ಮಹಿಳಾ ಸಬಲೀಕರಣದ ಮಹತ್ವದ ಹೆಜ್ಜೆಯೊಂದರಲ್ಲಿ ಮಹಾರಾಷ್ಟ್ರ ಸಂಪುಟವು, ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಮಸೂದೆಯೊಂದಕ್ಕೆ ಬುಧವಾರ ಅಂಗೀಕಾರ ನೀಡಿತು.
ಇದು ಕಾನೂನು ರೂಪ ಪಡೆಯಬೇಕಿದ್ದರೆ, ಅದನ್ನು ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಮಂಡಿಸಿದ ಬಳಿಕ, ಸದನದ ಅಂಗೀಕಾರ ಪಡೆಯಬೇಕಾಗಿದೆ. ಕೇಂದ್ರವು ಈಗಾಗಲೇ ಮಹಿಳೆಯರಿಗೆ ಶೇ.50 ಮೀಸಲಾತಿ ನೀಡಲು ಒಪ್ಪಿಗೆ ಸೂಚಿಸಿದೆ ಮತ್ತು ರಾಜ್ಯ ಸರಕಾರವು ಅದನ್ನು ಪಾಲಿಸಲಿದೆ ಎಂದು ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ತಿಳಿಸಿದ್ದಾರೆ.
ಸದ್ಯಕ್ಕೆ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಇದ್ದು, ಅದನ್ನು ಶೇ.50ಕ್ಕೇರಿಸಬೇಕು ಎಂದು ಕಾಂಗ್ರೆಸ್ ಮಿತ್ರ ಪಕ್ಷವಾಗಿರುವ ಎನ್‌ಸಿಪಿ ಆಗ್ರಹಿಸುತ್ತಲೇ ಬಂದಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.
ಕರ್ನಾಟಕದಲ್ಲಿ ಈಗಾಗಲೇ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50ರ ಮೀಸಲಾತಿ ಜಾರಿಯಲ್ಲಿದೆ.