Select Your Language

Notifications

webdunia
webdunia
webdunia
webdunia

ಯಡಿಯೂರಪ್ಪ ಸಭೆಗೆ ಬಿಜೆಪಿ ಸಂಸದರ ಸಾಮೂಹಿಕ ಚಕ್ಕರ್

ಬಿಎಸ್ ಯಡಿಯೂರಪ್ಪ
ನವದೆಹಲಿ , ಮಂಗಳವಾರ, 22 ಮಾರ್ಚ್ 2011 (18:37 IST)
ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದೆಹಲಿಯಲ್ಲಿ ಕರೆದಿದ್ದ ಸಭೆಗೆ ರಾಜ್ಯದ ಬಹುತೇಕ ಬಿಜೆಪಿ ಸಂಸದರು ಚಕ್ಕರ್ ಹಾಕಿರುವ ಕುತೂಹಲಕಾರಿ ಬೆಳವಣಿಗೆ ನಡೆದಿದೆ.

ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಮುಖ್ಯಮಂತ್ರಿ ಕರೆದಿದ್ದ ಸಭೆಗೆ ರಾಜ್ಯದ 19 ಬಿಜೆಪಿ ಸಂಸದರಲ್ಲಿ ಕೇವಲ ಎಂಟು ಸಂಸದರು ಮಾತ್ರ ಬಂದಿದ್ದರು. ಅನಂತ್ ಕುಮಾರ್ ಸೇರಿದಂತೆ ಉಳಿದ 11 ಮಂದಿ ನಾಪತ್ತೆಯಾಗಿದ್ದರು.

ಡಿ.ಬಿ. ಚಂದ್ರೇಗೌಡ, ಪಿ.ಸಿ. ಮೋಹನ್, ಜಿ.ಎಸ್. ಬಸವರಾಜು, ಶಿವರಾಮಗೌಡ, ಬಿ.ಎಸ್. ರಾಘವೇಂದ್ರ, ಜನಾರ್ದನ ಸ್ವಾಮಿ, ಅನಂತ್ ಕುಮಾರ್ ಹೆಗ್ಡೆ ಮತ್ತು ಪಿ.ಸಿ. ಗದ್ದಿಗೌಡರ್ ಹಾಗೂ ರಾಜ್ಯಸಭೆಯ ಸದಸ್ಯ ರಾಮ ಜೋಯಿಸ್ ಸಿಎಂ ಸಮಾಲೋಚನೆಗೆ ಬಂದಿದ್ದರು.

ಭಿನ್ನಮತದ ಸೂತ್ರಧಾರಿ-ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್, ರಮೇಶ್ ಜಿಗಜಿಣಗಿ, ಪ್ರಹ್ಲಾದ್ ಜೋಷಿ, ಶಾಂತಾ, ಫಕೀರಪ್ಪ, ನಳಿನ್ ಕುಮಾರ್ ಕಟೀಲು, ಎ. ಸುರೇಶ್ ಚನ್ನಬಸಪ್ಪ, ಎಸ್.ಸಿ. ಉದಾಸಿ, ಜಿ.ಎಂ. ಸಿದ್ಧೇಶ್ವರ್, ಡಿ.ವಿ. ಸದಾನಂದ ಗೌಡ ಮುಂತಾದ ಸಂಸದರು ಸಭೆಯಿಂದ ದೂರವೇ ಉಳಿದರು.

ಸಂಸತ್ ಅಧಿವೇಶನದ ಹಿನ್ನೆಲೆಯಲ್ಲಿ ಬಹುತೇಕ ಸಂಸದರು ದೆಹಲಿಯಲ್ಲೇ ಬೀಡು ಬಿಟ್ಟಿರುವ ಹೊರತಾಗಿಯೂ ಮುಖ್ಯಮಂತ್ರಿ ಕರೆದಿರುವ ಸಭೆಗೆ ಗೈರು ಹಾಜರಾಗುವ ಮೂಲಕ ಬಿಜೆಪಿಯಲ್ಲಿನ ಭಿನ್ನಮತ ತಾರಕಕ್ಕೇರಿರುವುದನ್ನು ಸಾರಿದರು.

ಈ ನಡುವೆ ಇಂದು ರಾತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ನಿಯೋಗವೊಂದು ವರಿಷ್ಠರಿಗೆ ದೂರು ನೀಡಲಿದೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿಯನ್ನು ಬದಲಾಯಿಸಬೇಕು ಎಂಬ ಏಕೈಕ ಅಜೆಂಡಾವನ್ನು ಮುಂದಿಟ್ಟುಕೊಂಡು ಈ ನಿಯೋಗ ದೆಹಲಿಗೆ ಹೋಗುತ್ತಿದೆ ಎಂದು ಮೂಲಗಳು ಹೇಳಿವೆ.

Share this Story:

Follow Webdunia kannada