26/11ರ ಮುಂಬೈ ದಾಳಿಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪಾಕಿಸ್ತಾನದಿಂದ ಬರುವ ತನಿಖಾ ತಂಡಕ್ಕೆ ಅವಕಾಶ ನೀಡಲಾಗುತ್ತದೆ. ಆದರೆ ಅದಕ್ಕೆ ಮೊದಲು, ದಾಳಿಗೆ ಸಂಬಂಧಿಸಿ ಕೆಲವು ಶಂಕಿತರ ವಿಚಾರಣೆಗಾಗಿ ಭಾರತೀಯ ತಂಡವನ್ನು ಅಲ್ಲಿಗೆ ಕಳುಹಿಸುವ ನಮ್ಮ ಕೋರಿಕೆಗೆ ಸಂಬಂಧಿಸಿ ಪಾಕಿಸ್ತಾನದಿಂದ ಉತ್ತರವನ್ನು ಕಾಯುತ್ತಿದ್ದೇವೆ ಎಂದು ಗೃಹ ಸಚಿವ ಪಿ.ಚಿದಂಬರಂ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಮುಂಬೈ ನರಮೇಧದಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಲಾಗಿರುವ ಕೆಲವರನ್ನು ಪ್ರಶ್ನಿಸಲು ಭಾರತದ ತಂಡಕ್ಕೆ ಅನುಮತಿ ನೀಡುವಂತೆ ಪಾಕಿಸ್ತಾನವನ್ನು ಕೋರಿದ್ದೇವೆ ಎಂದರು.
ಇದಕ್ಕಾಗಿ ಉತ್ತರ ನಿರೀಕ್ಷಿಸುತ್ತಿದ್ದು, ಪಾಕಿಸ್ತಾನವು ಕೇಳುತ್ತಿರುವ ದಾಖಲೆಗಳನ್ನು ಕೆಲವೇ ದಿನಗಳಲ್ಲಿ ಅದಕ್ಕೆ ಒದಗಿಸುವುದಾಗಿ ತಿಳಿಸಿದ ಗೃಹ ಸಚಿವರು, ಪಾಕಿಸ್ತಾನವು ಕಳುಹಿಸುತ್ತಿರುವ ತನಿಖಾ ತಂಡಕ್ಕೆ ಭಾರತವು ಈಗಾಗಲೇ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದರು.
ಹೇಳಿಕೆಗಳನ್ನು ದಾಖಲಿಸಿಕೊಂಡ ತನಿಖಾಧಿಕಾರಿ, ಮ್ಯಾಜಿಸ್ಟ್ರೇಟರು ಹಾಗೂ ಪೋಸ್ಟ್ ಮಾರ್ಟಂ ಮಾಡಿದ ಕೆಲವು ವೈದ್ಯರು ನೀಡುವ ಸಾಕ್ಷ್ಯಾಧಾರಗಳನ್ನು ದಾಖಲಿಸಿಕೊಳ್ಳಲು ನಾವು ಈಗಾಗಲೇ ಪಾಕಿಸ್ತಾನದ ಆಯೋಗಕ್ಕೆ ಒಪ್ಪಿಗೆ ಸೂಚಿಸಿದ್ದೇವೆ. ಅವರಿಂದ ನಮ್ಮ ಪ್ರಶ್ನೆಗೆ ಉತ್ತರದ ನಿರೀಕ್ಷೆಯಲ್ಲಿದ್ದೇವೆ ಎಂದು ಚಿದಂಬರಂ ಹೇಳಿದರು.