ನೀವು ಚುನಾವಣೆಯಲ್ಲಿ ಗೆದ್ದಿರೆಂದ ಮಾತ್ರಕ್ಕೆ ಮಾಡಿದ್ದು ತಪ್ಪಲ್ಲ ಎನ್ನುವುದಾದರೆ, ಬೊಫೋರ್ಸ್ ಹಗರಣದ ನಂತರದ ಚುನಾವಣೆಯಲ್ಲಿ ರಾಜೀವ್ ಗಾಂಧಿಯವರು ಸೋತಿರುವುದು ಅಂದರೆ ಅವರು ಅಪರಾಧಿ ಎಂದು ಅರ್ಥವೇ? -- ಹೀಗೆಂದು ಪ್ರಶ್ನೆ ಮಾಡಿರುವುದು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ. ಉತ್ತರಿಸಬೇಕಾದವರು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್.
2008ರ ಕಾಸಿಗಾಗಿ ಓಟು ಪ್ರಕರಣದ ಮತ್ತಷ್ಟು ಹೂರಣಗಳನ್ನು ವಿಕಿಲೀಕ್ಸ್ ಬಹಿರಂಗಪಡಿಸಿದ ನಂತರ ಯುಪಿಎ ಸರಕಾರವನ್ನು ಸಂಸತ್ತಿನಲ್ಲಿ ಬಲವಾಗಿ ಪ್ರಧಾನಿಯವರು ಸಮರ್ಥಿಸಿಕೊಂಡ ರೀತಿಯನ್ನು ತರಾಟೆಗೆ ತೆಗೆದುಕೊಂಡಿರುವ ಆಡ್ವಾಣಿ, ಇದು ಕಣ್ಣೊರೆಸಲು ಮಾಡಿರುವ ಅವಸರದ ವ್ಯರ್ಥ ಕೆಲಸ ಎಂದಿದ್ದಾರೆ. ಚುನಾವಣೆಯ ಗೆಲುವನ್ನು ಅಕ್ರಮಗಳ ಆರೋಪಗಳನ್ನು ಮುಚ್ಚಿ ಹಾಕಲು ಬಳಸಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ವ್ಯಕ್ತಿಯೊಬ್ಬ ಎಸಗಿದ ಕೃತ್ಯವು ಆತ ಚುನಾವಣೆಯಲ್ಲಿ ಗೆದ್ದನೆಂದರೆ ಅದು ನಿರಪರಾಧಿಯೆಂಬ ತೀರ್ಪು ಎಂದು ಅರ್ಥವೇ? ಇದೆಷ್ಟು ಅಸಂಬದ್ಧ ಎಂಬುದನ್ನು ಪ್ರಧಾನ ಮಂತ್ರಿಯವರು ಅರ್ಥ ಮಾಡಿಕೊಳ್ಳುತ್ತಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಹಾಗೊಂದು ವೇಳೆ ಇಂತಹ ಅಸಂಬದ್ಧ ಸಮರ್ಥನೆಯ ಹಾದಿಯಲ್ಲೇ ಸಾಗುವುದಾದರೆ, ಬೊಫೋರ್ಸ್ ಹಗರಣದ ಆರೋಪ ಹೊತ್ತಿದ್ದ ರಾಜೀವ್ ಗಾಂಧಿ 1989ರಲ್ಲಿ ಚುನಾವಣೆಯಲ್ಲಿ ಸೋತಿರುವುದೆಂದರೆ ಅವರು ಅಪರಾಧಿ ಎಂದು ಪರಿಗಣಿಸಬೇಕಾಗುತ್ತದೆ ಎಂದು ಆಡ್ವಾಣಿ ತರ್ಕಬದ್ಧ ವಿಶ್ಲೇಷಣೆ ನಡೆಸಿದ್ದಾರೆ.
ವಿಕಿಲೀಕ್ಸ್ ಬಹಿರಂಗಪಡಿಸಿರುವ ಅಂಶಗಳು ರಾಷ್ಟ್ರ ರಾಜಕಾರಣದಲ್ಲಿ ಸಿಂಗ್ ಅವರ ಸ್ಥಾನವನ್ನು ತೀವ್ರವಾಗಿ ದುರ್ಬಲಗೊಳಿಸಿವೆ ಎಂದೂ ಬಿಜೆಪಿ ಸಂಸದೀಯ ಪಕ್ಷದ ಅಧ್ಯಕ್ಷ ತನ್ನ ಬ್ಲಾಗಿನಲ್ಲಿ ಬರೆದಿದ್ದಾರೆ.
ಪಾಕಿಸ್ತಾನದ ಜತೆಗಿನ ಮಾತುಕತೆಯಂತಹ ವಿಚಾರಗಳಲ್ಲಿ ಸಿಂಗ್ ಅವರನ್ನು ಅವರದ್ದೇ ಸರಕಾರದಲ್ಲಿ ಹೇಗೆ ಮೂಲೆಗುಂಪು ಮಾಡಲಾಗಿತ್ತು ಎನ್ನುವುದನ್ನು ವಿಕಿಲೀಕ್ಸ್ ಬಹಿರಂಗಪಡಿಸಿದೆ. ಸಿಂಗ್ ಮತ್ತು ಅವರ ಆಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್ ಅಭಿಪ್ರಾಯ ಭೇದ ಹೊಂದಿರುವುದು ಇದರಲ್ಲೇ ಬಯಲಾಗಿತ್ತು.
'ಭಯೋತ್ಪಾದನೆ, ಪಾಕಿಸ್ತಾನ, ಜಮ್ಮು-ಕಾಶ್ಮೀರ, ಪ್ರಮುಖ ನಿರ್ಧಾರಗಳಿಗೆ ಸಂಬಂಧಿಸಿ ಸಾರ್ವಜನಿಕ ಅಭಿಪ್ರಾಯವನ್ನು ಗ್ರಹಿಸುವುದಾದರೆ, ಮನಮೋಹನ್ ಸಿಂಗ್ ಅವರ ಅವರ ಸರಕಾರದಲ್ಲಿ ಮಾತ್ರ ಮೂಲೆಗುಂಪಾಗಿರುವುದಲ್ಲ. ಜತೆಗೆ ಜನತೆಯ ಮನಸ್ಸಿನಲ್ಲಿ ಕೂಡ' ಎಂದು ಆಡ್ವಾಣಿ ಅಭಿಪ್ರಾಯಪಟ್ಟಿದ್ದಾರೆ.