟ್ ಒಂದರಲ್ಲಿ ಮಾಹಿತಿ ನೋಡಿ, ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾಗಿ ಮಾಜಿ ಶಾಸಕ ಕಿಶೋರ್ ಹೇಳಿದ್ದರು. ಇದೀಗ ಆ ವೆಬ್‌ಸೈಟ್ ಮೇಲೂ ಕ್ರಮ ಕೈಗೊಳ್ಳಲು ನ್ಯಾಯಾಲಯ ಆದೇಶಿಸಿದೆ.ಸುಕನ್ಯಾ ಮತ್ತಾಕೆಯ ಹೆತ್ತವರನ್ನು ರಾಹುಲ್ ಗಾಂಧಿ ಅಪಹರಿಸಿ ಗೃಹ ಬಂಧನದಲ್ಲಿ ಇರಿಸಿದ್ದಾರೆ ಎಂದು ಕಿಶೋರ್ ಆರೋಪಿಸಿದ್ದರಲ್ಲದೆ, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಆಗ್ರಹಿಸಿದ್ದರು.ಇದೇ ರೀತಿಯ ಮತ್ತೊಂದು ಅರ್ಜಿಯನ್ನು ಸುಕನ್ಯಾಳ ಸಂಬಂಧಿಕ ಗಜೇಂದ್ರ ಪಾಲ್ ಸಿಂಗ್ ಕೂಡ ಸಲ್ಲಿಸಿದ ಬಳಿಕ ನ್ಯಾಯಾಲಯವು, ಸುಕನ್ಯಾ ಮತ್ತಾಕೆಯ ಪೋಷಕರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಡಿಜಿಪಿಗೆ ಸೂಚಿಸಿತ್ತು.ಶುಕ್ರವಾರ ರಾತ್ರಿ ನ್ಯಾಯಾಲಯದ ಆದೇಶ ಬಂದ ಬಳಿಕ ಡಿಜಿಪಿ ಕರ್ಮವೀರ ಸಿಂಗ್ ಅವರು ಸೋಮವಾರ ತರುಣಿ ಮತ್ತಾಕೆಯ ಪೋಷಕರನ್ನು ಹುಡುಕಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ತನ್ನ ನಿಜವಾದ ಹೆಸರು ಕೀರ್ತಿ ಸಿಂಗ್ ಎಂದೂ, ಬಲರಾಂ ಸಿಂಗ್ ಮತ್ತು ಸುಶೀಲಾ ತನ್ನ ಹೆತ್ತವರೆಂದೂ ಈ ತರುಣಿ ನ್ಯಾಯಾಲಯದಲ್ಲಿ ಸ್ಪಷ್ಟಪಡಿಸಿದಳು. ಬಳಿಕ ನ್ಯಾಯಾಲಯವು ಸ್ವಪ್ರೇರಣೆಯಿಂದ ಕ್ರಮ ಕೈಗೊಂಡು, ಖ್ಯಾತನಾಮರ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸಿದ ಅರ್ಜಿದಾರರಿಗೆ 50 ಲಕ್ಷ ರೂಪಾಯಿ ದಂಡ ವಿಧಿಸಿತಲ್ಲದೆ, ಸಿಬಿಐ ತನಿಖೆಗೂ ಆದೇಶಿಸಿತು.