ಗೋದ್ರಾ ರೈಲು ಹತ್ಯಾಕಾಂಡ ಪ್ರಕರಣದಲ್ಲಿ 'ಪ್ರಮುಖ ಆರೋಪಿ' ಎಂದು ಎಂಟು ವರ್ಷ ಜೈಲುವಾಸ ಅನುಭವಿಸಿ ಇತ್ತೀಚೆಗಷ್ಟೇ ದೋಷಮುಕ್ತಗೊಂಡು ಬಿಡುಗಡೆಗೊಂಡಿರುವ ಮೌಲ್ವಿ ಸಯೀದ್ ಉಮರಜಿ ಸಾಬರಮತಿ ಎಕ್ಸ್‌ಪ್ರೆಸ್ ರೈಲನ್ನು ಯಾವತ್ತೂ ನೋಡೇ ಇಲ್ಲವಂತೆ. ನಾನೊಬ್ಬ ಸಮಾಜ ಸೇವಕ ಎಂದು ಬೇರೆ ಹೇಳಿಕೊಂಡಿದ್ದಾರೆ.
ಸಯೀದ್ ಉಮರಜಿ ಎಂದೇ ಪ್ರಸಿದ್ಧರಾಗಿರುವ ಮೌಲಾನಾ ಹುಸೇನ್ ಇಬ್ರಾಹಿಂ ಉಮರಜಿ ಪ್ರಕಾರ ಅವರನ್ನು ಬಂಧಿಸಿ ಜೈಲಿನಲ್ಲಿಡಲು ಕಾರಣ, ಅಮಾಯಕ ಮುಸ್ಲಿಮರ ಪರವಾಗಿ ದನಿಯೆತ್ತಿರುವುದು ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಆರೋಪಗಳನ್ನು ಮಾಡಿರುವುದು. ಅದಕ್ಕಾಗಿ ಸುಳ್ಳು ಕೇಸನ್ನು ಹಾಕಿ ಜೈಲಿಗೆ ಕಳುಹಿಸಲಾಗಿತ್ತು.
'ನಾನು ಯಾವತ್ತೂ ಸಾಬರಮತಿ ಎಕ್ಸ್‌ಪ್ರೆಸ್ ರೈಲನ್ನು ನೋಡಿದವನಲ್ಲ. ಯಾಕೆಂದರೆ ಅದು ಗೋದ್ರಾದಿಂದ ಹೋಗುತ್ತಿದ್ದುದು ರಾತ್ರಿ ಹೊತ್ತು' ಎಂದು 65ರ ಹರೆಯದ ಉಮರಜಿ ಸಂದರ್ಶನದಲ್ಲಿ ಹೇಳಿದ್ದಾರೆ.
ನಾನೊಬ್ಬ ಸಮಾಜ ಸೇವಕ. 1993ರ ಮಹಾರಾಷ್ಟ್ರದ ಲಾತೂರ್ ಮತ್ತು 2001ರ ಗುಜರಾತ್‌ನ ಕಚ್ ಭೂಕಂಪ ಸಂಭವಿಸಿದಾಗ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೆ. ಗುಜರಾತಿನಲ್ಲಿ 3,500ಕ್ಕೂ ಹೆಚ್ಚು ಮಂದಿಗೆ ನಿರಾಶ್ರಿತರ ಶಿಬಿರ ತೆರೆದಿದ್ದೆ. ಗೋದ್ರಾ ಪ್ರಕರಣದಲ್ಲಿ ಬಂಧನಕ್ಕೊಳಗಾದವರ ಯೋಗ-ಕ್ಷೇಮ ವಿಚಾರಣೆಯನ್ನೂ ನಾವು ನಡೆಸಿದ್ದೆವು ಎಂದು ಉಮರಜಿ ಹೇಳಿಕೊಂಡರು.
ಅಹಮದಾಬಾದ್‌ನಿಂದ 115 ಕಿಲೋಮೀಟರ್ ದೂರದಲ್ಲಿರುವ ಗೋದ್ರಾದಲ್ಲಿ ಉಮರಜಿ ಶೈಕ್ಷಣಿಕ ಸಂಸ್ಥೆಗಳನ್ನು ಕೂಡ ನಡೆಸುತ್ತಿದ್ದಾರೆ.
2002ರ ಫೆಬ್ರವರಿ 27ರಂದು ಗೋದ್ರಾ ಸಮೀಪ ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ಎಸ್6 ಬೋಗಿಗೆ ಮುಸ್ಲಿಮರ ಗುಂಪೊಂದು ಬೆಂಕಿ ಹಚ್ಚಿತ್ತು. ಇದರಿಂದಾಗಿ ಅಯೋಧ್ಯೆಯಿಂದ ವಾಪಸ್ಸಾಗುತ್ತಿದ್ದ 59 ಕರಸೇವಕರು ಜೀವಂತವಾಗಿ ಸುಟ್ಟು ಹೋಗಿದ್ದರು. ಈ ಸಂಬಂಧ ತೀರ್ಪನ್ನು ಇತ್ತೀಚೆಗಷ್ಟೇ ನ್ಯಾಯಾಲಯವೊಂದು ನೀಡಿತ್ತು.
ಇದೇ ಹಿನ್ನೆಲೆಯಲ್ಲಿ ಗುಜರಾತಿನಾದ್ಯಂತ ಭಾರೀ ಕೋಮುಗಲಭೆಗಳು ನಡೆದಿದ್ದವು. ಪರಿಣಾಮ ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಸಾವಿರಾರು ಮಂದಿ ಗಾಯಗೊಂಡಿದ್ದರೆ, ಇಷ್ಟೇ ಪ್ರಮಾಣದಲ್ಲಿ ನಿರಾಶ್ರಿತರಾಗಿದ್ದರು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಉಮರಜಿ ಬಂಧನವಾಗಿತ್ತು. ಆದರೆ ಪುರಾವೆಗಳು ಸಿಗದೇ ಇರುವ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಅವರು ಖುಲಾಸೆಗೊಂಡು ಬಿಡುಗಡೆಯಾಗಿದ್ದಾರೆ.
ಈ ಬಗ್ಗೆ ಅವರಲ್ಲಿ ಸಾಕಷ್ಟು ನೋವುಗಳಿವೆ. ನನ್ನ ಜೀವನದ ಅಮೂಲ್ಯ ಎಂಟು ವರ್ಷಗಳನ್ನು ನಾನು ಕಳೆದುಕೊಂಡಿದ್ದೇನೆ. ಅದನ್ನು ಯಾರಿಂದಲೂ ವಾಪಸ್ ನೀಡುವುದು ಸಾಧ್ಯವಿಲ್ಲ. ನಾನು ಮತ್ತು ನನ್ನ ಕುಟುಂಬಕ್ಕೆ ಭಾರೀ ಮಾನಸಿಕ ಹಿಂಸೆ ನೀಡಲಾಯಿತು ಎಂದು ದಿಯೋಬಂದ್‌ನಿಂದ ಪದವಿ ಪಡೆದಿರುವ ಉಮರಜಿ ವಿವರಿಸಿದ್ದಾರೆ.
ನಮ್ಮ ಮಹಿಳೆಯರು ಸಾಮಾನ್ಯವಾಗಿ ಮನೆಯಿಂದ ಹೊರಗೆ ಬರುವುದಿಲ್ಲ. ಆದರೆ ನನ್ನ ಬಂಧನದ ನಂತರ ತುಂಬಾ ದಿನಗಳ ಕಾಲ ನನ್ನ ಹೆಂಡತಿ ಮನೆಯಲ್ಲಿ ಇರಲಿಲ್ಲ. ನನ್ನ ಮಕ್ಕಳು ಭೀತಿಯಿಂದಲೇ ದಿನಗಳನ್ನು ದೂಡಿದರು. ಈಗ ಎಲ್ಲವೂ ಒಂದು ಹಂತಕ್ಕೆ ಬಂದಿದೆ. ನರೇಂದ್ರ ಮೋದಿ ಸರಕಾರವನ್ನು ದೂಷಿಸಿದ್ದಕ್ಕೆ ನನಗೆ ಈ ಗತಿ ಬಂದಿತ್ತು ಎಂದು ಆರೋಪಿಸಿದ್ದಾರೆ.